ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ಮೊಟ್ಟೆ, ಕಲ್ಲು ಎಸೆದ ಉದ್ರಿಕ್ತ ಗುಂಪು
Eggs and Stones Thrown at Abhishek Banerjee: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಮೊಟ್ಟೆ ಹಾಗೂ ಕಲ್ಲುಗಳನ್ನು ಎಸೆದು ಹಲ್ಲೆ ನಡೆಸಲಾಗಿದೆ. ಪಶ್ಚಿಮ ಬಂಗಾಳದ ಸೋನಾರ್‌ಪುರದಲ್ಲಿ ಘಟನೆ ನಡೆದಿದೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳಿದಾಗ ಈ ಘಟನೆ ನಡೆದಿದೆ.
ಅಭಿಷೇಕ್ ಬ್ಯಾನರ್ಜಿ ಮೇಲೆ ಮೊಟ್ಟೆ, ಕಲ್ಲೆಸೆತ -
ಕೋಲ್ಕತ್ತಾ, ಮೇ 30: ಪಶ್ಚಿಮ ಬಂಗಾಳದ (West Bengal) ಸೋನಾರ್‌ಪುರಕ್ಕೆ ಭೇಟಿ ನೀಡಿದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಚುನಾವಣೆಯ ನಂತರದ ಹಿಂಸಾಚಾರಕ್ಕೆ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ಬ್ಯಾನರ್ಜಿ ತೆರಳಿದ್ದರು. ಭೇಟಿಯ ಸಮಯದಲ್ಲಿ ಬ್ಯಾನರ್ಜಿಯ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆಯಲಾಯಿತು. ಬಿಜೆಪಿ (BJP) ಕಾರ್ಯಕರ್ತರು ಅವರ ವಿರುದ್ಧ ಕಳ್ಳ-ಕಳ್ಳ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಬ್ಯಾನರ್ಜಿಗೆ ಹೆಲ್ಮೆಟ್ ತೊಡಿಸಿ ಸುರಕ್ಷಿತವಾಗಿ ಕರೆದೊಯ್ದರು.
ಅಭಿಷೇಕ್ ಬ್ಯಾನರ್ಜಿ ಅವರ ಭೇಟಿಯ ಸಮಯದಲ್ಲಿ, ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದಾಗ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರೆದು ಬೆಂಗಾವಲು ನೀಡಿದ್ದಾರೆ. ಈ ಘಟನೆಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತಗಾರರು ಕೊಲೆಗಟುಕರು. ಬಿಜೆಪಿವರಿಗೆ ನಾಚಿಕೆಯಾಗಬೇಕು ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, “ಇದು ಬಿಜೆಪಿ ಪ್ರೇರಿತ ದಾಳಿʼʼ ಎಂದು ಆರೋಪಿಸಿದರು. ʼʼಈ ದಾಳಿಯನ್ನು ಬಿಜೆಪಿ ಪ್ರಾಯೋಜಿಸಿತ್ತು. ಇದು ಅವರ ಪ್ರಜಾಪ್ರಭುತ್ವದ ಉದಾಹರಣೆ. ಘಟನೆ ನಡೆದು ಒಂದು ತಿಂಗಳೂ ಆಗಿಲ್ಲ, ಪೊಲೀಸರು ಎಲ್ಲಿಯೂ ಕಾಣುತ್ತಿಲ್ಲ” ಎಂದು ಅವರು ಆಕ್ರೋಶ ಹೊರ ಹಾಕಿದರು.
ವಿಡಿಯೊ ಇಲ್ಲಿದೆ:
It's not even a month and TMC MP Abhishek Banerjee beaten up by locals during his visit to Sonarpur to meet the post-poll victims' families.
— Megh Updates 🚨™ (@MeghUpdates) May 30, 2026
People booed him with “Chor Chor” slogans and hurled egg & tore his shirt. pic.twitter.com/2K72EWabbL
ʼʼದಾಳಿಕೋರರು ನನ್ನನ್ನು ಕೊಲ್ಲುವ ಉದ್ದೇಶ ಹೊಂದಿದ್ದರು. ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆʼʼ ಎಂದು ಹೇಳಿದರು. ʼʼಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ. ಘಟನೆ ಬಗ್ಗೆ ರಾಜ್ಯಪಾಲರಿಗೂ ತಿಳಿಸಲಾಗುವುದು. ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗುವುದಾಗಿʼʼ ಅವರು ತಿಳಿಸಿದರು. ಗಂಭೀರ ಗಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವುದಾಗಿ ಅವರು ಹೇಳಿದರು. ʼʼತಲೆ ಉಳಿದಿದ್ದೇ ಪವಾಡ. ಅದೃಷ್ಟವಶಾತ್ ಹೆಲ್ಮೆಟ್ ಧರಿಸಿದ್ದೆ. ತನ್ನ ಬಟ್ಟೆಗಳನ್ನು ಹರಿದು ಹಾಕಿದ್ದಾರೆ, ಕನ್ನಡಕವನ್ನು ಒಡೆದಿದ್ದಾರೆʼʼ ಎಂದು ಅವರು ಆರೋಪಿಸಿದರು.
ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು: ಬದಲಾಗುತ್ತಿದೆ ಪಶ್ಚಿಮ ಬಂಗಾಳ
ʼʼಸ್ಥಳದಲ್ಲಿ ಒಬ್ಬರೇ ಒಬ್ಬರು ಪೊಲೀಸ್ ಸಿಬ್ಬಂದಿ ಕೂಡ ಇರಲಿಲ್ಲ. ಅವರು ನಮ್ಮನ್ನು ಕೊಲ್ಲಲು ಬಯಸುತ್ತಾರೆ. ಕೊಲ್ಲುವುದಾದರೆ ಕೊಲ್ಲಲಿ. ಆದರೆ ನಾನು ಈ ಪ್ರದೇಶವನ್ನು ಬಿಟ್ಟು ಹೋಗುವುದಿಲ್ಲ. ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡುವವರೆಗೆ ಇಲ್ಲಿಂದ ಹೊರಡುವುದಿಲ್ಲʼʼ ಎಂದು ಬ್ಯಾನರ್ಜಿ ಗುಡುಗಿದರು.
ಉದ್ವಿಗ್ನ ಪರಿಸ್ಥಿತಿಯ ನಡುವೆ ಪೊಲೀಸ್ ಮತ್ತು ಕೇಂದ್ರ ಪಡೆಯ ಸಿಬ್ಬಂದಿ ಸ್ಥಳಕ್ಕೆ ತಲುಪಿ ಬ್ಯಾನರ್ಜಿಯನ್ನು ರಕ್ಷಿಸಿದರು. ತಾವು ಭೇಟಿಯಾಗಲು ಬಂದಿದ್ದ ಕುಟುಂಬವನ್ನು ಉಲ್ಲೇಖಿಸಿದ ಬ್ಯಾನರ್ಜಿ, ʼʼಹೆಚ್ಚುವರಿ ಪಡೆಗಳು ಬರುವವರೆಗೂ ನಾನು ಸಂಜು ಅವರ ವೃದ್ಧ ಪೋಷಕರನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗುವುದಿಲ್ಲʼʼ ಎಂದರು.
ತಮ್ಮ ಭೇಟಿಯ ಬಗ್ಗೆ ಬಗ್ಗೆ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಿತ್ತು ಎಂದು ಹೇಳಿದ ಬ್ಯಾನರ್ಜಿ, ʼʼಪೊಲೀಸರಿಗೆ ಇಮೇಲ್ ಮಾಡಿ ನಮ್ಮ ಭೇಟಿಯ ಬಗ್ಗೆ ತಿಳಿಸಿದ್ದೆವು. ನಾವು ಪೊಲೀಸರಿಗೆ ಕರೆ ಮಾಡಿದೆವು. ಆದರೆ ಪೊಲೀಸರು ಕರೆ ಸ್ವೀಕರಿಸಲಿಲ್ಲʼʼ ಎಂದು ವಿವರಿಸಿದರು.
ಸೋನಾರ್‌ಪುರದಲ್ಲಿ ಚುನಾವಣೋತ್ತರ ಹಿಂಸಾಚಾರದಿಂದ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ಅಭಿಷೇಕ್ ಬ್ಯಾನರ್ಜಿ ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಪ್ರತಿಭಟನಾಕಾರರು ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಲಾಗಿದೆ.