ಲಖನೌ: ಕಾರ್ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ವಿವಾದ ಹಿಂಸಾಚಾರಕ್ಕೆ ತಿರುಗಿ ಎರಡು ಸಮುದಾಯಗಳ ನಡವೆ ಘರ್ಷಣೆ(Communal Clash) ಉಂಟಾದ ಘಟನೆ ಉತ್ತರ ಪ್ರದೇಶ(Uttar Pradesh)ದ ಕಾಸ್ಗಂಜ್(Kasganj) ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ. ಈ ವೇಳೆ ಕಲ್ಲು ತೂರಾಟ ಹಾಗೂ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕೆಲವು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲಿ ಕಿರುಚಾಡಿದ ಯುವಕ-ಯುವತಿಯರು; ವಿಡಿಯೊ ವೈರಲ್, ನೆಟ್ಟಿಗರು ಆಕ್ರೋಶ
ಘರ್ಷಣೆಗೆ ಕಾರಣವೇನು?
ಮೂಲಗಳ ಪ್ರಕಾರ, ಈ ಘಟನೆಯು ಕಾಸ್ಗಂಜ್‌ನ ಸೋರೊನ್ ಪಟ್ಟಣ(Soron town)ದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬ, ಅದು ತನ್ನ ದಾರಿಗೆ ತಡ್ಡಲಾಗಿ ನಿಂತಿದೆ ಎಂದು ಹೇಳಿ ಕಾರಿನ ಮಾಲೀಕ ರಿಯಾಜ್ ಅಹ್ಮದ್‌ಗೆ ಕಾರನ್ನು ಬೇರೆಡೆ ನಿಲ್ಲಿಸುವಂತೆ ಹೇಳಿದ್ದಾನೆ. ಇದೇ ವಿಚಾರಕ್ಕೆ ಕಾರು ಮಾಲೀಕ ರಿಯಾಜ್ ಹಾಗೂ ಆ ವ್ಯಕ್ತಿಯ ನಡುವೆ ವಾಗ್ವಾದ ಶುರುವಾಗುದೆ. ಇದೇ ವೇಳೆ ಆ ವ್ಯಕ್ತಿ ಕಾರಿಗೆ ಒದ್ದಿದ್ದಾನೆ ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ವ್ಯಕ್ತಿಗಳ ಕಡೆಯ ಜನರು ಸ್ಥಳದಲ್ಲಿ ಜಮಾವಣೆಗೊಂಡು ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಕೆಲವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಠಾಣೆಯಿಂದ ಹಿಂದಿರುಗುವಾಗ ಮತ್ತೊಂದು ಗುಂಪಿನವರು ಎದುರಾಗಿದ್ದು ಮತ್ತೆ ವಾಗ್ವಾದ ಶುರವಾಗಿದೆ. ಬಳಿಕ ಕಲ್ಲು ತೂರಾಟ ಮತ್ತು ಗುಂಡಿನ ಚಕಮಕಿಯೂ ನಡೆದಿದ್ದು, ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರಿಂದ ತ್ವರಿತ ಕ್ರಮ
ಘರ್ಷಣೆಯ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬಳಿಕ ಆ ಪ್ರದೇಶದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಘರ್ಷಣೆಯಲ್ಲಿ ಗಾಯಗೊಂಡ ರಿಯಾಜ್ ಅಹ್ಮದ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಲಿಗಢ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಸ್ಥಳಕ್ಕೆ ಕಾಸ್ಗಂಜ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಶೀಲ್ ಕುಮಾರ್(Sushil Kumar,) ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವೆಡೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ, ಎಂದು ಸುಶೀಲ್ ಕುಮಾರ್ ತಿಳಿಸಿದ್ದಾರೆ.
ಇನ್ನು ಈ ಹಿಂದೆ ಇದೇ ಪಾರ್ಕಿಂಗ್ ವಿಚಾರಕ್ಕೆ ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆಯೊಂದು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿತು. ಸ್ಕೂಟಿಯನ್ನು ಪಾರ್ಕಿಂಗ್ ಮಾಡುವ ವಿಚಾರದಲ್ಲಿ ಜಗಳದಲ್ಲಿ ನಡೆದು ಆರೋಪಿಗಳು ಆಸಿಫ್ ಖುರೇಷಿ ಮೇಲೆ ಹಲ್ಲೆ ನಡೆಸಿದರು. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಆಸಿಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾದರು ದುರದೃಷ್ಟವಶಾತ್ ದಾರಿ ಮಧ್ಯೆಯೇ ಮೃತಪಟ್ಟಿದ್ದರು.