ಕೇತನ್ ಹತ್ಯೆಗೂ 2 ದಶಕಗಳ ಹಿಂದೆ ನಡೆದ ಬೆಂಗಳೂರು ಕೊಲೆಗೂ ಇದೆ ಸಾಮ್ಯತೆ; ರಿಂಗ್ ರೋಡ್ ಶುಭಾ ಪ್ರಕರಣ ಮುನ್ನೆಲೆಗೆ ಬಂದಿದ್ದೇಕೆ?
Ring Road Murder Case: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆ ಮೇಲಿನಿಂದ ಸುಮಾರು 350 ಅಡಿಯ ಆಳದ ಕಂದಕಕ್ಕೆ ತಳ್ಳಿ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ತಳ್ಳಿ ಕೊಲೆ ಮಾಡಿದ ಪ್ರಕರಣಕ್ಕೂ 2003ರಲ್ಲಿ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ. ಅದೇನು ಎನ್ನುವ ವಿವರ ಇಲ್ಲಿದೆ.
ಶುಭಾ ಮತ್ತು ಸಿಯಾ ಗೋಯಲ್ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ. 28: ಮಹಾರಾಷ್ಟ್ರದ ಪುಣೆಯ ಕೊಲೆ ಪ್ರಕರಣ (Pune Man Murder Case) ಸದ್ಯ ದೇಶದ ಗಮನ ಸೆಳೆದಿದೆ. ಪ್ರಕರಣ ನಡೆದು ವಾರ ಕಳೆದರೂ ಅದರ ಕುರಿತಾದ ಚರ್ಚೆ ನಿಂತಿಲ್ಲ. 600 ಕೋಟಿ ರುಪಾಯಿ ಆಸ್ತಿ ಹೊಂದಿರುವ ಶ್ರೀಮಂತ ಉದ್ಯಮಿಯ ಪುತ್ರ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (Siya Goyal) ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆ ಮೇಲಿನಿಂದ ಸುಮಾರು 350 ಅಡಿಯ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾಳೆ. ತನ್ನ ಪ್ರಿಯಕರ ಚೇತನ್ ಚೌಧರಿ (Chetan Chaudhary) ಜತೆ ಸೇರಿ ಈ ಕೃತ್ಯ ಎಸಗಿದ್ದಾಳೆ. ಕೇತನ್ ಜತೆ ಮದುವೆಯಾಗುವುದು ಇಷ್ಟವಿಲ್ಲದ ಕಾರಣ ಆಕೆ ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಕೇತನ್ ಫೋಟೊ ತೆಗೆಯುವ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ನಂಬಿಸಿದ್ದಳು. ಬಳಿಕ ಆಕೆಯ ಹೇಳಿಕೆಯ ಮೇಲಿನ ವೈರುಧ್ಯ ಗಮನಿಸಿ ತನಿಖೆ ನಡೆಸಿದಾಗ ಸತ್ಯ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆಯನ್ನು ಸುಮಾರು 2 ದಶಕಗಳ ಹಿಂದ ಬೆಂಗಳೂರಿನಲ್ಲಿ ನಡೆದ ಕೊಲೆಯ ಜತೆಗೆ ಹೋಲಿಸಲಾಗುತ್ತಿದೆ. ಅಂದು ಏನಾಗಿತ್ತು?
ರಿಂಗ್ ರೋಡ್ ಶುಭಾ ಪ್ರಕರಣ ಎಂದೇ ಕರೆಯಿಸಿಕೊಳ್ಳುವ ಈ ಘಟನೆ ನಡೆದಿದ್ದು 2003ರಲ್ಲಿ. ಅಂದು ಶುಭಾ ತನ್ನ ಭಾವಿ ಪತಿಯನ್ನು ಸಿಯಾ ಗೋಯಲ್ ರೀತಿಯಲ್ಲೇ ಸುತ್ತಾಟಕ್ಕೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ಧಳು.
ಆಗ ರಾಜ ರಘುವಂಶಿ ಈಗ ಕೇತನ್ ಅಗರ್ವಾಲ್: ಪ್ರವಾಸಿ ತಾಣದಲ್ಲಿ ಸಂಗಾತಿಯಿಂದಲೇ ಕೊಲೆಯಾದ ನತದೃಷ್ಟರು
ಏನಿದು ರಿಂಗ್ ರೋಡ್ ಶುಭಾ ಪ್ರಕರಣ?
ಅದು 2003ನೇ ಇಸವಿ. ಆಗಷ್ಟೆ ಬೆಂಗಳೂರಿನಲ್ಲಿ ಐಟಿ ಕಂಪನಿಗಳು ತಲೆ ಎತ್ತತೊಡಗಿದ್ದವು. ಬೆಂಗಳೂರು ನಿವಾಸಿಯಾದ ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ. ಗಿರೀಶ್ ಅವರೊಂದಿಗೆ ನೆರೆಹೊರೆಯ ನಿವಾಸಿ ಅಡ್ವೊಕೇಟ್ ಶುಭಾ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಐದು ತಿಂಗಳ ನಂತರ ವಿವಾಹ ನಿಗದಿಯಾಗಿತ್ತು. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಮನೆಯವರಿಗೆ ಗೊತ್ತಿರದ ವಿಚಾರವೊಂದಿತ್ತು. ಅದೇ ಶುಭಾ ಪ್ರೀತಿಸುತ್ತಿದ್ದ ಸಂಗತಿ.
ಹೌದು, ಶುಭಾ ಬೆಂಗಳೂರಿನ ಬಿ.ಎಂ.ಎಸ್. ಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ತನ್ನ ಕಿರಿಯ ಸಹಪಾಠಿಯಾಗಿದ್ದ ಅರುಣ್ ವರ್ಮನನ್ನು ಪ್ರೀತಿಸಿದ್ದಳು. ಆಕೆಯ ಇಷ್ಟವಿಲ್ಲದೆ ಮನೆಯವರು ಎಂಜಿನಿಯರ್ ಗಿರೀಶ್ ಜತೆ ಮದುವೆ ನಿಗದಿಪಡಿಸಿದ್ದರು. ಮದುವೆ ಇಷ್ಟಪಡದ ಶುಭಾ ಅಪಾಯಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಳು. ಗಿರೀಶ್ನನ್ನು ಕೊಲೆ ಮಾಡುವ ಸಂಚು ರೂಪಿಸಿದಳು.
ಅದರಂತೆ 2003ರ ಡಿಸೆಂಬರ್ 3ರಂದು ಶುಭಾ ಡೆಡ್ಲಿ ಉಪಾಯ ಮಾಡಿದಳು. ರಾತ್ರಿ ಊಟದ ನೆಪದಲ್ಲಿ ಗಿರೀಶ್ ಅವರನ್ನು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದಿಂದ ಏರುವ ಮತ್ತು ಇಳಿಯುವ ವಿಮಾನಗಳನ್ನು ನೋಡಲು ಜನ ಜಮಾಯಿಸುತ್ತಿದ್ದ ಇಂದಿರಾನಗರ-ಕೋರಮಂಗಲದ ಬಳಿಯ ರಿಂಗ್ ರೋಡ್ ಜಂಬೋ ಪಾಯಿಂಟ್ ಬಳಿಗೆ ಕರೆ ತಂದಳು. ಅರುಣ್ ವರ್ಮ ಗೊತ್ತು ಮಾಡಿದ್ದ ರೌಡಿ ವೆಂಕಟೇಶ್ ಹಿಂದಿನಿಂದ ಬಂದು ಗಿರೀಶ್ ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಿರೀಶ್ ಮೃತಪಟ್ಟರು. ಡಕಾಯಿತರು ದಾಳಿ ನಡೆಸಿದ್ದರು ಎಂದು ಶುಭಾ ಕಥೆ ಕಟ್ಟಿದ್ದಳು. ಆದರೆ ಆಕೆಯ ವರ್ತನೆಯಲ್ಲಿ ಅನುಮಾನ ಮೂಡಿತ್ತು. ಬಳಿಕ ಪ್ರಕರಣ ಹೊರ ಬಂದು ಶುಭಾ, ಅರುಣ್ ವರ್ಮ ಸೇರಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿ ಜೀವಾವಧಿ ಶಿಕ್ಷೆ ಲಭಿಸಿತು.
ತೆರೆಮೇಲೆ ಮೂಡಿದ ರಿಂಗ್ ರೋಡ್ ಶುಭಾ ಜೀವನ
ಅಚ್ಚರಿ ಎಂದರೆ ರಿಂಗ್ ರೋಡ್ ಶುಭಾ ಜೀವನ, ಅಪರಾಧವನ್ನು ಆಧರಿಸಿ ಸ್ಯಾಂಡಲ್‌ವುಡ್‌ನಲ್ಲಿ ಚಿತ್ರವೊಂದು ತಯಾರಾಗಿದೆ. ʼರಿಂಗ್ ರೋಡ್ʼ ಹೆಸರಿನ ಈ ಚಿತ್ರ 2015ರಲ್ಲಿ ಬಿಡುಗಡೆಯಾಗಿದ್ದು, ವಿಜಯ್, ನಿಖಿತಾ ಮತ್ತಿತರರು ನಟಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.