ನವದೆಹಲಿ: ಕಾಕ್ರೋಚ್ ಜನತಾ ಪಕ್ಷವು (Cockroach Janata Party) ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರತಿಭಟನೆಯ ಮುಂದಾಳತ್ವ ವಹಿಸಲು ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಅಮೆರಿಕದಿಂದ ಭಾರತಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ತಿಂಗಳ ಹಿಂದೆಯಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನದ ರೂಪದಲ್ಲಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷ ಜೂನ್ 6ರಂದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಈ ಪ್ರತಿಭಟನೆಗೆ ಪೊಲೀಸ್ ಪೂರ್ವಾನುಮತಿ ದೊರೆಯದೇ ಇರುವುದರಿಂದ ಇದು ನಡೆಯುತ್ತದೆಯೋ, ಇಲ್ಲವೋ ಎನ್ನುವ ಗೊಂದಲದಲ್ಲಿದೆ.
ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ಅವರು ವಿಡಂಬನಾತ್ಮಕ ಅಭಿಯಾನವಾಗಿ ಸಾಮಾಜಿಕ ಮಾಧ್ಯಮದಲ್ಲಿ ಮೇ 16ರಂದು ಕಾಕ್ರೋಚ್ ಜನತಾ ಪಕ್ಷವನ್ನು ಸ್ಥಾಪಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗದ ಕುರಿತು ನೀಡಿದ ಹೇಳಿಕೆ ಈ ಪಕ್ಷ ಸ್ಥಾಪನೆಗೆ ಕಾರಣವಾಯಿತು. ಅವರು ತಮ್ಮ ಹೇಳಿಕೆಯಲ್ಲಿ ಕೆಲವು ಯುವಕರನ್ನು ಜಿರಳೆಗಳು ಎಂದು ಉಲ್ಲೇಖಿಸಿದ್ದರು.
ಲೋಕಸಭಾ ಚುನಾವಣೆ ತಯಾರಿ, ಬಿಜೆಪಿ ತೊರೆದ ತಕ್ಷಣವೇ ರಾಜಕೀಯ ಚಳುವಳಿ ಪ್ರಾರಂಭಿಸಿದ ಅಣ್ಣಾಮಲೈ
ಸಾಮಾಜಿಕ ಮಾಧ್ಯಮದಲ್ಲಿ ಕಾಕ್ರೋಚ್ ಜನತಾ ಪಕ್ಷ ಸ್ಥಾಪನೆಯಾದ ಕೂಡಲೇ ಇದು ಲಕ್ಷಾಂತರ ಅನುಯಾಯಿಗಳನ್ನು ಆಕರ್ಷಿಸಿತ್ತು. ಇದರ ಅನುಯಾಯಿಗಳ ಸಂಖ್ಯೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ, ಕಾಂಗ್ರೆಸ್ ಅನ್ನು ಕೂಡ ಮೀರಿಸಿತ್ತು.
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಜವಾಬ್ದಾರಿ ಕೇಳುವ ಸಲುವಾಗಿ ಜೂನ್ 6ರಂದು ಪ್ರತಿಭಟನೆ ನಡೆಸಲು ಸಿಜೆಪಿ ಸಿದ್ಧತೆ ನಡೆಸಿದೆ. ಆನ್‌ಲೈನ್‌ನಲ್ಲಿ ಸಿಕ್ಕ ಜೆನ್ ಝೀ ಬೆಂಬಲ ಈ ಪ್ರತಿಭಟನೆಗೂ ಸಿಗುತ್ತದೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಈ ಆಂದೋಲನವನ್ನು ಸಾಮಾಜಿಕ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಮತ್ತು ನಟ ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಬೆಂಬಲಿಸಿದ್ದಾರೆ.
ಸಿಜೆಪಿ ಪ್ರತಿಭಟನೆಯು ಮುಖ್ಯವಾಗಿ ನೀಟ್, ಸಿಬಿಎಸ್‌ಇ ಮತ್ತು ಸಿಯುಇಟಿ ಸೇರಿದಂತೆ ಪ್ರಮುಖ ಪರೀಕ್ಷೆಗಳ ಸುತ್ತಲಿನ ಅಕ್ರಮಗಳನ್ನು ವಿರೋಧಿಸಿ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ತಾಂತ್ರಿಕ ವೈಫಲ್ಯ ಮತ್ತು ಪರೀಕ್ಷೆಗೆ ಸಂಬಂಧಿಸಿದ ವಿವಾದಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿವೆ. ಇದಕ್ಕಾಗಿ ತುರ್ತು ಸರ್ಕಾರಿ ಕ್ರಮ ಅಗತ್ಯ. ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಸಿಜೆಪಿ ಅಧಿಕಾರಿಗಳಿಂದ ಅಧಿಕೃತ ಅನುಮತಿಯನ್ನು ಪಡೆದಿಲ್ಲ. ಪ್ರತಿಭಟನೆಯ ದಿನವೇ ಅನುಮತಿ ಪಡೆಯಲು ಸಂಘಟನೆ ಯೋಜಿಸಿದೆ ಎಂದು ಸಿಜೆಪಿ ವಕ್ತಾರರು ತಿಳಿಸಿದ್ದಾರೆ.
ಈ ನಡುವೆ ಪ್ರತಿಭಟನೆ ವೇಳೆ ಹೆಚ್ಚಿನ ಜನ ಸೇರುವುದನ್ನು ನಿಯಂತ್ರಿಸಿ ಕ್ರಮಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಪ್ರತಿಭಟನೆಯನ್ನು ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ ನಡೆಸಬೇಕು. ಅಲ್ಲದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಭಾಗವಹಿಸುವವರು ಶಾಂತಿಯುತವಾಗಿ ಮತ್ತು ಕಾನೂನು ಪಾಲಿಸುವಂತೆ ಹೈಕೋರ್ಟ್ ತಿಳಿಸಿದೆ.