ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಜೆಪಿಯ ತ್ರಿರಂಗ ಸಭೆಗೆ ಜನ ಸೇರಬೇಡಿ: ಸಾರ್ವಜನಿಕರಿಗೆ ದೆಹಲಿ ಪೊಲೀಸರಿಂದ ಮನವಿ!

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಕ್ಟೋಬರ್ 16ರಂದು ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಆಯೋಜಿಸಿರುವ ತ್ರಿವರ್ಣ ಸಮಾವೇಶದಲ್ಲಿ ಭಾಗವಹಿಸದಂತೆ ದೆಹಲಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಆಡಳಿತಾತ್ಮಕ ಕಾರಣಗಳಿಂದ ಅಕ್ಟೋಬರ್ 16 ಮತ್ತು 17ರಂದು ಸೆಂಟ್ರಲ್ ಪಾರ್ಕ್ ಮುಚ್ಚಲಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಸಿಜೆಪಿಯ ತ್ರಿವರ್ಣ ಸಮಾವೇಶಕ್ಕೆ ಬ್ರೇಕ್?

ದೆಹಲಿ ಪೊಲೀಸ್ -

Profile
Sushmitha Jain Oct 16, 2026 12:43 PM

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಅಕ್ಟೋಬರ್ 16ರ ಶುಕ್ರವಾರದಂದು ಕನ್ನಾಟ್ ಪ್ಲೇಸ್‌ (Connaught Place)ನ ಸೆಂಟ್ರಲ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ 'ತ್ರಿರಂಗಾ (Tiranga)' ಸಮಾವೇಶದಲ್ಲಿ ಸಾರ್ವಜನಿಕರು ಭಾಗವಹಿಸದಂತೆ ದೆಹಲಿ ಪೊಲೀಸರು (Delhi Police) ಗುರುವಾರ ಮನವಿ ಮಾಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, ಜಂತರ್ ಮಂತರ್ ಪ್ರವೇಶಿಸಿ ಜೈಲು ಪಾಲಾಗಿರುವ ತಮ್ಮ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರ ಬಂಧನವನ್ನು ಖಂಡಿಸಿ, ರಾಷ್ಟ್ರಧ್ವಜದೊಂದಿಗೆ ಸೆಂಟ್ರಲ್ ಪಾರ್ಕ್‌ನಲ್ಲಿ ಸಂಜೆ 5 ಗಂಟೆಗೆ ಒಗ್ಗೂಡುವಂತೆ ಕರೆ ನೀಡಿದ್ದರು. ಈ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ (ಆಪ್) ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿ ಬೆಂಬಲ ಸೂಚಿಸಿವೆ. ಆದರೆ, ಆಡಳಿತಾತ್ಮಕ ಕಾರಣಗಳಿಂದಾಗಿ ಅಕ್ಟೋಬರ್ 16 ಮತ್ತು 17 ರಂದು ಸೆಂಟ್ರಲ್ ಪಾರ್ಕ್ ಸಂಪೂರ್ಣವಾಗಿ ಸಾರ್ವಜನಿಕರಿಗೆ ಮುಚ್ಚಲ್ಪಡಲಿದೆ ಎಂದು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ತಿಳಿಸಿದೆ ಎಂದು ಡಿಸಿಪಿ ನೇಹಾ ಯಾದವ್ ಹೇಳಿದ್ದಾರೆ.

ಎಸ್‌ಐಆರ್‌ ಅಕ್ರಮ ಆರೋಪ: ಅಕ್ಟೋಬರ್ 23ರಿಂದ ದೇಶಾದ್ಯಂತ ಪ್ರತಿಭಟನೆಗೆ ಸಿಜೆಪಿ ಸಜ್ಜು

ಸಾರ್ವಜನಿಕ ಶಾಂತಿ, ಮಾನವ ಜೀವ ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸಲು ಕನ್ನಾಟ್ ಪ್ಲೇಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದೆ. ಹಬ್ಬದ ದಿನಗಳಲ್ಲಿ ಪ್ರತಿಭಟನೆಯಿಂದಾಗಿ ವ್ಯಾಪಾರ ವಹಿವಾಟಿಗೆ ತೀವ್ರ ತೊಂದರೆಯಾಗಬಹುದು ಮತ್ತು ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಬಹುದು ಎಂಬ ಸ್ಥಳೀಯ ವ್ಯಾಪಾರಿಗಳ ಆತಂಕದ ನಡುವೆ, ಈ ಪ್ರತಿಭಟನೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

ಧ್ವಜಾರೋಹಣ ಮತ್ತು ರಾಷ್ಟ್ರಗೀತೆ ಹಾಡಲು ಬಯಸುವವರಿಗೆ ಪ್ರತ್ಯೇಕ ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸುವುದಾಗಿ ಹೇಳಿರುವ ಪೊಲೀಸರು, ರಾಷ್ಟ್ರಧ್ವಜ ಸಂಹಿತೆಯ ಎಲ್ಲಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ ಎಂದು ಎಚ್ಚರಿಸಿದ್ದಾರೆ. ಚುನಾವಣಾ ಆಯೋಗದ 'ವಿಶೇಷ ಸಮಗ್ರ ಪರಿಷ್ಕರಣೆ' (ಎಸ್ಐಆರ್) ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ಸಾವಿರಾರು ಮಂದಿ ಬಂಧನಕ್ಕೆ ಒಳಗಾಗಿದ್ದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ ಈ ನೂತನ ಸಮಾವೇಶಕ್ಕೆ ಕರೆ ನೀಡಲಾಗಿದ್ದು, ರಾಜಧಾನಿಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ.