ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Bill: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ- ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಮುಸಲ್ಮಾನರು! ವಿಡಿಯೊ ಇದೆ

ವಕ್ಫ್ ಕಾಯ್ದೆಗೆ(Waqf Bill) ತಿದ್ದುಪಡಿಯಿಂದ ಬಡ ಮತ್ತು ಪಸ್ಮಾಂಡ ಮುಸ್ಲಿಮರಿಗೆ ಅನುಕೂಲವಾಗುತ್ತದೆ. ಇದು ಅವರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ದಾರಾ ಶಿಕೋಹ್ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಮೀರ್ ರಶೀದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ವಿರೋಧಿಸಿದವರನ್ನು ಟೀಕಿಸುತ್ತಿರುವವರು ಹುಸಿ-ಜಾತ್ಯತೀತರು. ಅವರು ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

ವಕ್ಫ್ ಮಸೂದೆ ಅಂಗೀಕಾರವಾಗ್ತಿದ್ದಂತೆ ಮುಸ್ಲಿಮರಿಂದಲೇ ಸಂಭ್ರಮಾಚರಣೆ

ನವದೆಹಲಿ: ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ(Waqf Bill) ಅಂಗೀಕಾರವಾದ ಬಳಿಕ ದಾರಾ ಶಿಕೋಹ್ ಫೌಂಡೇಶನ್ ಸದಸ್ಯರು ಸಿಹಿತಿಂಡಿಗಳನ್ನು ಹಂಚಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ವಕ್ಫ್ ಕಾಯ್ದೆಗೆ ತಿದ್ದುಪಡಿಯಿಂದ ಬಡ ಮತ್ತು ಪಸ್ಮಾಂಡ ಮುಸ್ಲಿಮರಿಗೆ ಅನುಕೂಲವಾಗುತ್ತದೆ. ಇದು ಅವರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಮೀರ್ ರಶೀದ್ ವಿಶ್ವಾಸ ವ್ಯಕ್ತಪಡಿಸಿದರು. ವಕ್ಫ್ ಮಸೂದೆ ತಿದ್ದುಪಡಿಯಿಂದ ಬಡವರು ಮತ್ತು ಪಸ್ಮಾಂಡ ಮುಸ್ಲಿಮರು ತುಂಬಾ ಸಂತೋಷವಾಗಿದ್ದಾರೆ. ಇದು ಅವರ ಬದುಕಿನಲ್ಲಿ ಹೊಸ ಭರವಸೆಯ ಕಿರಣವನ್ನು ತಂದಿದೆ. ಈ ಮಸೂದೆ ಮುಸ್ಲಿಮರಿಗೆ ಅಭಿವೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಸೂದೆಯನ್ನು ವಿರೋಧಿಸಿದವರನ್ನು ಟೀಕಿಸಿದ ಅವರು, ಈ ಮಸೂದೆಯನ್ನು ವಿರೋಧಿಸಿದವರು ಹುಸಿ-ಜಾತ್ಯತೀತರು. ಅವರು ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಹುಸಿ ಜಾತ್ಯತೀತ ಮೌಲಾನಾಗಳು ಮುಸ್ಲಿಮರನ್ನು ಮೋಸಗೊಳಿಸುತ್ತಿದ್ದಾರೆ. ಪ್ರತಿಯೊಬ್ಬ ಮುಸ್ಲಿಮನೂ ತನ್ನ ಮತ್ತು ವಕ್ಫ್‌ನ ವಾಸ್ತವತೆಯನ್ನು ಗುರುತಿಸಬೇಕು ಎಂದು ರಶೀದ್ ಹೇಳಿದರು. ಮಸೂದೆ ಅಂಗೀಕಾರದ ಬಳಿಕ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಿಲುವಿನ ಬಗ್ಗೆಯೂ ರಶೀದ್ ಟೀಕಿಸಿ, ಅವರ ನಿಲುವು ನಕಾರಾತ್ಮಕವಾಗಿದೆ ಎಂದು ಹೇಳಿದರು.



ಪಸ್ಮಾಂಡ ಮುಸ್ಲಿಮರು ಎಂದರೆ ಯಾರು ?

ಹಿಂದೂಗಳಂತೆ ಮುಸ್ಲಿಮರಲ್ಲೂ ಅನೇಕ ಜಾತಿಗಳಿವೆ. ಸಾಮಾನ್ಯವಾಗಿ ಮುಸ್ಲಿಮರನ್ನು ಮೂರು ಸಾಮಾಜಿಕ ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಅಶ್ರಫ್ ಎಂದರೆ ಗಣ್ಯರು, ಅಜ್ಲಾಫ್ ಎಂದರೆ ಹಿಂದುಳಿದ ವರ್ಗದ ಮುಸ್ಲಿಮರು ಮತ್ತು ಅರ್ಜಾಲ್ ಎಂದರೆ ಅತ್ಯಂತ ತುಳಿತಕ್ಕೊಳಗಾದ ಮುಸ್ಲಿಮರು ಎಂದು ಗುರುತಿಸಲಾಗಿದೆ. ಪಸ್ಮಾಂಡವು ಅಜ್ಲಾಫ್ ಮತ್ತು ಅರ್ಜಲ್ ಮುಸ್ಲಿಮರನ್ನು ಒಳಗೊಂಡಿದೆ. ಪಸ್ಮಾಂಡ ಎಂಬುದು ಪರ್ಷಿಯನ್ ಪದವಾಗಿದ್ದು, ಇದರರ್ಥ ಬಿಟ್ಟು ಹೋಗುವುದು ಎಂದಾಗಿದೆ. ಭಾರತದಲ್ಲಿ ಇವರ ಸಂಖ್ಯೆ ಅತೀ ಹೆಚ್ಚಾಗಿದೆ. ಒಟ್ಟು ಮುಸ್ಲಿಂ ಜನಸಂಖ್ಯೆಯ ಶೇ. 85ರಷ್ಟು ಮಂದಿ ಈ ವರ್ಗಕ್ಕೆ ಸೇರಿದವರಾಗಿದ್ದಾರೆ.

ಮಸೂದೆ ಅಂಗೀಕಾರದ ಕ್ಷಣ

ಸುದೀರ್ಘ ಚರ್ಚೆಯ ಬಳಿಕ ಶುಕ್ರವಾರ ಮುಂಜಾನೆ ಸಂಸತ್ತು ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು. ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧಂಖರ್ ಮತದಾನದ ಫಲಿತಾಂಶವನ್ನು ಘೋಷಿಸಿ ಮಸೂದೆ ಅಂಗೀಕರಿಸಲಾಗಿದೆ ಎಂದು ಹೇಳಿದರು. ಈ ಮಸೂದೆಯ ಅಂಗೀಕಾರಕ್ಕೆ ಸದನವು ತನ್ನ ಅಧಿವೇಶನವನ್ನು ಮಧ್ಯರಾತ್ರಿವರೆಗೂ ಮುಂದುವರಿಸಿತ್ತು.

ಇದನ್ನೂ ಓದಿ: Kiren Rijiju: ಲೋಕಸಭೆಯ ಬಳಿಕ ರಾಜ್ಯಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ

ಕಿರಣ್ ರಿಜಿಜು ಹೇಳಿದ್ದೇನು?

ಈ ಮಸೂದೆ ಕುರಿತು ಮಾತನಾಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಿರೋಧ ಪಕ್ಷವು ಮಸೂದೆಯ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪರಿಷ್ಕೃತ ಮಸೂದೆಯು ಜಂಟಿ ಸಂಸದೀಯ ಸಮಿತಿಯಿಂದ ಹಲವಾರು ಶಿಫಾರಸುಗಳನ್ನು ಒಳಗೊಂಡಿದೆ. ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ ದಕ್ಷತೆ ಮತ್ತು ಅಭಿವೃದ್ಧಿ ಮಸೂದೆ ಎಂದು ಮರುನಾಮಕರಣ ಮಾಡುವುದಾಗಿ ಅವರು ಹೇಳಿದರು.