Delhi Baba Arrested: 17 ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ; ದೂರು ದಾಖಲಾದ 50 ದಿನಗಳ ಬಳಿಕ ಸ್ವಾಮಿ ಚೈತನ್ಯಾನಂದ ಸರಸ್ವತಿ ಬಂಧನ
ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ನ ನಿರ್ದೇಶಕ ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. 17 ಮಹಿಳೆಯರಿಗೆ ಲೈಂಗಿಕ ಕಿರುಕುಳ ಸೇರಿದಂತೆ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

-

ನವದೆಹಲಿ: ಲೈಂಗಿಕ ಕಿರುಕುಳ ಆರೋಪದಲ್ಲಿ ಸ್ವಯಂ ಘೋಷಿತ 'ದೇವಮಾನವ' ದೆಹಲಿಯ (Delhi) ವಸಂತ್ ಕುಂಜ್ (Vasant Kunj) ಪ್ರದೇಶದಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ನ (Sri Sharada Institute of Indian Management) ನಿರ್ದೇಶಕ ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು (Chaitanyananda Saraswati) ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ 17 ಮಹಿಳೆಯರಿಗೆ ಕಿರುಕುಳ, ನಿಂದನೀಯ ಭಾಷೆ ಬಳಕೆ, ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುವುದು ಸೇರಿದಂತೆ ಹಲವು ದೂರು ದಾಖಲಿಸಲಾಗಿದೆ.
ದೆಹಲಿಯ ಆಶ್ರಮದಲ್ಲಿ 17 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ ಆರೋಪದ ಮೇರೆಗೆ ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ಖಾಸಗಿ ನಿರ್ವಹಣಾ ಸಂಸ್ಥೆಯ ನಿರ್ದೇಶಕನಾಗಿರುವ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.
ಸುಮಾರು 50 ದಿನಗಳ ಕಾಲ ಬಂಧನದಿಂದ ತಪ್ಪಿಸಿಕೊಂಡ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸಾರಥಿಯನ್ನು ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ಆಗ್ರಾದ ತಾಜ್ ಗಂಜ್‌ನಲ್ಲಿರುವ ಹೊಟೇಲ್ ಫಸ್ಟ್‌ನಲ್ಲಿ ಬಂಧಿಸಲಾಗಿದೆ. ಆಗಸ್ಟ್ 4 ರಂದು ಬಂಧನಕ್ಕೆ ಸಂಬಂಧಿಸಿ ಸಂಸ್ಥೆಗೆ ದೂರು ಬಂದ ಕೂಡಲೇ ಆತ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ.
ವಿದ್ಯಾರ್ಥಿನಿಯರಿಗೆ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯು ಚೈತನ್ಯಾನಂದ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಹಳೆ ವಿದ್ಯಾರ್ಥಿಯೊಬ್ಬರು ಪತ್ರ ಬರೆದಿದ್ದರು. ಇದು ತಲುಪಿದ ಮರುದಿನ ವಾಯುಪಡೆಯ ಶಿಕ್ಷಣ ನಿರ್ದೇಶನಾಲಯದ ಗ್ರೂಪ್ ಕ್ಯಾಪ್ಟನ್ ಶ್ರೇಣಿಯ ಅಧಿಕಾರಿಯೊಬ್ಬರು ಸಂಸ್ಥೆಗೆ ಇಮೇಲ್ ಕಳುಹಿಸಿದ್ದಾರೆ. ಇದರಲ್ಲಿ ಬಾಬಾ ತಮಗೆ ಬೆದರಿಕೆ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಹಲವಾರು ವಿದ್ಯಾರ್ಥಿಗಳು ದೂರುಗಳನ್ನು ಸಲ್ಲಿಸಿದ್ದಾರೆ. ಸಂಸ್ಥೆಯಲ್ಲಿರುವ ಅನೇಕ ವಿದ್ಯಾರ್ಥಿಗಳು ವಾಯುಪಡೆಯ ಸಿಬ್ಬಂದಿಯ ಕುಟುಂಬಗಳಿಂದ ಬಂದವರಾಗಿರುವುದರಿಂದ ವಾಯುಪಡೆ ನಿರ್ದೇಶನಾಲಯ ಮಧ್ಯ ಪ್ರವೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ ಆರಂಭದಲ್ಲಿ 17 ಮಹಿಳೆಯರು ಜಂಟಿಯಾಗಿ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಈ ಕುರಿತುಬ ದೂರುಗಳನ್ನು ದಾಖಲಿಸಿದ್ದಾರೆ. ದೆಹಲಿ ಬಾಬಾ ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡ್ಲ್ಯುಎಸ್) ವಿಭಾಗದಲ್ಲಿ ವಿದ್ಯಾರ್ಥಿ ವೇತನ ಪಡೆಯುತ್ತಿರುವ ಸ್ನಾತಕೋತ್ತರ ನಿರ್ವಹಣಾ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆತ ವಿದ್ಯಾರ್ಥಿಗಳನ್ನು ತನ್ನ ಕೋಣೆಗೆ ಕರೆಸಿಕೊಂಡು ಉಚಿತ ವಿದೇಶ ಪ್ರವಾಸಗಳ ಆಮಿಷ ಒಡ್ಡುತ್ತಿದ್ದ. ಅಲ್ಲದೆ ಸಂತ್ರಸ್ತರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಮಹಿಳಾ ಹಾಸ್ಟೆಲ್‌ನಲ್ಲಿ ರಹಸ್ಯವಾಗಿ ಕ್ಯಾಮರಾಗಳನ್ನು ಅಳವಡಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಗಳು ಕೇಳಿ ಬಂದ ಬಳಿಕ ಆಶ್ರಮದ ಆಡಳಿತ ಮಂಡಳಿಯು ಚೈತನ್ಯಾನಂದನನ್ನು ತನ್ನ ಹುದ್ದೆಯಿಂದ ಹೊರಹಾಕಿತ್ತು. ದೆಹಲಿಯಲ್ಲಿರುವ ಆಶ್ರಮ ಘಟಕವು ದಕ್ಷಿಣ ಭಾರತದ ಪ್ರಮುಖ ಆಶ್ರಮವಾದ ಶೃಂಗೇರಿಯಲ್ಲಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಒಂದು ಶಾಖೆಯಾಗಿದೆ. ಈ ಸಂಸ್ಥೆಯು ಚೈತನ್ಯಾನಂದನ ಕೃತ್ಯಗಳನ್ನು ಅನುಚಿತ ಎಂದು ಹೇಳಿದೆ.
ಯಾರು ಈ ಚೈತನ್ಯಾನಂದ?
ಒಡಿಶಾದಲ್ಲಿ ಜನಿಸಿದ ಚೈತನ್ಯಾನಂದ ಆ್ಯಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಮುನ್ನುಡಿ ಮತ್ತು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರ ಮೆಚ್ಚುಗೆಯ ಸಂದೇಶವನ್ನು ಒಳಗೊಂಡ 28 ಪುಸ್ತಕಗಳನ್ನು ಬರೆದಿದ್ದಾನೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಚೈತನ್ಯಾನಂದನ ಪುಸ್ತಕ 'ಟ್ರಾನ್ಸ್‌ಫಾರ್ಮಿಂಗ್ ಪರ್ಸನಾಲಿಟಿ'ಯನ್ನು ಹಲವು ಬಾರಿ ಉಲ್ಲೇಖಿಸಿದ್ದರು. 2007ರಲ್ಲಿ ಯುರೋಪಿಯನ್ ಮತ್ತು ಉತ್ತರ ಅಮೆರಿಕಾದ ಮಾರುಕಟ್ಟೆಗಳಲ್ಲಿ ಇದು ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದು ಎನ್ನಲಾಗಿದೆ.
ಇದನ್ನೂ ಓದಿ: Mann Ki Baat: RSSಗೆ ಶತಕದ ಸಂಭ್ರಮ; ಕಾರ್ಯಕರ್ತರ ಬದ್ಧತೆಯನ್ನು ಶ್ಲಾಘಿಸಿದ ಮೋದಿ
ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಮತ್ತು ಪಿಎಚ್‌ಡಿ ಪದವಿ ಪಡೆದಿರುವ ಚೈತನ್ಯಾನಂದ ಪೋಸ್ಟ್-ಡಾಕ್ಟರಲ್ ಪದವಿಗಳು ಮತ್ತು ಡಿಲಿಟ್ ಅನ್ನು ಪೂರ್ಣಗೊಳಿಸಿದ್ದಾನೆ. ಭಾರತ ಮತ್ತು ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳಿಂದ ಏಳು ಗೌರವ ಡಿಲಿಟ್ ಪದವಿಗಳನ್ನೂ ಪಡೆದಿದ್ದಾನೆ ಎನ್ನಲಾಗಿದೆ.