ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼʼಮನುವಾದಿ ಮನಸ್ಥಿತಿʼʼ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

CJI BR Gavai: ದೆಹಲಿಯಲ್ಲಿ ಸೋಮವಾರ (ಅಕ್ಟೋಬರ್‌ 6) ವ್ಯಕ್ತಿಯೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿದ ಸಿದ್ದರಾಮಯ್ಯ

-

Ramesh B Ramesh B Oct 6, 2025 5:53 PM

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ದೆಹಲಿಯಲ್ಲಿ ಸೋಮವಾರ (ಅಕ್ಟೋಬರ್‌ 6) ವ್ಯಕ್ತಿಯೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (Chief Justice of India BR Gavai) ಅವರ ಮೇಲೆ ಶೂ ಎಸೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇದನ್ನು ಖಂಡಿಸಿದ್ದಾರೆ. ಇದು ಮನುವಾದಿ ಮನಸ್ಥಿತಿ ಎಂದು ಅವರು ಕರೆದಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಮಧ್ಯ ಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣು ಮೂರ್ತಿಯ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಬಿ.ಆರ್. ಗವಾಯಿ ನೀಡಿದ್ದ ವಿವಾದಾತ್ಮಕ "ದೇವರನ್ನೇ ಕೇಳಿ" ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ʼʼಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಾಗಿರುವ ಬಿ.ಎಸ್. ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿರುವ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: CJI BR Gavai: "ಸನಾತನ ಧರ್ಮಕ್ಕೆ ಅವಮಾನ ಮಾಡಿದ್ರೆ ಸಹಿಸಲ್ಲ"; ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲ!

ಮುಂದುವರಿದು, ʼʼದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಎಸ್. ಗವಾಯಿ ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭಧ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಮುಖ್ಯನ್ಯಾಯಮೂರ್ತಿಗಳಾದ ಬಿ.ಎಸ್.ಗವಾಯಿ ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕೆ ಇವೆ ಎನ್ನುವುದನ್ನು ಅವರ ಗಮನಕ್ಕೆ ತರಬಯಸುತ್ತೇನೆ. ಮುಖ್ಯನ್ಯಾಯಮೂರ್ತಿಗಳು ಯಾವುದೇ ಪಕ್ಷ ಇಲ್ಲವೇ ಧರ್ಮಕ್ಕೆ ಸೇರಿದವರಲ್ಲ. ಈ ದೃಷ್ಟಿಯಿಂದ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಸುಪ್ರೀಂ ಕೋರ್ಟ್ ನಲ್ಲಿ ಇಂದು ನಡೆದಿರುವ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕೆಂದು ಮನವಿ ಮಾಡುತ್ತೇನೆʼʼ ಎಂದು ಕರೆ ನೀಡಿದ್ದಾರೆ.

ʼʼಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ರಾಕೇಶ್ ಕಿಶೋರ್‌ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎನ್ನುವುದನ್ನು ನಾವು ಮರೆಯಬಾರದು. ನಾಥೂರಾಮ್ ಗೋಡ್ಸೆಯಂತಹ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲಿಯೇ ಕೆಲವು ಪುಂಡರು ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ನಾನು ತಿಳಿದುಕೊಂಡಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.

ಘಟನೆ ವಿವರ

ಆರೋಪಿ "ಭಾರತ ಸನಾತನದ ಅವಮಾನವನ್ನು ಸಹಿಸುವುದಿಲ್ಲ" ಎಂದು ಘೋಷಣೆಗಳನ್ನು ಕೂಗುತ್ತಾ ನ್ಯಾಯ ಪೀಠದ ಕಡೆಗೆ ಶೂ ಎಸೆದಿದ್ದಾನೆ. ನ್ಯಾಯಾಲಯದ ಕೊಠಡಿಯಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಶೂ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಅದಾಗ್ಯೂ ಶೂ ಮುಖ್ಯ ನ್ಯಾಯಾಧೀಶರಿಗೆ ತಾಗಿಲ್ಲ. ಶೂ ಎಸೆದ ವ್ಯಕ್ತಿ ಸುಪ್ರೀಂ ಕೋರ್ಟ್‌ನ ವಕೀಲರು ಮತ್ತು ಗುಮಾಸ್ತರಿಗೆ ನೀಡಲಾಗುವ ಸಾಮೀಪ್ಯ ಕಾರ್ಡ್ ಹೊಂದಿದ್ದ ಎಂದು ತಿಳಿದುಬಂದಿದೆ. ಆ ಕಾರ್ಡ್‌ನಲ್ಲಿ ಕಿಶೋರ್ ರಾಕೇಶ್ ಎಂಬ ಹೆಸರಿದೆ. ಮುಖ್ಯ ನ್ಯಾಯಮೂರ್ತಿಯನ್ನು ಗುರಿಯಾಗಿಸಿಕೊಂಡಿದ್ದರ ಹಿಂದಿನ ಅವನ ಉದ್ದೇಶ ತಿಳಿದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿವೆ.