ʼʼಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆ": 12 ವರ್ಷಗಳ ಆಡಳಿತದ ಸಾಧನೆ ಪಟ್ಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ
Narendra Modi: ಅತೀ ದೀರ್ಘ ಅವಧಿಯ ಪ್ರಧಾನಿ ಎನ್ನುವ ದಾಖಲೆ ಬರೆದ ಪ್ರದಾನಿ ನರೇಂದ್ರ ಮೋದಿ 12 ವರ್ಷಗಳ ತಮ್ಮ ಆಡಳಿತದ ಅವಧಿಯಲ್ಲಿ ನಡೆದ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಟ್ಟಿದ್ದಾರೆ. 250 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಡತನದಿಂದ ಹೊರತರಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ದೆಹಲಿ, ಜೂ. 10: "2014ರಲ್ಲಿ ನಾವು ಆಡಳಿತಕ್ಕೆ ಬಂದಾಗ ದೇಶದ ಸಾಮಾನ್ಯ ನಾಗರಿಕರಿಗೆ ಹೊಸ ಭರವಸೆ ಮೂಡಿದೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಕಾಂಗ್ರೆಸ್ ನಿರಂತರ ದ್ರೋಹ ಎಸಗಿದ ಬಳಿಕ ಮತದಾರರು ನಮ್ಮ ಕೈಗೆ ಅಧಿಕಾರ ನೀಡಿ ದೇಶದ ಜಬಾಬ್ದಾರಿ ನಮಗೆ ವಹಿಸಿದರು" ಎಂದು ಪ್ರಧಾನ ಮಂತ್ರಿ ನರೇಂದ್ರ (Narendra Modi) ಹೇಳಿದರು. ಎನ್‌ಡಿಎ ಸಾಧನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, 12 ವರ್ಷಗಳಲ್ಲಿ ಮೈತ್ರಿಕೂಟವು ಆ ನಂಬಿಕೆಯನ್ನು ಬಲಪಡಿಸಿದೆ ಎಂದು ಅಭಿಪ್ರಾಯಪಟ್ಟರು. ಅತಿ ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ ಪ್ರಧಾನ ಮಂತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ, ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಎನ್‌ಡಿಎ ನಾಯಕರ ಸಮಾವೇಶದಲ್ಲಿ ಮಾತನಾಡಿದರು.
"2014ರಲ್ಲಿ ಉದಯಿಸಿದ ಭರವಸೆಯ ಸೂರ್ಯ ಇಂದು ಆತ್ಮವಿಶ್ವಾಸದ ಕಿರಣವಾಗಿ ರೂಪಾಂತರಗೊಂಡಿದ್ದಾನೆ. ಮೊದಲ ಬಾರಿಗೆ ಸೂಕ್ತ ಉದ್ದೇಶಗಳೊಂದಿಗೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಅಭಿವೃದ್ಧಿಯೂ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಜನರು ನೋಡಿದ್ದಾರೆ" ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರ ಮಾತು:
Addressing the NDA Conclave in Delhi.
— Narendra Modi (@narendramodi) June 10, 2026
https://t.co/wyowgBdfMZ
12 ವರ್ಷಗಳಲ್ಲಿ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ನಮ್ಮ ಅಧಿಕಾರಾವಧಿಯಲ್ಲಿ 250 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಡತನದಿಂದ ಹೊರತರಲಾಗಿದೆ. ಇದು ಸರ್ಕಾರದ ನೀತಿಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದಕ್ಕೆ ಸಾಕ್ಷಿ ಎಂದರು. ಭಾರತವು ಅರೆವಾಹಕಗಳು ಮತ್ತು ನಿರ್ಣಾಯಕ ಖನಿಜಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ವರೆಗಿನ ನಿರ್ಣಾಯಕ ಕ್ಷೇತ್ರಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುತ್ತಿದೆ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸುಧಾರಣೆಗಳ ಬಗ್ಗೆ ಸುದೃಢ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ʼʼನಿಧಾನಗತಿಯ ಅಭಿವೃದ್ಧಿಗೆ ಕಾಂಗ್ರೆಸ್ ಬೆಳವಣಿಗೆ ದರ ಎಂಬ ಹೆಸರಿಡಬೇಕುʼʼ: ಪ್ರಧಾನಿ ನರೇಂದ್ರ ಮೋದಿ ಹೊಸ ವ್ಯಾಖ್ಯಾನ
"ಇಂಧನ, ಖನಿಜ, ಚಿಪ್, ಬ್ಯಾಟರಿ ಸಂಗ್ರಹಣೆ, ಬಾಹ್ಯಾಕಾಶ, ಡ್ರೋನ್, ದತ್ತಾಂಶ ಕೇಂದ್ರ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಎಲ್ಲವೂ ಪರಸ್ಪರ ಸಂಬಂಧ ಹೊಂದಿರುವ ವಲಯಗಳು ಮತ್ತು ತಂತ್ರಜ್ಞಾನಗಳು. ಈ ಕ್ಷೇತ್ರಗಳಲ್ಲಿ ಭಾರತವು ಸ್ವಾಲಂಬನೆ ಸಾಧಿಸುತ್ತಿದೆʼʼ ಎಂದು ಹೆಮ್ಮಯಿಂದ ಹೇಳಿದರು.
ಎನ್‌ಡಿಎ ಆಡಳಿತ ತತ್ವಶಾಸ್ತ್ರವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, "ಯಾವುದೇ ರಾಜಕೀಯ ಪಕ್ಷಕ್ಕಿಂತ ರಾಷ್ಟ್ರವು ದೊಡ್ಡದು ಮತ್ತು ನಾವು 'ರಾಷ್ಟ್ರ ಮೊದಲು' ಎಂಬ ಮನೋಭಾವದೊಂದಿಗೆ ಕೆಲಸ ಮಾಡುವಾಗ, ಯಾವುದೇ ನಿರ್ಧಾರವು ಕಠಿಣವಲ್ಲ" ಎಂದರು.
"ಹಿಂದಿನ ಸರ್ಕಾರಗಳು 370ನೇ ವಿಧಿಯ ಬಗ್ಗೆ ಚರ್ಚಿಸಲು ಸಹ ಹಿಂಜರಿದವು. ನಾವು 370ನೇ ವಿಧಿಯನ್ನು ತೆಗೆದುಹಾಕಿ ಸಂವಿಧಾನವನ್ನು ರಾಷ್ಟ್ರದಾದ್ಯಂತ ಏಕರೂಪವಾಗಿ ಜಾರಿಗೆ ತಂದಿದ್ದೇವೆ. ಹಿಂದೆ, ಈಶಾನ್ಯದಲ್ಲಿ ಹಿಂಸಾಚಾರ ವ್ಯಾಪಕವಾಗಿತ್ತು, ಆದರೆ ನಾವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸಿದ್ದೇವೆ" ಎಂದು ಹೇಳಿದರು.
ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ದಾಳಿಗಳ ಬಗ್ಗೆ ದೇಶವು ಇನ್ನು ಮುಂದೆ ಮೌನವಾಗಿರಲ್ಲ ಎಂದು ಗುಡುಗಿದರು. "ಹಿಂದೆ, ಭಾರತ ಭಯೋತ್ಪಾದಕ ದಾಳಿಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಿತ್ತು. ಈಗ, ನಾವು ಸರ್ಜಿಕಲ್ ಸ್ಟ್ರೈಕ್ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ವಾಯುದಾಳಿಗಳ ಮೂಲಕ ಪ್ರತಿಕ್ರಿಯಿಸಿದ್ದೇವೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಮೂಲಕ ಭಾರತದ ದೃಢ ನಿಶ್ಚಯ ಮತ್ತು ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿದ್ದೇವೆ" ಎಂದು ಅವರು ಹೇಳಿದರು.
ತೆರಿಗೆ ಪರಿಹಾರ ಮತ್ತು ಆಡಳಿತ ಸುಧಾರಣೆಗಳು ಸೇರಿದಂತೆ ಮಧ್ಯಮ ವರ್ಗವನ್ನು ಗುರಿಯಾಗಿಟ್ಟುಕೊಂಡು ಕೈಗೊಂಡ ಕ್ರಮಗಳನ್ನು ಪ್ರಧಾನಿ ಎತ್ತಿ ಹಿಡಿದರು. "ಮಧ್ಯಮ ವರ್ಗ ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಆಕಾಂಕ್ಷೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅವರನ್ನು ಬೆಂಬಲಿಸಲು, ವಾರ್ಷಿಕ 12 ಲಕ್ಷ ರುಪಾಯಿವರೆಗಿನ ಆದಾಯವು ಈಗ ತೆರಿಗೆ ಮುಕ್ತವಾಗಿದೆ. ಇಂದು, ದೇಶವು ಸರಳ ಮತ್ತು ಮುಖರಹಿತ ತೆರಿಗೆ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತದೆ" ಎಂದು ಅವರು ಹೇಳಿದರು.
ಮೋದಿ ಸರ್ಕಾರಕ್ಕೆ 12 ವರ್ಷ: ಕೋಟ್ಯಂತರ ಜನರ ಬದುಕು ಬದಲಿಸಿದ 5 ಮಹತ್ವದ ಯೋಜನೆಗಳು
ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ
ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಮ್ಮನ್ನು ಸನ್ಮಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಎನ್‌ಡಿಎ ಮಿತ್ರಪಕ್ಷಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು ಈ ಸಾಧನೆಯು ತಮ್ಮ ವೈಯಕ್ತಿಕ ಸಾಧನೆಗಿಂತ ಹೆಚ್ಚಾಗಿ ಇಡೀ ಮೈತ್ರಿಕೂಟ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸೇರಿದ್ದು ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.