ಇಂಗ್ಲೆಂಡ್ ಹಿಂದಿಕ್ಕಿ ಮತ್ತೆ ಟಿ20 ನಂ.1 ಸ್ಥಾನಕ್ಕೇರಿದ ಭಾರತ
ICC T20I Rankings: ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 0-4 ಅಂತರದ ಸೋಲಿನ ನಂತರ 2026 ರ ಟಿ20 ವಿಶ್ವಕಪ್ ವಿಜೇತರು ಐಸಿಸಿ ಟಿ20ಐ ತಂಡದ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ ನಂ. 1 ಶ್ರೇಯಾಂಕವನ್ನು ಕಳೆದುಕೊಂಡ ಎರಡು ವಾರಗಳಲ್ಲಿ, ಟೀಮ್ ಇಂಡಿಯಾ ಮತ್ತೆ ಅಗ್ರಸ್ಥಾನ ಮರಳಿ ಪಡೆದಿದೆ.
Team india -
ದುಬೈ, ಜು.26: ಐಸಿಸಿ ನೂತನ ಟಿ20ಐ ತಂಡ ಶ್ರೇಯಾಂಕದಲ್ಲಿ ಭಾರತ ಮತ್ತೆ ನಂ. 1 ಸ್ಥಾನಕ್ಕೆ ಮರಳಿದೆ. ಶನಿವಾರ (ಜುಲೈ 25) ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20ಐನಲ್ಲಿ ಜಿಂಬಾಬ್ವೆ ವಿರುದ್ಧ 90 ರನ್‌ಗಳ ಜಯ ಸಾಧಿಸಿದ ನಂತರ ಮೆನ್ ಇನ್ ಬ್ಲೂ ತಂಡವು ಅಗ್ರಸ್ಥಾನಕ್ಕೆ ಮರಳಿದೆ.
ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 0-4 ಅಂತರದ ಸೋಲಿನ ನಂತರ 2026 ರ ಟಿ20 ವಿಶ್ವಕಪ್ ವಿಜೇತರು ಐಸಿಸಿ ಟಿ20ಐ ತಂಡದ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ ನಂ. 1 ಶ್ರೇಯಾಂಕವನ್ನು ಕಳೆದುಕೊಂಡ ಎರಡು ವಾರಗಳಲ್ಲಿ, ಟೀಮ್ ಇಂಡಿಯಾ ಮತ್ತೆ ಅಗ್ರಸ್ಥಾನ ಮರಳಿ ಪಡೆದಿದೆ. ಭಾರತ 268 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. ಇಂಗ್ಲೆಂಡ್ ಕೂಡ 268 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. ದಶಮಾಂಶ ಲೆಕ್ಕಾಚಾರದ ನಂತರ ಭಾರತ ಇಂಗ್ಲೆಂಡ್‌ಗಿಂತ ಮುಂದಿದೆ.
ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 219 ರನ್ ಗಳಿಸಿತು. ಐಸಿಸಿ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ 81 ರನ್ ಗಳಿಸುವ ಮೂಲಕ ಪ್ರವಾಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಭಾರತದ ಉಪನಾಯಕ ತಿಲಕ್ ವರ್ಮಾ ಕೇವಲ 29 ಎಸೆತಗಳಲ್ಲಿ 60 ರನ್ ಗಳಿಸಿ ಅಜೇಯರಾಗಿ ಉಳಿದರು.
ಕಾಮನ್ವೆಲ್ತ್ ಗೇಮ್ಸ್; ವೇಯ್ಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ರಿಶಿಕಾಂತ ಸಿಂಗ್
ಇಶಾನ್ 81 ರನ್ ಬಾರಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20ಐ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು. 2022 ರ ಕ್ಯಾಲೆಂಡರ್ ವರ್ಷದಲ್ಲಿ, ಕೊಹ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕಾಗಿ 20 ಟಿ20ಐಗಳನ್ನು ಆಡಿ ಒಟ್ಟು 781 ರನ್‌ಗಳನ್ನು ಗಳಿಸಿದ್ದರು. ಇಶಾನ್ ಸದ್ಯ 2026 ರಲ್ಲಿ ಭಾರತ ಪರ 22* ಟಿ20ಐಗಳಲ್ಲಿ ಒಟ್ಟು 783* ರನ್‌ಗಳನ್ನು ಗಳಿಸಿದ್ದಾರೆ.
ಪ್ರಸ್ತುತ, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು T20I ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಅಭಿಷೇಕ್ ಶರ್ಮಾ ಮಾತ್ರ ಇಶಾನ್‌ಗಿಂತ ಮುಂದಿದ್ದಾರೆ. ಸೂರ್ಯ 2022 ರಲ್ಲಿ ಭಾರತ ಪರ 31 T20I ಗಳಲ್ಲಿ 1,164 ರನ್ ಗಳಿಸಿದರೆ, ಅಭಿಷೇಕ್ 2025 ರಲ್ಲಿ 21 T20I ಗಳನ್ನು ಆಡಿದರು ಮತ್ತು 859 ರನ್ ಗಳಿಸಿದರು.