ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rajya Sabha elections: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ; ರಾಹುಲ್‌ ಗಾಂಧಿ, ಸಿಎಂ ಡಿಕೆಶಿ, ಸಿದ್ದರಾಮಯ್ಯ ಸಾಥ್

Mallikarjun kharge: ಕರ್ನಾಟಕದಿಂದ ಆಯ್ಕೆಯಾಗಬೇಕಾದ ನಾಲ್ಕು ಸ್ಥಾನಗಳು ಸೇರಿ ರಾಜ್ಯಸಭೆಯ ಒಟ್ಟು 24 ಸ್ಥಾನಗಳಿಗೆ ಜೂನ್‌ 18ರಂದು ಚುನಾವಣೆ ನಿಗದಿಯಾಗಿದೆ. ಕರ್ನಾಟಕದಿಂದ ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಮಲ್ಲಿಕಾರ್ಜುನ ಖರ್ಗೆ, ವಕ್ತಾರ ಪವನ್ ಖೇರಾ, ಮನ್ಸೂರ್ ಅಲಿಖಾನ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ. -

Prabhakara R
Prabhakara R Jun 5, 2026 3:32 PM

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ (Rajya Sabha elections) ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ವಿಧಾನಸೌಧದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾ‌ರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಉಪಸ್ಥಿತರಿದ್ದರು.

ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗಬೇಕಾದ ರಾಜ್ಯಸಭೆಯ 3 ಸ್ಥಾನಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಕ್ತಾರ ಪವನ್ ಖೇರಾ, ಮನ್ಸೂರ್ ಅಲಿಖಾನ್ ಅವರನ್ನು ಅಭ್ಯರ್ಥಿಗಳಾಗಿ ಕಾಂಗ್ರೆಸ್ ಘೋಷಿಸಿದೆ. ಖರ್ಗೆಯವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದು, ಸದ್ಯ ಅವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯಸಭೆಯ ಉಪಸಭಾಪತಿಯಾಗಿದ್ದ ಹಾಗೂ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಅವರಿಗೂ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ ಅವರ ಅವಧಿ ಮುಕ್ತಾಯವಾಗಲಿದ್ದು, ಕರ್ನಾಟಕದಿಂದ ಆಯ್ಕೆಯಾಗಬೇಕಾದ ರಾಜ್ಯಸಭೆಯ ಈ ನಾಲ್ಕು ಸ್ಥಾನಗಳು ಸೇರಿ ರಾಜ್ಯಸಭೆಯ ಒಟ್ಟು 24 ಸ್ಥಾನಗಳಿಗೆ ಇದೇ 18ರಂದು ಚುನಾವಣೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮೂರು ಹಾಗೂ ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ.

ಆಂಧ್ರ ರಾಜ್ಯಸಭಾ ಸ್ಥಾನವನ್ನು ಬಿಟ್ಟುಕೊಟ್ಟ ಬಿಜೆಪಿ! ಕಾರಣವೇನು?

ನಾಮಪತ್ರ ಸಲ್ಲಿಸಲು ಜೂನ್ 8 ಕೊನೆ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ 9ಕ್ಕೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು 10 ಕೊನೆಯ ದಿನವಾಗಿದೆ. ಜೂನ್ 18ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಸಂಜೆ 5ಕ್ಕೆ ನಡೆಯಲಿದೆ.

ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಮ್ಮ ಶಾಸಕರು, ನಮ್ಮ ನಾಯಕರು ನನ್ನನ್ನು ಆಯ್ಕೆ ಮಾಡಿದ್ದಾರೆ. ಜೂನ್ 18 ಚುನಾವಣೆಯಲ್ಲಿ ಎಲ್ಲರು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ನಿಮ್ಮೆಲ್ಲರ ಬೆಂಬಲ ಬೇಕು ಎಂದು ತಿಳಿಸಿದರು.