ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೂ ಮೊಟ್ಟೆ ದಾಳಿ: ವಿಡಿಯೊ ವೈರಲ್
Eggs Thrown at Mahua Moitra: ಇತ್ತೀಚೆಗೆ ಪಶ್ವಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ಮೇಲಿನ ಹಲ್ಲೆಯ ಪ್ರಕರಣ ಹೆಚ್ಚುತ್ತಿದೆ. ಇದೀಗ ಸಂಸದೆ ಮಹುವಾ ಮೊಯಿತ್ರಾ ಈ ರೀತಿಯ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಟಿಎಂಸಿ ನಾಯಕರ ವಿರುದ್ಧ ಸರಣಿ ಮೊಟ್ಟೆ ಎಸೆತದ ಘಟನೆಗಳ ಕುರಿತು ಕೋಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದಿನವೇ ಮಹುವಾ ಮೊಯಿತ್ರಾ ಅವರ ಮೇಲೆ ದಾಳಿ ನಡೆದಿದೆ.
ಮಹುವಾ ಮೊಯಿತ್ರಾ ಮತ್ತು ಅವರ ಕಚೇರಿ ಮೇಲಿನ ದಾಳಿ -
ಕೋಲ್ಕತಾ, ಜು. 1: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಭಾರಿ ಸೋಲನ್ನು ಅನುಭವಿಸಿದ ನಂತರ, ಪಕ್ಷದ ನಾಯಕರ ಮೇಲೆ ಮೊಟ್ಟೆ ಎಸೆಯುವುದು ಮತ್ತು ಸಾರ್ವಜನಿಕರು ಕಳ್ಳ, ಕಳ್ಳ ಎಂದು ಘೋಷಣೆ ಕೂಗುವುದು ಸಾಮಾನ್ಯ ಎಂಬಂತಾಗಿದೆ. ಇದೀಗ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಈ ರೀತಿಯ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಟಿಎಂಸಿ ನಾಯಕರ ವಿರುದ್ಧ ಸರಣಿ ಮೊಟ್ಟೆ ಎಸೆತದ ಘಟನೆಗಳ ಕುರಿತು ಕೋಲ್ಕತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ದಿನವೇ ಮಹುವಾ ಮೊಯಿತ್ರಾ ಅವರ ಮೇಲೆ ಮೊಟ್ಟೆ, ಬದನೆ ಎಸೆಯಲಾಗಿದೆ. ರಾಜಕಾರಣಿಗಳ ಮೇಲೆ ಮೊಟ್ಟೆ ಎಸೆಯುವುದು ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಟಿಎಂಸಿ ಪಕ್ಷದ ಕಚೇರಿಯ ಹೊರಗೆ ಜಮಾಯಿಸಿದ ಪ್ರತಿಭಟನಾಕಾರರ ಗುಂಪೊಂದು ಕಪ್ಪು ಬಾವುಟಗಳನ್ನು ಬೀಸಿ ಮೊಯಿತ್ರಾ ಹಿಂತಿರುಗಿ ಹೋಗುವಂತೆ ಘೋಷಣೆಗಳನ್ನು ಕೂಗಿತು. ಮೊಯಿತ್ರಾ ಅವರನ್ನು ಗುರಿಯಾಗಿಸಿಕೊಂಡು ಜನಸಮೂಹ ಕಟ್ಟಡದ ಮೇಲೆ ಮೊಟ್ಟೆ ಮತ್ತು ಬದನೆಕಾಯಿಗಳನ್ನು ಎಸೆಯುತ್ತಿರುವುದನ್ನು ದೃಶ್ಯಗಳು ತೋರಿಸಿವೆ.
ಇಲ್ಲಿದೆ ವಿಡಿಯೊ:
People are throwing rotten eggs at Mahua Moitra, an MP of a reputed part like TMC. Howsoever deserving she may be for eggs, this act is a little bit, mildly disturbing. Gandhi ji was a vegetarian and it’s because of him that India got reed on. So I request crowd to find a…
— Ra_Bies 3.0 (@Ra_Bies) July 1, 2026
ಪಕ್ಷದ ಕಚೇರಿಯ ಮೇಲಿನ ಮಹಡಿಯಿಂದ ನೇರ ಪ್ರಸಾರ ಮಾಡಿದ ಮೊಯಿತ್ರಾ, “ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ಸ್ಥಿತಿ. ಇಲ್ಲಿ ನೆರೆದಿರುವವರು ಯಾರೂ ಸಾಮಾನ್ಯ ನಾಗರಿಕರಲ್ಲ, ಬಿಜೆಪಿಯ ಗೂಂಡಾಗಳು” ಎಂದು ಹೇಳಿದ್ದಾರೆ. ಪ್ರತಿಭಟನಾಕಾರರ ಗುಂಪು ಮೊಟ್ಟೆ ಮತ್ತು ಬದನೆಕಾಯಿಗಳನ್ನು ಕಿಟಕಿಯ ಕಡೆಗೆ ಎಸೆಯುತ್ತಲೇ ಇದ್ದಾಗ ಮೊಯಿತ್ರಾ ಪರದೆಯನ್ನು ಬಳಸಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದನ್ನು ಕಾಣಬಹುದು.
ಇಂಡಿಗೋ ವಿಮಾನದಲ್ಲಿ ಮಹುವಾ ಮೊಯಿತ್ರಾ ಗುರಿಯಾಗಿಸಿ ಕಳ್ಳ-ಕಳ್ಳ ಟಿಎಂಸಿ ಕಳ್ಳ ಘೋಷಣೆ
ಪೊಲೀಸರು ಮತ್ತು ಸಿಆರ್‌ಪಿಎಫ್ 15 ನಿಮಿಷಗಳ ನಂತರವೇ ಸ್ಥಳಕ್ಕೆ ಬಂದರು ಎಂದು ಮೊಯಿತ್ರಾ ತಿಳಿಸಿದ್ದಾರೆ. “ನಾನು ಡಿಜಿಪಿ ಮತ್ತು ಎಲ್ಲರನ್ನೂ ಕರೆದಿದ್ದೇನೆ. ಆದರೆ ಪೊಲೀಸರು ಕುಳಿತು ನೋಡಿದ್ದಾರೆ. ಇಡೀ ಭಾರತ ಇದನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಸಿಆರ್‌ಪಿಎಫ್‌ಗೆ ಜನಸಮೂಹವನ್ನು ಚದುರಿಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ʼʼಅವರ ಮುಖಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ನಂತರ, ಪೊಲೀಸರು ಅವರನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆʼʼ ಎಂದು ಅವರು ಆರೋಪಿಸಿದ್ದಾರೆ. ನಂತರ ಟಿಎಂಸಿ ಸಂಸದೆ ಪಕ್ಷದ ಕಾರ್ಯಕರ್ತರಿಗೆ, ತಾನು ತಲೆಬಾಗುವ ವ್ಯಕ್ತಿಯಲ್ಲ ಮತ್ತು ಪೊಲೀಸ್ ರಕ್ಷಣೆ ಪಡೆಯಲು ನಿರಾಕರಿಸಿದ್ದೇನೆ ಎಂದು ಹೇಳುವುದು ಕೇಳಿಸಿದೆ.
“ಕಳೆದ 2 ಗಂಟೆಗಳಿಂದ ಪೊಲೀಸರು ಮೋಜು ಮಾಡುತ್ತಿದ್ದಾರೆ, ಗುಂಪನ್ನು ಚದುರಿಸುತ್ತಿಲ್ಲ. ಅವರು ನನ್ನನ್ನು ಓಡಿಹೋಗುವಂತೆ ಬಯಸುತ್ತಾರೆ. ನಾನು ನನ್ನ ಕಾರಲ್ಲಿ ತೆರಳುವಾಗಲೂ ಅವರು ಮೊಟ್ಟೆ, ಕಲ್ಲುಗಳನ್ನು ಎಸೆಯುತ್ತಾರೆ” ಎಂದು ಮೊಯಿತ್ರಾ ವಿಡಿಯೊ ಸಹಿತ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆದು ಎರಡು ತಿಂಗಳಿಗಿಂತಲೂ ಹೆಚ್ಚು ಸಮಯ ಕಳೆದಿದ್ದರೂ, ಟಿಎಂಸಿ ನಾಯಕರ ವಿರುದ್ಧದ ಸಾರ್ವಜನಿಕರ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಟಿಎಂಸಿ ನಾಯಕರ ಮೇಲೆ ಜನರು ಮೊಟ್ಟೆಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಆದರೆ, ಈ ಘಟನೆಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಟಿಎಂಸಿ ಆರೋಪಿಸಿದೆ.