ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆ ಜಾಮ್

ಮೇ 7ರಿಂದ 10ರವರೆಗೆ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನೆ ಮತ್ತು ಮಿಲಿಟರಿ ಗುರಿಗಳ ಮೇಲೆ ಭಾರತೀಯ ವಾಯುಪಡೆ ನಿಖರವಾಗಿ ದಾಳಿ ನಡೆಸಿದೆ. ಇಷ್ಟು ಮಾತ್ರವಲ್ಲ ಮೇ 7ರಂದು ನಡೆಸಿದ 23 ನಿಮಿಷಗಳ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು (ಎಡಿ) ಕೂಡ ಜಾಮ್ ಮಾಡಲಾಗಿತ್ತು ಎಂದು ಸರ್ಕಾರ ತಿಳಿಸಿದೆ.

ಪಾಕ್ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆ ಜಾಮ್

ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆ (Indian Air Force) ಪಾಕಿಸ್ತಾನದ(Pakistan) ಒಳಗೆ ನುಗ್ಗಿ ಉಗ್ರರ ನೆಲೆಗಳ (Terror camp) ಮೇಲೆ ನಿಖರವಾಗಿ ದಾಳಿ ನಡೆಸಿದ್ದು, ಈ ಮೂಲಕ ಭಾರತದ ಮಿಲಿಟರಿ (India's military) ಸಾಮರ್ಥ್ಯಗಳನ್ನು ವಿಶ್ವಕ್ಕೆ ಪ್ರದರ್ಶಿಸಿದೆ. ಮೇ 7ರಿಂದ 10ರವರೆಗೆ ನಡೆದ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ (POK) ಭಯೋತ್ಪಾದನೆ ಮತ್ತು ಮಿಲಿಟರಿ ಗುರಿಗಳ ಮೇಲೆ ಭಾರತೀಯ ವಾಯುಪಡೆ ನಿಖರವಾಗಿ ದಾಳಿ ನಡೆಸಿದೆ. ಇಷ್ಟು ಮಾತ್ರವಲ್ಲ ಮೇ 7ರಂದು ನಡೆಸಿದ 23 ನಿಮಿಷಗಳ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಬಳಸುವ ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು (Chinese air defences) ಕೂಡ ಜಾಮ್ ಮಾಡಲಾಗಿತ್ತು ಎಂದು ಸರ್ಕಾರ ತಿಳಿಸಿದೆ.

ಮೇ 11ರಂದು ಪಾಕಿಸ್ತಾನದೊಂದಿಗೆ ಕದನ ವಿರಾಮ ಒಪ್ಪಂದ ನಡೆಸಿದ ಬಳಿಕ ಪಶ್ಚಿಮ ಗಡಿಯಲ್ಲಿನ ಭದ್ರತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕರೆದ ಭದ್ರತಾ ಸಂಪುಟ ಸಮಿತಿ ಸಭೆಯಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಿರುವುದಾಗಿ ತಿಳಿಸಿದೆ.

ಪಾಕಿಸ್ತಾನ ಬಳಸುವ ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಜಾಮ್ ಮಾಡಲಾಗಿದೆ. ಇದರಿಂದ ರಾಡಾರ್ ಮತ್ತು ಸಂವಹನ ಗೊಂದಲಮಯವಾಗಿದ್ದು, ಸರಿಯಾದ ಸಂವಹನಕ್ಕೆ ಅಡ್ಡಿಯಾಗಿದೆ. ಕೇವಲ 23 ನಿಮಿಷಗಳಲ್ಲಿ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗಿದೆ. ಇದು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬುಧವಾರ ತಿಳಿಸಿದೆ.

ಮೇ 7ರಂದು ಮುಂಜಾನೆ ಭಾರತೀಯ ವಾಯುಪಡೆ ಮತ್ತು ಸೇನೆಯು ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದು ಅತ್ಯಂತ ಕಠಿಣ ಸಮಯವಾಗಿತ್ತು. ಗುಪ್ತಚರ ಇಲಾಖೆಯ ಕಣ್ತಪ್ಪಿಸಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಕೇವಲ ಭಯೋತ್ಪಾದಕ ಚಟುವಟಿಕೆ ಕೇಂದ್ರಗಳನ್ನು ಮಾತ್ರ ಗುರಿ ಮಾಡಲಾಗಿತ್ತು. ಇದು ಅತ್ಯಂತ ಎಚ್ಚರಿಕೆಯಿಂದ ಮಾಡಲಾದ ಕಾರ್ಯಾಚರಣೆಯಾಗಿದೆ. ಯಾವುದೇ ರೀತಿಯಲ್ಲಿ ಭಾರತೀಯ ಸ್ವತ್ತುಗಳಿಗೆ ನಷ್ಟವಾಗದಂತೆ ಇದನ್ನು ನಡೆಸಲಾಗಿದೆ. ಇದು ಪರಿಪೂರ್ಣವಾದ ಯೋಜನೆ ಮೂಲಕವೇ ನಡೆಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಸಲಾದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಸುಮಾರು 100 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರನ್ನು ಕೊಲ್ಲಲಾಗಿತ್ತು. 26/11 ಮುಂಬೈ ದಾಳಿಯ ಅನಂತರ ಇದು ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ.

ಕದನ ವಿರಾಮದ ಬಳಿಕ ಏನೆಲ್ಲಾ ನಡೆಯಿತು ?

ಆಪರೇಷನ್ ಸಿಂದೂರ್ ಬಳಿಕ ಎರಡು ದೇಶಗಳ ಗಡಿ ಭಾಗದಲ್ಲಿ ವಾತಾವರಣ ಉದ್ವಿಗ್ನಗೊಂಡಿತ್ತು. ಮೇ 10ರಂದು ಕದನ ವಿರಾಮ ಘೋಷಣೆ ಮಾಡಲಾಯಿತು. ಆದರೆ ಬಳಿಕವೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಪ್ರಯತ್ನವನ್ನು ನಡೆಸಿದೆ. ಭಾರತೀಯ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮತ್ತು ಪಾಕಿಸ್ತಾನದ ಅಧಿಕಾರಿಗಳು ಶಾಂತಿ ಒಪ್ಪಂದಕ್ಕೆ ಬದ್ದರಾದ ಬಳಿಕ ಸಿಸಿಎಸ್ ಸಭೆ ನಡೆಯಿತು. ಅಂದಿನಿಂದ ಎರಡೂ ರಾಷ್ಟ್ರಗಳ ಕಡೆಯಿಂದ ಯಾವುದೇ ಗುಂಡಿನ ದಾಳಿಯಾಗಿಲ್ಲ. ಆದರೆ ಸೋಮವಾರ ರಾತ್ರಿ ಭಾರತೀಯ ನಗರಗಳ ಮೇಲೆ ಕೆಲವು ಡ್ರೋನ್‌ಗಳು ಹಾರಾಟ ನಡೆಸಿದ್ದು, ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಲು ಪ್ರಯತ್ನಿಸಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಆಪರೇಷನ್ ಸಿಂದೂರ್ ಪರಿಣಾಮ

ಆಪರೇಷನ್‌ ಸಿಂದೂರ್‌ ಮೂಲಕ ಸುಮಾರು 100 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಪಶ್ಚಿಮ ಗಡಿಯಲ್ಲಿ ಸರಣಿ ದಾಳಿ ಮತ್ತು ಪ್ರತಿದಾಳಿಗಳು ಉಂಟಾಯಿತು. ಇದರಲ್ಲಿ ಫೈಟರ್ ಜೆಟ್‌, ಕ್ಷಿಪಣಿ, ಸಶಸ್ತ್ರ ಡ್ರೋನ್‌, ಉಗ್ರ ಫಿರಂಗಿ ಮತ್ತು ರಾಕೆಟ್ ದ್ವಂದ್ವ ಯುದ್ಧಗಳು ಸೇರಿವೆ.

ಮೇ 9 ಮತ್ತು 10ರಂದು ಮಧ್ಯರಾತ್ರಿ ಕರಾಚಿಯ ರಫೀಕಿ, ಮುರಿದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್, ಚುನಿಯನ್, ಪಸ್ರೂರ್, ಸಿಯಾಲ್ಕೋಟ್, ಸ್ಕಾರ್ಡು, ಸರ್ಗೋಧಾ, ಜಕೋಬಾಬಾದ್, ಭೋಲಾರಿ ಮತ್ತು ಮಲೀರ್ ಕ್ಯಾಂಟ್‌ನಲ್ಲಿರುವ 13 ವಾಯುನೆಲೆಗಳು ಮತ್ತು ಮಿಲಿಟರಿ ಸ್ಥಾಪನೆಗಳ ಮೇಲೆ ಐಎಎಫ್ ದಾಳಿ ನಡೆಸಿದೆ. ಇದು 1971ರ ಯುದ್ಧದ ಅನಂತರ ಪಾಕಿಸ್ತಾನಕ್ಕೆ ನೀಡಿದ ಬಹುದೊಡ್ಡ ಹೊಡೆತ ಎನಿಸಿಕೊಂಡಿದೆ.

ಈ ದಾಳಿಯಲ್ಲಿ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳನ್ನು ಧ್ವಂಸ ಮಾಡಲಾಗಿದೆ. ಇದಕ್ಕಾಗಿ ವಿನಾಶಕಾರಿ ಯುದ್ಧಸಾಮಗ್ರಿಗಳನ್ನು ಬಳಸಲಾಗಿದೆ. ಶತ್ರು ರಾಡಾರ್ ಮತ್ತು ಕ್ಷಿಪಣಿ ವ್ಯವಸ್ಥೆಗಳು ಸೇರಿದಂತೆ ಹೆಚ್ಚಿನ ಮೌಲ್ಯದ ಗುರಿಗಳನ್ನು ಗುರುತಿಸಿ ನಾಶಪಡಿಸಲಾಗಿದೆ.

ಐಎಎಫ್ ಹೊಡೆದ ಗುರಿಗಳಲ್ಲಿ ಪಾಕಿಸ್ತಾನದ ರನ್‌ವೇ, ಹ್ಯಾಂಗರ್‌, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ರಾಡಾರ್ ನೆಲೆಗಳು, ಕ್ಷಿಪಣಿ ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಪ್ರದೇಶಗಳಿಗೆ ಭಾರಿ ಹಾನಿಯಾಗಿವೆ.

ಪಾಕಿಸ್ತಾನ ನಡೆಸಿದ ಪ್ರತಿ ದಾಳಿ ಹೆಚ್ಚಾಗಿ ಮಿಲಿಟರಿ ಸಿಬ್ಬಂದಿಯೊಂದಿಗೆ ನಿರಾಯುಧ ನಾಗರಿಕರನ್ನು ಗುರಿಯಾಗಿಸಿತ್ತು. ಆದರೆ ಭಾರತೀಯ ಸೇನೆಯು ಉದ್ದೇಶಪೂರ್ವಕ, ನಿಖರ ಮತ್ತು ಕಾರ್ಯತಂತ್ರದ ಮೂಲಕ ದಾಳಿ ನಡೆಸಿತ್ತು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಪಾಕಿಸ್ತಾನದ ವ್ಯವಸ್ಥೆಗಳ ಬಗ್ಗೆ ಭಾರತೀಯ ವಾಯುಪಡೆಗೆ ತಿಳಿಯದೇ ಇದ್ದರೂ ಅದು ಭಾರತದ ವಿರುದ್ಧ ರೂಪಿಸಲಾಗುವ ಸಂಚಿಗೆ ಕಾರಣವಾಗುವ ಸ್ಥಳಗಳನ್ನು ನಿಖರವಾಗಿ ಗುರುತಿಸಿದೆ. ಇದರಿಂದ ಮುಂದೆ ಭಾರತೀಯ ಮಿಲಿಟರಿ ಸ್ಥಾಪನೆಗಳು, ವಾಯುನೆಲೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ಪಾಕಿಸ್ತಾನ ನಡೆಸಬಹುದಾಗಿದ್ದ ದಾಳಿಯ ಸಾಧ್ಯತೆಗಳನ್ನು ತಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Droupadi Murmu: ರಾಷ್ಟ್ರಪತಿಗೇ ನೀವು ಹೇಗೆ ಡೆಡ್‌ಲೈನ್‌ ಕೊಡಲು ಸಾಧ್ಯ? ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿ ಮುರ್ಮು ಖಡಕ್‌ ಪ್ರಶ್ನೆ

ಭಾರತದ ಮೂರು ಸೇನೆಗಳ ಜಂಟಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಯಿತು. ಕಳೆದ ದಶಕದಲ್ಲಿ ನಿರಂತರ ಸರ್ಕಾರಿ ಹೂಡಿಕೆಯೊಂದಿಗೆ ನಿರ್ಮಿಸಲಾದ ಈ ವ್ಯವಸ್ಥೆಗಳು ಕಾರ್ಯಾಚರಣೆಯ ಸಮಯದಲ್ಲಿ ದೇಶದ ರಕ್ಷಣಾ ವ್ಯವಸ್ಥೆಯ ಶಕ್ತಿಯನ್ನು ಹೆಚ್ಚಿಸಿದೆ.

ಪಂಜಾಬ್‌ನ ಆದಂಪುರ ವಾಯುನೆಲೆಗೆ ಮಂಗಳವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ʼʼಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯು ಪಾಕಿಸ್ತಾನ ವಾಯುಪಡೆಯ ಕೆಲವು ಹೈಟೆಕ್ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ. ಇದರ ತಾಂತ್ರಿಕ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಈ ಹಿಂದೆಯೇ ಹೇಳಿದ್ದರು. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಈಗ ಸ್ಪಷ್ಟವಾಗಿದೆ. ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ ದೇಶವು ನಿರ್ಣಾಯಕ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂಬ ಬಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಈ ದಾಳಿಯ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ. ಈ ಮೂಲಕ ಭಯೋತ್ಪಾದಕರಿಗೆ ಎಲ್ಲಿಯೂ ಸ್ವರ್ಗವಿಲ್ಲʼʼ ಎಂದು ತಿಳಿಸಿದ್ದಾರೆ.