ನವದೆಹಲಿ: ಬಾಲಿವುಡ್ (Bollywood) ಬೆಡಗಿ, ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ (Deepika Padukone) ಕಠಿಣ ಪರಿಶ್ರಮದಿಂದ ಸಿನಿರಂಗದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಪ್ರವೇಶಿಸಿ ತಮ್ಮ ಪ್ರತಿಭೆಯಿಂದಲೇ ಬಾಲಿವುಡ್ ಅಂಗಳದಲ್ಲಿ ನಂಬರ್ ಒನ್ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸಹಜ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ದೀಪಿಕಾಗೆ ಇದೀಗ ಕೇಂದ್ರ ಸರ್ಕಾರ (Central Government) ಮಾತೊಂದು ಮಹತ್ತರ ಜವಾಬ್ದಾರಿಯನ್ನು ನೀಡಿದೆ.
ಹೌದು, ಕನ್ನಡತಿ ದೀಪಿಕಾ ಪಡುಕೋಣೆ ಅವರನ್ನು ಭಾರತ ಸರ್ಕಾರದ ಮಾನಸಿಕ ಆರೋಗ್ಯದ ರಾಯಭಾರಿಯನ್ನಾಗಿ (Mental Health Ambassador) ನೇಮಕ ಮಾಡಲಾಗಿದೆ. ಕೇಂದ್ರದ ಆರೋಗ್ಯ (Union Health Ministry) ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗ ಆದೇಶ ಹೊರಡಿಸಿದೆ. ದೇಶದ ಮೊದಲ ಮಾನಸಿಕ ಆರೋಗ್ಯದ ರಾಯಭಾರಿ ಎನ್ನುವ ಹೆಗ್ಗಳಿಕೆಗೆ ದೀಪಿಕಾ ಪಾತ್ರವಾಗಿದ್ದು, ಮಾನಸಿಕ ಆರೋಗ್ಯವನ್ನು ಬೆಂಬಲಿಸಲು ಇದು ಪ್ರಮುಖ ಹೆಜ್ಜೆ ಆಗಲಿದೆ.
ಈ ಸುದ್ದಿಯನ್ನು ಓದಿ: Viral Video: ಖ್ಯಾತ ಗಾಯಕಿ ಬಿಲ್ಲಿ ಎಲಿಷ್ ಕೈ ಹಿಡಿದು ಎಳೆದ ಅಭಿಮಾನಿ; ಇಲ್ಲಿದೆ ವೈರಲ್ ವಿಡಿಯೊ
ಈ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ದೀಪಿಕಾ ಪಡುಕೋಣೆ ತಾವು ಅನುಭವಿಸಿದ ಆತಂಕದ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಧೈರ್ಯವಾಗಿ ಹಂಚಿಕೊಂಡಿದ್ದರು. ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಅಷ್ಟು ಮಾತ್ರವಲ್ಲದೇ ಮಾನಸಿಕ ಖಿನ್ನತೆ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಿಸುವ ಉದ್ದೇಶದಿಂದ 2015ರಲ್ಲಿ ದಿ ಲಿವ್ ಲವ್ ಲಾಫ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಆ ಮೂಲಕ ಮಾಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಈ ರಾಯಭಾರತ್ವವನ್ನು ಘೋಷಣೆ ಮಾಡಿದ್ದು, ಈ ಆಯ್ಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಪೋಸ್ಟ್ ಹಂಚಿಕೊಂಡಿದ್ದಾರೆ. “ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ಆಯ್ಕೆ ಆಗಿರುವುದು ನನಗೆ ಗೌರವದ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಪ್ರತಿಯೋರ್ವ ಪ್ರಜೆಯ ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ.
ಇನ್ನು ದೀಪಿಕಾ ಅವರ ಈ ಪೋಸ್ಟ್ ಗೆ ಪತಿ ರಣವೀರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, "ನಿಮ್ಮ ಈ ಸಾಧನೆಯ ಬಗ್ಗೆ ತುಂಬಾ ಹೆಮ್ಮೆ ಆಗುತ್ತಿದೆ” ಎಂದು ಕಮೆಂಟ್ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸಂಬಂಧ ನಟಿ ದೀಪಿಕಾ ಪಡುಕೋಣೆ ದೆಹಲಿಯಲ್ಲಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಮಾತನಾಡಿರುವ ನಡ್ಡಾ, ʼʼಮಾನಸಿಕ ಆರೋಗ್ಯ ಸಾರ್ವಜನಿಕ ಆರೋಗ್ಯದ ಅವಿಭಾಜ್ಯ ಅಂಗ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದ್ದು, ನಟಿ ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯದ ಅಂಬಾಸಿಡರ್‌ಗೆ ಸೂಕ್ತ ವ್ಯಕ್ತಿʼʼ ಎಂದಿದ್ದಾರೆ.