ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಯಾಣಿಕರೇ ಗಮನಿಸಿ: ನವೆಂಬರ್‌ 30ರ ತನಕ ಸೌದಿ ಅರೇಬಿಯಾದ 4 ನಗರಗಳಿಗೆ ವಿಮಾನ ರದ್ದುಗೊಳಿಸಿದ ಇಂಡಿಗೋ

IndiGo cancels flights: ಭದ್ರತೆಯ ದೃಷ್ಟಿಯಿಂದ ಇಂಡಿಗೋ ವಿಮಾನ ನವೆಂಬರ್‌ 30ರ ತನಕ ರಿಯಾದ್, ಜೆಡ್ಡಾ, ದಮ್ಮಾಮ್, ಮದೀನಾ ವಿಮಾನ ರದ್ದುಗೊಳಿಸಿದೆ. ಸೌದಿ ಅರೇಬಿಯಾದಲ್ಲಿನ ಆತಂಕದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಇಂಡಿಗೋ ಎಕ್ಸ್‌ನಲ್ಲಿ ತಿಳಿಸಿದೆ.

ರಿಯಾದ್, ಜೆಡ್ಡಾ, ದಮ್ಮಾಮ್, ಮದೀನಾ ವಿಮಾನ ರದ್ದುಗೊಳಿಸಿದ ಇಂಡಿಗೋ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 18, 2026 8:59 PM

ದೆಹಲಿ, ನ. 18: ಭಾರತದ ಪ್ರಮುಖ ವಿಮಾನ ಯಾನ ಸಂಸ್ಥೆ ಇಂಡಿಗೋ ಏರ್‌ಲೈನ್ಸ್‌ (IndiGo airlines) ಪ್ರಮುಖ ಪ್ರಕಟಣೆಯೊಂದನ್ನು ಬುಧವಾರ (ನವೆಂಬರ್‌ 18) ಹೊರಡಿಸಿದೆ. ನವೆಂಬರ್‌ 30ರ ತನಕ ಸೌದಿ ಅರೇಬಿಯಾದ ರಿಯಾದ್, ಜೆಡ್ಡಾ, ದಮ್ಮಾಮ್, ಮದೀನಾ ನಗರಗಳ ವಿಮಾನ ಸೇವೆಯನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ. ಸೌದಿ ಅರೇಬಿಯಾದಲ್ಲಿನ ಆತಂಕದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಇಂಡಿಗೋ ತಿಳಿಸಿದೆ (IndiGo cancels flights). ಈ ಬಗ್ಗೆ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

"ಸೌದಿ ಅರೇಬಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜೆಡ್ಡಾ, ಮದೀನಾ, ರಿಯಾದ್ ಮತ್ತು ದಮ್ಮಾಮ್‌ಗೆ ತೆರಳುವ ಹಾಗೂ ಅಲ್ಲಿಂದ ಹೊರಡುವ ಎಲ್ಲ ವಿಮಾನಯಾನ ಸೇವೆಗಳನ್ನು ನವೆಂಬರ್ 30ರವರೆಗೆ ರದ್ದುಗೊಳಿಸಲಾಗಿದೆ" ಎಂದು ಇಂಡಿಗೋ ಸಂಸ್ಥೆಯು ಪೋಸ್ಟ್ ಮಾಡಿದೆ.

ಇಂಡಿಗೋ ಪ್ರಕಟಣೆ:



ಪ್ರಯಾಣಿಕರು ಏರ್‌ಪೋರ್ಟ್‌ಗೆ ಹೊರಡುವ ಮುನ್ನ ಅಧಿಕೃತ ವೆಬ್‌ಸೈಟ್‌ ಪರಿಶೀಲಿಸಿ ವಿಮಾನದ ಸ್ಥಿತಿ-ಗತಿ ಪರಿಶೀಲಿಸುವಂತೆ ಅದು ಸೂಚಿಸಿದೆ. “ಬುಕಿಂಗ್ ಸಮಯದಲ್ಲಿ ನೀಡಲಾದ ಸಂಪರ್ಕ ವಿವರಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಈ ಅವಧಿಯಲ್ಲಿ ನಮ್ಮ ಗ್ರಾಹಕರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಲು ಮತ್ತು ಅಗತ್ಯ ನೆರವು ನೀಡಲು ಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದೆ.

ರಿಯಾದ್‌ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರ ದಾಳಿ; ಓರ್ವ ಭಾರತೀಯ ಸಾವು

“ನಾವು ಸೌದಿ ಅರೇಬಿಯಾದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ನಮ್ಮ ಗ್ರಾಹಕರು ಹಾಗೂ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯೇ ನಮ್ಮ ಅತ್ಯುನ್ನತ ಆದ್ಯತೆʼʼ ಎಂದು ಸ್ಪಷ್ಟಪಡಿಸಿದೆ.

ರಿಯಾದ್‌ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರ ದಾಳಿ

ಅಕ್ಟೋಬರ್‌ 10ರಂದು ಇರಾನ್‌ನ ಬೆಂಬಲವಿರುವ ಯೆಮೆನ್‌ ಮೂಲದ ಹೌತಿ ಬಂಡುಕೋರರ ಗುಂಪು ರಿಯಾದ್‌ನ ಕಿಂಗ್‌ ಖಾಲಿದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಓರ್ವ ಭಾರತೀಯ ಸೇರಿ 13 ಮಂದಿ ಬಲಿಯಾಗಿದ್ದರು. ರಿಯಾದ್‌ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯನ್ನು ಭಾರತ ಶಕ್ತವಾಗಿ ಖಂಡಿಸಿತ್ತು.

ಹೌತಿಗಳಿಂದ ಎಚ್ಚರಿಕೆ

ಹೌತಿಗಳು ವಿಮಾನಯಾನ ಸಂಸ್ಥೆಗಳು, ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಕೆಲಸಗಾರರಿಗೆ ಮತ್ತೆ ಎಚ್ಚರಿಕೆ ನೀಡಿದ್ದರು. ಮಾರಕ ದಾಳಿಯ ನಂತರ ಸೌದಿ ವಿಮಾನ ನಿಲ್ದಾಣಗಳು ಮತ್ತು ವಾಯುಪ್ರದೇಶವನ್ನು ಬಳದಿರುವಂತೆ ಸೂಚಿಸಿದ್ದರು. ಹೌತಿ ದಾಳಿ ಸೌದಿ ಅರೇಬಿಯಾದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಹಲವು ಮುಖ್ಯ ಕಾರ್ಯಕ್ರಮಗಳನ್ನು ಮುಂದೂಡಿದೆ.

ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.