Delhi Blast: ಉಗ್ರರ ಜೊತೆ ಲಿಂಕ್ ಆರೋಪ- ವಿಚಾರಣೆ ಬಳಿಕ ವೈದ್ಯೆ ರಿಲೀಸ್
ದೆಹಲಿಯ ಕೆಂಪು ಕೋಟೆ ಬಳಿ ಕಳೆದ ಸೋಮವಾರ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಹರಿಯಾಣದ ವೈದ್ಯೆಯನ್ನು ವಿಚಾರಣೆಯ ಬಳಿಕ ಬಿಡುಗಡೆ ಮಾಡಲಾಗಿದೆ. ಆಕೆಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವ ತನಿಖಾಧಿಕಾರಿಗಳು ಅದನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ: ಕಳೆದ ಸೋಮವಾರ ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಬಾಂಬ್ ಸ್ಫೋಟ (Red Fort blast case) ಪ್ರಕರಣದ ಜಾಡು ಬೆನ್ನಟ್ಟಿದ ಪೊಲೀಸರಿಗೆ ವೈಟ್-ಕಾಲರ್ ಭಯೋತ್ಪಾದನಾ ಸಂಘಟನೆಯ (white-collar terror module) ಜಾಲ ಕಾಶ್ಮೀರ (Kashmir), ದೆಹಲಿ (delhi) ಮತ್ತು ಹರಿಯಾಣದಾದ್ಯಂತ (Haryana) ವಿಸ್ತರಿಸಿರುವುದು ತಿಳಿದು ಬಂದಿದೆ. ಹಲವು ಸ್ಪೋಟಕ ರಹಸ್ಯಗಳನ್ನು ಭೇದಿಸಿರುವ ತನಿಖಾಧಿಕಾರಿಗಳು ಅನಂತ್‌ನಾಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹರಿಯಾಣದ ವೈದ್ಯೆಯನ್ನು (Haryana woman doctor) ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಭಯೋತ್ಪಾದನೆ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಆಕೆಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ.
ಜಮ್ಮು ಕಾಶ್ಮೀರ, ಹರಿಯಾಣ, ನವದೆಹಲಿಯೊಂದಿಗೆ ಸಂಪರ್ಕ ಹೊಂದಿರುವ ವೈಟ್ ಕಾಲರ್ ಭಯೋತ್ಪಾದನಾ ಸಂಘಟನೆಗೆ ಸಂಬಂಧಿಸಿ ದಕ್ಷಿಣ ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಿಯೋಜಿಸಲಾದ ಹರಿಯಾಣದ ಮಹಿಳಾ ವೈದ್ಯೆಯನ್ನು ಶ್ರೀನಗರದಲ್ಲಿ ವಿಚಾರಣೆಗಾಗಿ ಬಂಧಿಸಲಾಯಿತು. ಬಳಿಕ ಆಕೆಯನ್ನು ಬಿಡುಗಡೆ ಮಾಡಲಾಗಿದ್ದು, ಆಕೆಯ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: SSMB29: ಕೊಟ್ಟ ಮಾತಿಗೆ ತಪ್ಪಿ ನಡೆಯದ ರಾಜಮೌಳಿ; 'ವಾರಣಾಸಿ' ಚಿತ್ರಕ್ಕಿದೆ 15 ವರ್ಷಗಳ ಹಿಂದಿನ ಒಪ್ಪಂದದ ಇತಿಹಾಸ!
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಗುಪ್ತಚರ ತಂಡಗಳು ಅನಂತ್‌ನಾಗ್‌ನ ಮಲಕ್‌ನಾಗ್ ಪ್ರದೇಶದಲ್ಲಿ ಬಾಡಿಗೆ ವಸತಿಗೃಹದ ಮೇಲೆ ದಾಳಿ ನಡೆಸಿ ಹರಿಯಾಣದ ರೋಹ್ಟಕ್‌ನ ಡಾ. ಪ್ರಿಯಾಂಕಾ ಶರ್ಮಾ ಎಂಬಾಕೆಯನ್ನು ಬಂಧಿಸಿದೆ. ಆಕೆ ಅನಂತ್‌ನಾಗ್‌ನ ಜಿಎಂಸಿಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾಳೆ. ಆಕೆಯಿಂದ ವಶಕ್ಕೆ ಪಡೆದಿರುವ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಜಿಎಂಸಿಯ ಮಾಜಿ ಸಿಬ್ಬಂದಿ ಅದೀಲ್ ಬಂಧನದ ಬಳಿಕ ಆಕೆಯ ಹೆಸರು ಕೇಳಿ ಬಂದಿದ್ದು, ಆಕೆ ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾಳೆ ಎನ್ನುವ ಆರೋಪವಿದೆ.
ಕಾಶ್ಮೀರದಿಂದ ತನಿಖೆ ಆರಂಭಿಸಿರುವ ಪೊಲೀಸರು ಉತ್ತರಪ್ರದೇಶದಲ್ಲೂ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಅಲ್ಲಿ ಸುಮಾರು 200 ಕಾಶ್ಮೀರಿ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಭಯೋತ್ಪಾದನಾ ನಿಗ್ರಹ ದಳವು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಆಶ್ರಯವಾಗಿರುವ ಕಾನ್ಪುರ, ಲಕ್ನೋ, ಮೀರತ್, ಸಹರಾನ್‌ಪುರ ಮತ್ತು ಇತರ ನಗರಗಳಾದ್ಯಂತ ಇರುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ.
ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಕಾರು ಬಾಂಬ್ ಸ್ಪೋಟದ ತನಿಖೆ ಬೆನ್ನಟ್ಟಿದ ದೆಹಲಿ ಪೊಲೀಸರು ಮತ್ತು ಕೇಂದ್ರ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿದಂತೆ ಮೂವರನ್ನು ಶುಕ್ರವಾರ ರಾತ್ರಿಯೇ ಬಂಧಿಸಿದ್ದಾರೆ. ವಿಶ್ವವಿದ್ಯಾಲಯವು ಕೂಡ ಇದೀಗ ಕಾನೂನು ವಿಚಾರಣೆಯನ್ನು ಎದುರಿಸುತ್ತಿದೆ.
ಸಿಸಿಟಿವಿ ದಾಖಲೆಗಳ ಪರಿಶೀಲನೆ ಬಳಿಕ ದೆಹಲಿಯ ಓಖ್ಲಾ ವಿಶ್ವವಿದ್ಯಾಲಯಕ್ಕೆ ತೆರಳಿದ ಪೊಲೀಸರು ಇಲ್ಲಿನ ವೈದ್ಯರಾದ ಮೊಹಮ್ಮದ್ ಮತ್ತು ಮುಸ್ತಾಕಿಮ್ ನನ್ನು ಬಂಧಿಸಿದ್ದರು. ಇವರಿಬ್ಬರು ದೆಹಲಿಯಲ್ಲಿ ಸ್ಪೋಟಗೊಂಡ ಕಾರಿನ ಚಾಲಕ ಉಮರ್ ನಬಿಗೆ ಪರಿಚಿತರಾಗಿದ್ದರು ಹಾಗೂ ಭಯೋತ್ಪಾದಕ ಘಟಕದ ಡಾ. ಮುಜಮ್ಮಿಲ್ ಗನೈ ನೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ: IND vs SA: ʻಪಂದ್ಯ ಟರ್ನ್ ಆಗಿದ್ದೇ ಇಲ್ಲಿʼ-ಭಾರತ ತಂಡ ಸೋಲಲು ಪ್ರಮುಖ ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ!
ಪ್ರಕರಣಕ್ಕೆ ಸಂಬಂಧಿಸಿ ದಿನೇಶ್ ಅಲಿಯಾಸ್ ಡಬ್ಬು ಎಂಬಾತನನ್ನು ಬಂಧಿಸಲಾಗಿದೆ. ಈತ ಸ್ಫೋಟಕ ವಸ್ತುಗಳನ್ನು ಖರೀದಿಸಲು ಸುಮಾರು 26 ಲಕ್ಷ ರೂ. ಗಳನ್ನು ಸಂಗ್ರಹಿಸಿ ನೀಡಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆತ ಯಾರೊಂದಿಗೆ ಸಂಪರ್ಕದಲ್ಲಿದ್ದ ಎನ್ನುವುದನ್ನು ತಿಳಿಯಲು ವಿಚಾರಣೆ ನಡೆಸಲಾಗುತ್ತಿದೆ.
ದೆಹಲಿಯಲ್ಲಿ ಬಾಂಬ್ ಸ್ಪೋಟಕ್ಕೂ ಮೊದಲು ಉಮರ್ ವಜೀರ್‌ಪುರ ಕೈಗಾರಿಕಾ ಪ್ರದೇಶದಲ್ಲಿ ಚಹಾ ಮಾರಾಟಗಾರನನ್ನು ಭೇಟಿಯಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಫರಿದಾಬಾದ್ ಪೊಲೀಸರು ಜಿಲ್ಲೆಯಾದ್ಯಂತ ಸುಮಾರು 140 ಮಸೀದಿಗಳು, 1,700 ಬಾಡಿಗೆದಾರರು, 40 ಅಂಗಡಿಗಳು, 200 ಅತಿಥಿಗೃಹಗಳು ಮತ್ತು ಜಮ್ಮು ಮತ್ತು ಕಾಶ್ಮೀರದ 500 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ದೆಹಲಿ ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಇದರ ಸಂಪೂರ್ಣ ಜಾಲವನ್ನು ಭೇದಿಸಲು ತನಿಖೆಯನ್ನು ತೀವ್ರಗೊಳಿಸಿದೆ.