ಮತ್ತೆ ಬಾಲ ಬಿಚ್ಚಿದ ಚೀನಾ; ಲಡಾಖ್-ಅರುಣಾಚಲ ಪ್ರದೇಶ ಗಡಿ ಬಳಿ ಭಾರತದತ್ತ ಮುಖ ಮಾಡಿ ಜೆ-20 ಯುದ್ಧ ವಿಮಾನಗಳ ನಿಯೋಜನೆ
J-20 Stealth Jets: ಭಾರತ-ಚೀನಾ ಗಡಿಯಲ್ಲಿನ LAC ಸಮೀಪ ಚೀನಾ ತನ್ನ ಅತ್ಯಾಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಹೋಟಾನ್ ಹಾಗೂ ಡ್ಯಾಮ್‌ಶುಂಗ್ ವಾಯುನೆಲೆಗಳಲ್ಲಿ ನಿಯೋಜಿಸಿದೆ. ಉಪಗ್ರಹ ಚಿತ್ರಗಳು ಈ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದು, ಗಡಿಯಲ್ಲಿ ಚೀನಾದ ಸೇನಾ ಸನ್ನದ್ಧತೆ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.
ಭಾರತದ ಗಡಿ ಸಮೀಪ ಚೀನಾ ನಿಯೋಜಿಸಿದ ಜೆ-20 ಸ್ಟೆಲ್ತ್ ಯುದ್ಧ ವಿಮಾನ -
ನವದೆಹಲಿ, ಜು. 30: ಭಾರತ-ಚೀನಾ ಗಡಿಯಲ್ಲಿನ (LAC) ಭದ್ರತಾ ಪರಿಸ್ಥಿತಿ ಮತ್ತೊಮ್ಮೆ ಕಳವಳಕಾರಿಯಾಗಿದ್ದು, ಚೀನಾ ತನ್ನ ಅತ್ಯಾಧುನಿಕ ಜೆ-20 (J-20 Mighty Dragon) ಸ್ಟೆಲ್ತ್ ಯುದ್ಧ ವಿಮಾನಗಳನ್ನು ಎರಡು ಪ್ರಮುಖ ವಾಯುನೆಲೆಗಳಲ್ಲಿ ನಿಯೋಜಿಸಿದೆ. ವಾಣಿಜ್ಯ ಉಪಗ್ರಹ ಸಂಸ್ಥೆ ವ್ಯಾಂಟರ್ (Vantor) ಸೆರೆಹಿಡಿದ ಉಪಗ್ರಹ ಚಿತ್ರಗಳ ಪ್ರಕಾರ, ಕ್ಸಿನ್‌ಜಿಯಾಂಗ್‌ನ ಹೋಟಾನ್ ವಾಯುನೆಲೆಯಲ್ಲಿ 8 ಜೆ-20 ಯುದ್ಧ ವಿಮಾನಗಳು ಹಾಗೂ ಟಿಬೆಟ್‌ನ ಡ್ಯಾಮ್‌ಶುಂಗ್ ವಾಯುನೆಲೆಯಲ್ಲಿ 4 ಜೆ-20 ವಿಮಾನಗಳು ಪತ್ತೆಯಾಗಿವೆ.
ಜುಲೈ 9ರಂದು ಸೆರೆಹಿಡಿದ ಚಿತ್ರಗಳಲ್ಲಿ ಹೋಟಾನ್ ವಾಯುನೆಲೆಯಲ್ಲಿ ವಿಮಾನಗಳು ನಿಲ್ಲಿಸಿರುವುದು ಕಂಡುಬಂದಿದ್ದು, ಈ ವಾಯುನೆಲೆ ಲಡಾಖ್‌ನ ದೌಲತ್ ಬೇಗ್ ಓಲ್ಡಿ ವಾಯುನೆಲೆಯಿಂದ ಸುಮಾರು 245 ಕಿ.ಮೀ. ದೂರದಲ್ಲಿದೆ. ಜೂನ್ 25ರಂದು ಡ್ಯಾಮ್‌ಶುಂಗ್ ವಾಯುನೆಲೆಯಲ್ಲಿ ನಾಲ್ಕು ಜೆ-20 ವಿಮಾನಗಳನ್ನು ರಕ್ಷಣಾತ್ಮಕ ಶೆಡ್‌ಗಳ ಅಡಿಯಲ್ಲಿ ಇರಿಸಿರುವುದು ಉಪಗ್ರಹ ಚಿತ್ರಗಳಲ್ಲಿ ಗೋಚರಿಸಿದೆ. ಈ ವಾಯುನೆಲೆ ಅರುಣಾಚಲ ಪ್ರದೇಶದ ತವಾಂಗ್‌ನಿಂದ ಸುಮಾರು 344 ಕಿ.ಮೀ. ದೂರದಲ್ಲಿದೆ.
ಭಾರತದ ಗಡಿ ಬಳಿ ಯುದ್ಧ ವಿಮಾನ ನಿಯೋಜಿಸಿದ ಚೀನಾ:
🇮🇳🇨🇳⚡️ — #China has deployed at least 11 J-20 "Mighty Dragon" stealth fighters to two high-altitude airbases facing #India, marking the largest concentration of the aircraft observed at #Chinese bases near the border to date, according to NDTV.
— Mahalaxmi Ramanathan (@MahalaxmiRaman) July 28, 2026
➡️ The images show seven J-20s at… pic.twitter.com/VZ1jOkb0Tj
ಜೆ-20 ಚೀನಾದ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವಾಗಿದ್ದು, ರಾಡಾರ್‌ಗೆ ಸುಲಭವಾಗಿ ಪತ್ತೆಯಾಗದ ತಂತ್ರಜ್ಞಾನ, ದೀರ್ಘ ವ್ಯಾಪ್ತಿಯ ಕಾರ್ಯಾಚರಣೆ ಹಾಗೂ ಅತ್ಯಾಧುನಿಕ ಕ್ಷಿಪಣಿ ಸಾಮರ್ಥ್ಯ ಹೊಂದಿದೆ. ಇದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಏರ್ ಫೋರ್ಸ್ (PLAAF)ನ ಅತ್ಯಂತ ಪ್ರಮುಖ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.
ರಕ್ಷಣಾ ತಜ್ಞರ ಪ್ರಕಾರ, ಗಡಿ ಭಾಗದ ಎತ್ತರದ ವಾಯುನೆಲೆಗಳಲ್ಲಿ ಜೆ-20 ವಿಮಾನಗಳ ನಿರಂತರ ನಿಯೋಜನೆ ಈಗ ತಾತ್ಕಾಲಿಕ ಕ್ರಮವಲ್ಲ; ಇದು ಚೀನಾದ ದೀರ್ಘಕಾಲೀನ ಸೇನಾ ಕಾರ್ಯತಂತ್ರದ ಭಾಗ. ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಪ್ರದೇಶಗಳಲ್ಲಿ ತನ್ನ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವನ್ನು ಚೀನಾ ಮುಂದುವರಿಸಿದೆ.
ಈ ಬೆಳವಣಿಗೆ ಭಾರತದ ವಾಯುಪಡೆಯ ಯುದ್ಧ ವಿಮಾನಗಳ ಸಂಖ್ಯೆ ಕುಸಿಯುತ್ತಿರುವ ಹಾಗೂ ಎಲ್‌ಸಿಎ ತೇಜಸ್ Mk1A ಯೋಜನೆ ವಿಳಂಬವಾಗಿರುವ ಸಮಯದಲ್ಲೇ ನಡೆದಿದೆ. ಜತೆಗೆ 114 ಬಹುಉದ್ದೇಶದ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಉದ್ವಿಗ್ನ ಪರಿಸ್ಥಿತಿ
2020ರ ಗಾಲ್ವಾನ್ ಕಣಿವೆ ಘರ್ಷಣೆ ಬಳಿಕ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಹಲವು ಸುತ್ತಿನ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳ ಬಳಿಕ ಕೆಲವು ಪ್ರದೇಶಗಳಲ್ಲಿ ಸೇನೆ ಹಿಂತೆಗೆದುಕೊಳ್ಳಲಾಗಿದ್ದರೂ, ಎರಡೂ ರಾಷ್ಟ್ರಗಳು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಯೋಧರು, ಶಸ್ತ್ರಾಸ್ತ್ರಗಳು ಹಾಗೂ ಆಧುನಿಕ ವಾಯು ಸಾಮರ್ಥ್ಯವನ್ನು ಕಾಯ್ದುಕೊಂಡಿವೆ. ಈ ಹಿನ್ನೆಲೆಯಲ್ಲಿ ಚೀನಾದ ಹೊಸ ಜೆ-20 ನಿಯೋಜನೆ ಗಡಿಭಾಗದಲ್ಲಿ ತನ್ನ ಸೇನಾ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆಯಾಗಿ ಪರಿಗಣಿಸಲಾಗಿದೆ.