ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; ಸಚಿವರ ವಿದೇಶ ಪ್ರಯಾಣಕ್ಕೆ ಕೋಕ್
ಮಧ್ಯ ಪ್ರಾಚ್ಯದ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂಧನ ಉಳಿತಾಯಕ್ಕಾಗಿ 'ವರ್ಕ್ ಫ್ರಮ್ ಹೋಮ್' ಮಾಡುವಂತೆ ಸಲಹೆ ನೀಡಿದ ಬಳಿಕ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಗುರುವಾರ ಸರ್ಕಾರಿ ನೌಕರರಿಗೆ ವಾರಕ್ಕೆ ಎರಡು ದಿನ ಮನೆಯಿಂದಲೇ ಕೆಲಸ ಮತ್ತು ವಾಹನಗಳ ಕನಿಷ್ಠ ಬಳಕೆ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಮಧ್ಯ ಪ್ರಾಚ್ಯದ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂಧನ ಉಳಿತಾಯಕ್ಕಾಗಿ 'ವರ್ಕ್ ಫ್ರಮ್ ಹೋಮ್' (Work From Home) ಮಾಡುವಂತೆ ಸಲಹೆ ನೀಡಿದ ಬಳಿಕ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (CM Rekha Gupta) ಅವರು ಗುರುವಾರ ಸರ್ಕಾರಿ ನೌಕರರಿಗೆ ವಾರಕ್ಕೆ ಎರಡು ದಿನ ಮನೆಯಿಂದಲೇ ಕೆಲಸ ಮತ್ತು ವಾಹನಗಳ ಕನಿಷ್ಠ ಬಳಕೆ ಘೋಷಿಸಿದ್ದಾರೆ. ದೆಹಲಿ ಸರ್ಕಾರದ ಈ ನಿರ್ಧಾರ ನಾಳೆಯಿಂದಲೇ ಜಾರಿಗೆ ಬರಲಿದೆ.
ಈಗಾಗಲೇ ಮುಖ್ಯಮಂತ್ರಿ ರೇಖಾ ಗುಪ್ತ ತಮ್ಮ ಅಧಿಕೃತ ಬೆಂಗಾವಲು ವಾಹನವನ್ನು ಪರಿಷ್ಕೃತಗೊಳಿಸಿದ್ದು, ಸದ್ಯ ನಾಲ್ಕು ವಾಹನಗಳನ್ನು ಬಳಸುತ್ತಿದ್ದಾರೆ. ಅದರಲ್ಲಿ ಎರಡು ಕಾರುಗಳು ಇವಿ ಮೊಡೆಲ್‌ಗೆ ಸೇರಿವೆ. ಇಂಧನ ಉಳಿತಾಯ ಮತ್ತು ದಕ್ಷ ಆಡಳಿತವನ್ನು ಉತ್ತೇಜಿಸಲು ಬಿಜೆಪಿ ನೇತೃತ್ವದ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ "ಮೇರಾ ಭಾರತ್ ಮೇರಾ ಯೋಗದಾನ್"(ನನ್ನ ಭಾರತ, ನನ್ನ ಕೊಡುಗೆ) ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ದೆಹಲಿಯಲ್ಲಿ ಮುಂದಿನ ಆರು ತಿಂಗಳವರೆಗೆ ಯಾವುದೇ ಹೊಸ ಪೆಟ್ರೋಲ್, ಡೀಸೆಲ್ ಅಥವಾ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ. ಇನ್ನೂ ಸರ್ಕಾರಿ ನೌಕರರಿಗೆ ಸಾರಿಗೆ ಭತ್ಯೆಯನ್ನು ಶೇ. 10 ರಷ್ಟು ಹೆಚ್ಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ದೆಹಲಿ ಸರ್ಕಾರದ ಯಾವುದೇ ಸಚಿವರು ಅಥವಾ ಅಧಿಕಾರಿಗಳು ಮುಂದಿನ ಒಂದು ವರ್ಷದವರೆಗೆ ಯಾವುದೇ ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ ಎಂದು ಸರ್ಕಾರ ಹೇಳಿದೆ. ಹೆಚ್ಚುವರಿಯಾಗಿ, ಜಾಗೃತಿ ಮೂಡಿಸಲು 90 ದಿನಗಳ ಅಭಿಯಾನ ನಡೆಸಲಾಗುವುದು. ಇಂಧನ ಉಳಿತಾಯವನ್ನು ಉತ್ತೇಜಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರತಿಜ್ಞೆಯನ್ನು ನಾಗರಿಕರಿಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಆಮದು ಹೊರೆಯಾಗಿರುವ ಖಾದ್ಯ ತೈಲ ಬೆಳೆಗಳನ್ನು ಭಾರತದಲ್ಲೇ ಏಕೆ ಹೆಚ್ಚು ಉತ್ಪಾದಿಸಬಾರದು?
ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹವಾನಿಯಂತ್ರಣ ಯಂತ್ರಗಳನ್ನು 24 ರಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆ ಹೊಂದಿಸಲು ನಿರ್ಧರಿಸಲಾಗಿದೆ. ಅನಗತ್ಯ ವಿದ್ಯುತ್ ವ್ಯರ್ಥವಾಗುವುದನ್ನು ತಡೆಯಲು ಸರ್ಕಾರಿ ಕಚೇರಿಗಳಲ್ಲಿ ಮಾಸ್ಟರ್ ಸ್ವಿಚ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ.
ಭಾನುವಾರ ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮಗಳಿಂದ ಭಾರತೀಯ ಆರ್ಥಿಕತೆಯನ್ನು ರಕ್ಷಿಸಲು ಸಾಮೂಹಿಕವಾಗಿ ಕೊಡುಗೆ ನೀಡಬೇಕೆಂದು ನಾಗರಿಕರನ್ನು ಕೋರಿದ್ದರು.