'ಚಲೋ ದೆಹಲಿ': ಅಕ್ಟೋಬರ್ 10ರಂದು ಮತ್ತೊಂದು ಹೋರಾಟಕ್ಕೆ ಸಿಜೆಪಿ ಸಜ್ಜು
ಕಾಕ್ರೋಚ್ ಜನತಾ ಪಕ್ಷ ಈಗ ಮತ್ತೊಂದು ಹೋರಾಟಕ್ಕೆ ಸಿದ್ಧವಾಗಿದೆ. ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಆರೋಪಗಳು ಕೇಳಿ ಬಂದ ಬಳಿಕ ಪ್ರತಿಭಟನೆಗೆ ಇಳಿದಿರುವ ಕಾಕ್ರೋಚ್ ಜನತಾ ಪಕ್ಷ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ 'ಜಂತರ್ ಮಂತರ್ 2.0' ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಸಂಗ್ರಹ ಚಿತ್ರ -
ಮುಂಬೈ: ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ (Chief Election Commissioner Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ಪ್ರತಿಭಟನೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಕ್ಷ (Cockroach Janta Party) ಘೋಷಣೆ ಮಾಡಿದೆ. ನೀಟ್ (NEET) ಪ್ರಶ್ನೆ ಪತ್ರಿಕೆ (Paper leak) ಸೋರಿಕೆ ಹಿನ್ನೆಲೆಯಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಬಳಿಕ ಇದೀಗ ಮೊತ್ತೊಂದು ಹೋರಾಟಕ್ಕೆ ಸಿಜೆಪಿ ಮುಂದಾಗಿದೆ. ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಜೆನ್ ಜೀ ಗಳು ಹೋರಾಟಕ್ಕೆ ಇಳಿಯಲಿದೆ. ದೆಹಲಿಯಲ್ಲಿ 'ಜಂತರ್ ಮಂತರ್ 2.0' (Jantar Mantar 2.0) ನಡೆಯಲಿದೆ ಎಂದು ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ (Abhijeet Dipke) ಹೇಳಿದ್ದಾರೆ.
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಾವಿರಾರು ಜನರ ಪ್ರತಿಭಟನೆಯ ನೇತೃತ್ವ ವಹಿಸಿದ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿದರು. ಈ ಕುರಿತು ಶುಕ್ರವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ ದೇಶಾದ್ಯಂತ ಸಿಜೆಪಿ ಬೆಂಬಲಿಗರು ದೆಹಲಿಗೆ ಮೆರವಣಿಗೆ ನಡೆಸಿ ಅಕ್ಟೋಬರ್ 10 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
Chikkaballapur News: ಭೂ ಮಾಪಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ: ಜಿಲ್ಲಾಧಿಕಾರಿ ಪರಿಶೀಲನೆ
ಇದು ಶಾಂತಿಯುತ ಪ್ರತಿಭಟನೆಯಾಗಿರುತ್ತದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿರುವ ಅವರು ಜ್ಞಾನೇಶ್ ಕುಮಾರ್ ಅಧಿಕಾರದಿಂದ ಕೆಳಗಿಳಿಯದಿದ್ದರೆ "ಜಂತರ್ ಮಂತರ್ 2.0" ನಡೆಯಲಿದೆ ಎಂದು ಎಚ್ಚರಿಸಿದರು.
If Gyanesh Kumar doesn’t resign, cockroaches from across India will march to Delhi & protest at Jantar Mantar on October 10.
— Abhijeet Dipke (@abhijeet_dipke) October 2, 2026
If Delhi Police tries to stop us, wherever they stop us will become our Jantar Mantar..
Ours will be a peaceful andolan. We will walk on the path shown…
ಪ್ರತಿಭಟನೆ ವೇಳೆ ಮಾತನಾಡಿದ ಸಿಜೆಪಿ ನಾಯಕ ಅಜಿಂಕ್ಯ ಶಿಂಧೆ, 2025ರ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಬೇಕು. ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ವಿವರಿಸುವ 2023ರ ಕಾನೂನನ್ನು ರದ್ದುಗೊಳಿಸಬೇಕು. ಮುಂಬೈ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕು ಎಂದು ಒತ್ತಾಯಿಸಿದರು.
ಅಭಿಜೀತ್ ದಿಪ್ಕೆ ಮಾತನಾಡಿ, ಮತದಾರರ ಹೆಸರುಗಳನ್ನು ತೆಗೆದುಹಾಕಿದ ಬಳಿಕ ನರೇಂದ್ರ ಮೋದಿ ಅಲೆ ಉತ್ತುಂಗದಲ್ಲಿದ್ದಾಗಲೂ ಗೆಲ್ಲಲು ಸಾಧ್ಯವಾಗದ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಇದು ಹೇಗೆ ಎಂದು ಪ್ರಶ್ನಿಸಿದರು.
ದೇಶದ ಸರ್ಕಾರವು ಎಷ್ಟು ಅಸಮರ್ಥವಾಗಿದೆಯೆಂದರೆ ನಾವು ಕೇವಲ ಎರಡು ತಿಂಗಳಲ್ಲಿ ಮತ್ತೆ ಪ್ರತಿಭಟಿಸಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ 13 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದರು. ಆಗ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳ ನಡುವಿನ ಗೆಲುವಿನ ಅಂತರ ಕೇವಲ ಶೇಕಡಾ 2ರಷ್ಟಿತ್ತು. ಈ ಅಂತರವನ್ನು ಹೆಚ್ಚಿಸುವ ಸಲುವಾಗಿಯೇ ಚುನಾವಣೆಗೆ 15 ದಿನಗಳ ಮೊದಲು ಜ್ಞಾನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು ಎಂದು ಅವರು ಆರೋಪಿಸಿದರು.
2024ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಗೆ 40 ಲಕ್ಷ ಮತದಾರರನ್ನು ಸೇರಿಸುವ ಮೂಲಕ ಬಿಜೆಪಿ ಚುನಾವಣೆಯನ್ನು ಕದ್ದು ಗೆದ್ದುಕೊಂಡಿತು. ದೆಹಲಿಯಲ್ಲಿ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ವಿಧಾನಸಭಾ ಕ್ಷೇತ್ರದಲ್ಲಿ 40,000 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಹೀಗಾಗಿ ಅವರು 4,000 ಮತಗಳ ಅಂತರದಿಂದ ಸೋತರು. ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕ್ಷೇತ್ರದಿಂದ ಸುಮಾರು ಒಂದು ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಇದರಿಂದ ಅವರು 10,000 ಮತಗಳ ಅಂತರದಿಂದ ಸೋತರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲೂ ಮತದಾರರ ಹೆಸರುಗಳನ್ನು ತೆಗೆದುಹಾಕಿದ ಬಳಿಕ ಅವರು ಸೋಲು ಅನುಭವಿಸಿದರು ಎಂದರು.
ತೆಲಂಗಾಣ, ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ವಿರೋಧ ಪಕ್ಷಗಳು ಗೆದ್ದಿವೆ. ಹೀಗಾಗಿ ಚುನಾವಣೆಗಳು ನ್ಯಾಯಯುತವಾಗಿವೆ ಎಂದು ಬಿಜೆಪಿ ಬೆಂಬಲಿಗರು ವಾದಿಸುತ್ತಾರೆ. ಪಂದ್ಯವು 'ಫಿಕ್ಸ್' ಆಗಿದ್ದಾಗ ಎಲ್ಲಾ ಎಸೆತಗಳು ನೋ-ಬಾಲ್ ಮತ್ತು ಎಲ್ಲಾ ಕ್ಯಾಚ್‌ಗಳನ್ನು ಕೈಚೆಲ್ಲುವುದಿಲ್ಲ ಎಂದು ಅವರು ತಿಳಿಸಿದರು.
ಮುಂಬೈಯಲ್ಲಿ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ವಿಶಿಷ್ಟವಾದ ವಸ್ತುಗಳನ್ನು ತಂದಿದ್ದರು. ಓರ್ವ ವಿದ್ಯಾರ್ಥಿ 'ಮೆಲೊಡಿ' ಚಾಕೊಲೇಟ್ ಹೊದಿಕೆಗಳಿಂದ ಮಾಡಿದ ಆಭರಣಗಳನ್ನು ಧರಿಸಿದ್ದು, "ಫ್ರಾಡ್ ಡಿಟರ್ಜೆಂಟ್ ಪೌಡರ್" ಎಂದು ಬರೆದಿದ್ದ ಬ್ಯಾನರ್ ಅನ್ನು ಹಿಡಿದಿದ್ದನು. ಪುಣೆಯ ಗುಂಪೊಂದು ಸಂಗೀತ ವಾದ್ಯಗಳನ್ನು ನುಡಿಸಿತ್ತು. "ರಂಗ್ ದೇ ಬಸಂತಿ" ಚಲನಚಿತ್ರದ ಶೀರ್ಷಿಕೆ ಗೀತೆ ಮತ್ತು ಎ.ಆರ್. ರೆಹಮಾನ್ ಅವರ "ವಂದೇ ಮಾತರಂ" ಹಾಡನ್ನು ಹಾಡಲಾಯಿತು.