ತಿರುಪತಿ ಲಡ್ಡು ತಯಾರಿಕೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ರಾಸಾಯನಿಕ ಬಳಕೆ!
ತಿರುಪತಿ ಲಡ್ಡು ತಯಾರಿಕೆಗೆ ಕಲಬೆರಕೆ ವಸ್ತುಗಳ ಬಳಕೆ ನಡೆದಿದೆ ಎಂದು ಆಂದ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಅದರಲ್ಲಿ ಶೌಚಾಲಯ ಸ್ವಚ್ಛತೆಗೆ ಬಳಸುವ ರಾಸಾಯನಿಕವೂ ಸೇರಿದೆ ಎಂದು ಹೇಳಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಭಕ್ತರ ಭಾವನೆಗಳ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.
ತಿರುಪತಿ ಲಡ್ಡು -
ಹೈದರಾಬಾದ್, ಫೆ. 7: ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿ ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದ (Tirupati Tirumala Devasthanams) ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪಕ್ಕೆ ಶೌಚಾಲಯ ಸ್ವಚ್ಛಗೊಳಿಸುವ ಕೆಮಿಕಲ್ ಸೇರಿದಂತೆ ಹಲವು ರಾಸಾಯನಿಕಗಳನ್ನು ಬೆರೆಸಲಾಗಿತ್ತು ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು(N Chandrababu Naidu) ಗಂಭೀರ ಆರೋಪ ಮಾಡಿದ್ದಾರೆ.
ಕರ್ನೂಲ್ ಜಿಲ್ಲೆಯ ಯಮ್ಮಿಗನೂರು ಬ್ಲಾಕ್‌ನ ಕಾಲುಗೊಟ್ಲಾ ಗ್ರಾಮದಲ್ಲಿ ಶುಕ್ರವಾರ ನಡೆದ 'ನಮ್ಮ ಭೂಮಿ-ನಮ್ಮ ಹಕ್ಕು' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (SIT) ಸಲ್ಲಿಸಿರುವ ವರದಿಯ ಪ್ರಕಾರ, ಟಿಟಿಡಿಗೆ ಪೂರೈಸಲಾದ ತುಪ್ಪದಲ್ಲಿ ವಿವಿಧ ರಾಸಾಯನಿಕಗಳ ಅಕ್ರಮ ಮಿಶ್ರಣ ನಡೆದಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.
“ಎಸ್‌ಐಟಿ ವರದಿಯಲ್ಲಿ ಟಿಟಿಡಿಗೆ ತುಪ್ಪ ಪೂರೈಸಿದ ಸರಬರಾಜುದಾರರು ಶೌಚಾಲಯ ಮತ್ತು ಬಾತ್‌ರೂಮ್ ಸ್ವಚ್ಛಗೊಳಿಸಲು ಬಳಸುವ ಕೆಮಿಕಲ್ ಸೇರಿದಂತೆ, ಹಲವು ಅಪಾಯಕಾರಿ ರಾಸಾಯನಿಕಗಳನ್ನು ಖರೀದಿಸಿ, ಅವುಗಳನ್ನು ತುಪ್ಪದಲ್ಲಿ ಮಿಶ್ರಣ ಮಾಡಿರುವುದು ಸ್ಪಷ್ಟವಾಗಿ ಹೇಳಲಾಗಿದೆ” ಎಂದು ಚಂದ್ರಬಾಬು ನಾಯ್ಡು ತಿಳಿಸಿದರು.
''ಅಷ್ಟೇ ಅಲ್ಲದೇ ಲಡ್ಡು ತಯಾರಿಕೆಯಲ್ಲಿ ಬಳಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರಲಿಲ್ಲ ಎಂದು ವೈಎಸ್‌ಆರ್‌ಸಿಪಿ ನಾಯಕರು ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸುತ್ತಿದ್ದಾರೆ. ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದು ಎಸ್ಐಟಿ ವರದಿಯಿಂದಲೂ ಸ್ಪಷ್ಟವಾಗಿದೆ'' ಎಂದು ಅವರು ಆರೋಪಿಸಿದರು. ''ಕೇವಲ ತಿರುಪತಿ ಮಾತ್ರವಲ್ಲದೆ, ಶ್ರೀಶೈಲಂ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಿಗೂ ಹಿಂದಿನ ಸರ್ಕಾರದ ಅವಧಿಯಲ್ಲಿ ಕಲಬೆರಕೆ ತುಪ್ಪ ಪೂರೈಕೆಯಾಗಿದೆ'' ಎಂದು ನಾಯ್ಡು ಗಂಭೀರ ಆರೋಪ ಮಾಡಿದರು.
ಶೌಚಾಲಯಕ್ಕೆಂದು ಬಸ್ ಇಳಿದವರು ವಾಪಸ್ ಬರಲೇ ಇಲ್ಲ: ಟ್ಯಾಂಕರ್ ಡಿಕ್ಕಿ ಹೊಡೆದು 6 ಮಂದಿ ದುರ್ಮರಣ
ಹೋಮ್ ಮಿನಿಸ್ಟರ್ ವಂಗಲಪುಡಿ ಅನಿತಾ ವಾಗ್ದಾಳಿ
ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ ಮಾತನಾಡಿ, "ಕೇವಲ ಒಂದಲ್ಲ, CFTRI, NDDB, NTCSI ಮತ್ತು SIT - ಹೀಗೆ ನಾಲ್ಕು ಪ್ರತ್ಯೇಕ ವರದಿಗಳು ತುಪ್ಪದ ಕಲಬೆರಕೆಯನ್ನು ಖಚಿತಪಡಿಸಿವೆ. ಶೌಚಾಲಯ ಸ್ವಚ್ಛಗೊಳಿಸಲು ಬಳಸುವ 'LABSA' (ಲೀನಿಯರ್ ಆಲ್ಕೈಲ್ ಬೆಂಜೀನ್ ಸಲ್ಫೋನಿಕ್ ಆಸಿಡ್) ಎಂಬ ಕೆಮಿಕಲ್ ಅನ್ನು ತುಪ್ಪದಲ್ಲಿ ಬಳಸಲಾಗಿದೆ. ಇದು ಘೋರ ಅಪಚಾರ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ ತಳ್ಳಿ ಹಾಕಿದ ಮಾಜಿ ಸಿಎಂ
ವೈಎಸ್‌ಆರ್‌ಸಿಪಿ ಅಧ್ಯಕ್ಷ ಮತ್ತು ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ''ಸಿಬಿಐ ನೇತೃತ್ವದ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಷ್ಟೇಅಲ್ಲದೇ ಮಾಜಿ ಟಿಟಿಡಿ ಅಧ್ಯಕ್ಷರಾದ ಸುಬ್ಬಾರೆಡ್ಡಿ ಮತ್ತು ಕರುಣಾಕರ್ ರೆಡ್ಡಿ ಅವರಿಗೆ ಸಿಬಿಐ ಕ್ಲೀನ್ ಚಿಟ್ ಕೂಡ ನೀಡಿದೆ'' ಎಂದು ಜಗನ್ ತಿಳಿಸಿದರು.
ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ
''ಚಂದ್ರಬಾಬು ನಾಯ್ಡು ತಮ್ಮ ರಾಜಕೀಯ ಮತ್ತು ಸ್ವಾರ್ಥ ಲಾಭಕ್ಕಾಗಿ ದೇವರನ್ನು ರಾಜಕೀಯಕ್ಕೆ ಎಳೆದು ತರುತ್ತಿದ್ದಾರೆ ಮತ್ತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ'' ಎಂದು ಜಗನ್ ಆರೋಪಿಸಿದರು.