ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಬರಿ ಮಸೀದಿ ಧ್ವಂಸಗೊಂಡ ದಿನದಂತೆ ಬ್ಲಾಸ್ಟ್‌ಗೆ ಪ್ಲ್ಯಾನ್‌; ಬಗೆದಷ್ಟು ಬಯಲಾಗ್ತಿದೆ ಸೂಸೈಡ್‌ ಬಾಂಬರ್‌ನ ಸಂಚು!

Delhi bomb Blast: ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತನ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ತನಿಖಾಧಿಕಾರಿಗಳ ಪ್ರಾಥಮಿಕ ವರದಿಯ ಪ್ರಕಾರ, ಆರೋಪಿತನು ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವದಂದು ಭಾರಿ ದಾಳಿ ನಡೆಸುವ ಯೋಜನೆ ರೂಪಿಸಿದ್ದಾನೆ ಎಂದು ತಿಳಿದುಬಂದಿದೆ. ಭದ್ರತಾ ಇಲಾಖೆ ಈ ಕುರಿತು ತೀವ್ರ ತನಿಖೆ ನಡೆಸುತ್ತಿದೆ.

ದಿಲ್ಲಿ ಬಾಂಬ್‌ ಸ್ಫೋಟದ ರೂವಾರಿ ಉಮರ್‌ ನಬಿ

ನವದೆಹಲಿ: ರಾಷ್ಟ್ರ ರಾಜಧಾನಿಯ ಐತಿಹಾಸಿಕ ಕೆಂಪುಕೋಟೆ ಬಳಿ ಸ್ಫೋಟಗೊಂಡ(Delhi bomb Blast) ಕಾರನ್ನು ಚಲಾಯಿಸುತ್ತಿದ್ದ ಉಗ್ರಗಾಮಿ ಡಾ. ಉಮರ್ ನಬಿ, ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸಗೊಂಡ ದಿನದಂದು ಪ್ರಬಲ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ. ಭದ್ರತಾ ಇಲಾಖೆ ಈ ಕುರಿತು ತೀವ್ರ ತನಿಖೆ ನಡೆಸುತ್ತಿದೆ.

ಫರಿದಾಬಾದ್‍ನಲ್ಲಿ ಕೇಂದ್ರೀಕೃತವಾಗಿರುವ ಅಂತಾರಾಜ್ಯ ವೈಟ್-ಕಾಲರ್ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕಾ ಮಾಡ್ಯೂಲ್‍ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಬಂಧಿಸಲ್ಪಟ್ಟ ಎಂಟು ಜನರನ್ನು ವಿಚಾರಣೆ ನಡೆಸಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರನ್ನು ವಿಚಾರಿಸಿದ ನಂತರ ಈ ಆತಂಕಕಾರಿ ವಿವರಗಳು ಬಹಿರಂಗಗೊಂಡಿವೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಯಾಗಿರುವ 28 ವರ್ಷದ ವೈದ್ಯ, ಸೋಮವಾರದಂದು ಕೆಂಪು ಕೋಟೆಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾನೆ. ಘಟನೆಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶವನ್ನು ವ್ಯಾಪಿಸಿರುವ ಭಯೋತ್ಪಾದಕ ಸಂಘಟನೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Delhi Blast: ಸ್ಫೋಟಗೊಂಡ ಕಾರ್‌ ಚಲಾಯಿಸುತ್ತಿದ್ದವನೇ ಡಾ. ಉಮರ್‌, ಡಿಎನ್‌ಎ ವರದಿಯಲ್ಲಿ ಬಯಲು

ಉಗ್ರ ಡಾ. ಉಮರ್‌ನ ಸಹಾಯಕ ಫರಿದಾಬಾದ್‌ನ ಅಲ್ ಫಲಾಹ್ ವಿವಿಯ ಪ್ರಾಧ್ಯಾಪಕ ಡಾ. ಮುಜಮ್ಮಿಲ್ ಶಕೀಲ್‍ನನ್ನು ಪೊಲೀಸರು ಬಂಧಿಸಿ, ಆತನ ಕೊಠಡಿಯಿಂದ 360 ಕೆಜಿ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಂಡರು. ಇದರಿಂದ ಇವರ ಯೋಜನೆ ವಿಫಲವಾಯಿತು. ಮುಜಮ್ಮಿಲ್ ಬಂಧನದ ಸುದ್ದಿ ಕೇಳಿ ಭೀತಿಗೊಂಡ ಉಮರ್ ಆತುರಾತುರವಾಗಿ ಕೆಂಪು ಕೋಟೆ ಪ್ರದೇಶದಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿ ಸ್ಫೋಟಿಸಿದ್ದಾನೆ ಎಂದು ಹೇಳಲಾಗಿದೆ.

ಉಮರ್ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. 2021ರಲ್ಲಿ ಡಾ. ಶಕೀಲ್ ಜೊತೆ ಟರ್ಕಿಗೆ ಪ್ರವಾಸ ಕೈಗೊಂಡ ನಂತರ ಸೈದ್ಧಾಂತಿಕವಾಗಿ ತೀವ್ರ ಬದಲಾವಣೆಗೆ ಒಳಗಾದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೇಟಿಯ ಸಮಯದಲ್ಲಿ, ಇಬ್ಬರೂ ನಿಷೇಧಿತ ಜೆಇಎಂ ಸಂಘಟನೆಯ ಉಗ್ರಗಾಮಿಗಳೊಂದಿಗೆ ಸಂಪರ್ಕಕ್ಕೆ ಬಂದರು ಎನ್ನಲಾಗಿದೆ. ಪ್ರವಾಸದ ಸಮಯದಲ್ಲಿ ಇಬ್ಬರೂ ನಿಷೇಧಿತ ಜೆಇಎಂನ ಭಯೋತ್ಪಾದಕರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.

ಅಲ್ಲಿಂದ ಹಿಂದಿರುಗಿದ ನಂತರ ಉಮರ್, ಅಲ್-ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್‌ನಂತಹ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದನು ಎಂದು ಆರೋಪಿಸಲಾಗಿದೆ. ಅವನು ಸುಧಾರಿತ ಸ್ಫೋಟಕ ಸಾಧನ (VBIED) ಅನ್ನು ನಿರ್ಮಿಸುತ್ತಿದ್ದನೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ನವೆಂಬರ್ 10 ರಂದು, ಫರಿದಾಬಾದ್ ಪೊಲೀಸರು ಡಾ. ಶಕೀಲ್ ಜಾಲದಿಂದ 360 ಕೆಜಿ ಸೇರಿದಂತೆ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಸುದ್ದಿ ಹೊರಬೀಳುತ್ತಿದ್ದಂತೆ ಉಮರ್ ಭಯಭೀತನಾಗಿದ್ದ ಎನ್ನಲಾಗಿದೆ. ಬಳಿಕ ಆತ ಆತುರಾತುರವಾಗಿ ದೆಹಲಿ ಸ್ಫೋಟಿಸಲು ಮುಂದಾದ. ಇದಕ್ಕಾಗಿ ಆತ ಸಮಯ ಕಾದು, ಜನದಟ್ಟಣೆ ಹೆಚ್ಚಾದ ವೇಳೆ ಕಾರನ್ನು ಸ್ಫೋಟಿಸಿದ್ದಾನೆ.

ಇದನ್ನೂ ಓದಿ: Delhi Blast: ದೆಹಲಿ ಸ್ಫೋಟವನ್ನು ಉಗ್ರರ ಭೀಕರ ಕೃತ್ಯ ಎಂದು ಘೋಷಿಸಿದ ಕೇಂದ್ರ ಸರ್ಕಾರ; ಶೀಘ್ರದಲ್ಲೇ ಪ್ರತೀಕಾರ?

ಇಲ್ಲಿಯವರೆಗೆ ಬಂಧಿಸಲಾದ ಎಂಟು ಜನರಲ್ಲಿ ಏಳು ಮಂದಿ ಕಾಶ್ಮೀರದವರು. ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್, ಯಾಸಿರ್-ಉಲ್-ಅಶ್ರಫ್, ಮಕ್ಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹಿದ್, ಇವರೆಲ್ಲರೂ ಶ್ರೀನಗರದ ನೌಗಮ್‌ನವರು, ಮೌಲ್ವಿ ಇರ್ಫಾನ್ ಅಹ್ಮದ್‌ನು ಶೋಪಿಯಾನ್ ಮೂಲದವ, ಜಮೀರ್ ಅಹ್ಮದ್ ಅಹಂಗರ್ ಅಲಿಯಾಸ್ ಮುತ್ಲಾಶಾನು ಗಂದೇರ್ಬಲ್ ಮೂಲದವ, ಡಾ. ಮುಜಮ್ಮಿಲ್ ಶಕೀಲ್‍ನು ಪುಲ್ವಾಮಾ ಮೂಲದವ, ಮತ್ತು ಡಾ. ಆದಿಲ್‍ನು ಕುಲ್ಗಾಮ್‌ ಮೂಲದವನು. ಎಂಟನೇ ಆರೋಪಿ ಡಾ. ಶಾಹೀನ್ ಸಯೀದ್ ಲಖನೌ ಮೂಲದವನು.

ತನಿಖಾಧಿಕಾರಿಗಳು ಹೇಳುವಂತೆ ಉಮರ್ ಅಕ್ಟೋಬರ್ 26 ರಂದು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದನು. ನಂತರ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿಯಾಗಿ ಫರಿದಾಬಾದ್‌ಗೆ ಹಿಂತಿರುಗಿದನು. ಮುಂದಿನ ಮೂರು ತಿಂಗಳ ಕಾಲ ತಾನು ಲಭ್ಯವಿರುವುದಿಲ್ಲ ಎಂದು ಅವನು ಅವರಿಗೆ ಹೇಳಿದ್ದನೆಂದು ವರದಿಯಾಗಿದೆ. ನಂತರ ವಿಚಾರಣೆಯ ಸಮಯದಲ್ಲಿ ಹಲವಾರು ಪರಿಚಯಸ್ಥರು ಈ ಹೇಳಿಕೆಯನ್ನು ದೃಢಪಡಿಸಿದರು. ದಾಳಿಯ ನಂತರ ಅವನು ಭೂಗತವಾಗಲು ಯೋಜಿಸಿದ್ದ ಎಂಬುದನ್ನು ಇದು ಸೂಚಿಸುತ್ತದೆ.

ಅಕ್ಟೋಬರ್ 19 ರಂದು ಕಾಶ್ಮೀರದಲ್ಲಿ ಅಂಟಿಸಲಾದ ಜೆಇಎಂ ಬೆಂಬಲಿತ ಪೋಸ್ಟರ್‌ ಪ್ರಕರಣವನ್ನು ಶ್ರೀನಗರ ಪೊಲೀಸರು ತನಿಖೆ ನಡೆಸಿದಾಗ ಈ ಜಾಡು ಪ್ರಾರಂಭವಾಯಿತು. ಸಿಸಿಟಿವಿ ದೃಶ್ಯಾವಳಿಗಳು ಡಾ. ಶಕೀಲ್ ಬಂಧನಕ್ಕೆ ಕಾರಣವಾಯಿತು. ಇದು ಕಾಶ್ಮೀರದ ಗಡಿಯನ್ನು ಮೀರಿ ವ್ಯಾಪಕವಾದ 'ವೈಟ್-ಕಾಲರ್' ಭಯೋತ್ಪಾದಕ ಮಾಡ್ಯೂಲ್ ಅನ್ನು ಬಹಿರಂಗಪಡಿಸಿತು.