ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕದ 4 ಸೇರಿ 10 ರಾಜ್ಯಗಳ 24 ರಾಜ್ಯಸಭೆ ಸ್ಥಾನಗಳಿಗೆ ಜೂ.18ಕ್ಕೆ ಚುನಾವಣೆ ಘೋಷಣೆ

ಚುನಾವಣಾ ಆಯೋಗ 24 ರಾಜ್ಯಸಭಾ ಸ್ಥಾನಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಆಯೋಗ, 10 ರಾಜ್ಯಗಳಲ್ಲಿ ತೆರವಾಗಲಿರುವ 24 ಸ್ಥಾನಗಳಿಗೆ ಜೂನ್​ 18ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ.

ಕರ್ನಾಟಕದ 4 ಸೇರಿ 24 ರಾಜ್ಯಸಭೆ ಸ್ಥಾನಗಳಿಗೆ ಜೂ.18ಕ್ಕೆ ಚುನಾವಣೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 22, 2026 2:05 PM

ನವದೆಹಲಿ: ಚುನಾವಣಾ ಆಯೋಗ 24 ರಾಜ್ಯಸಭಾ (Rajya Sabha Election) ಸ್ಥಾನಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಆಯೋಗ (Election Commission) , 10 ರಾಜ್ಯಗಳಲ್ಲಿ ತೆರವಾಗಲಿರುವ 24 ಸ್ಥಾನಗಳಿಗೆ ಜೂನ್​ 18ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ಜೂನ್​ 21 ರಿಂದ ಜುಲೈ 19ರವರೆಗೆ ವಿವಿಧ ರಾಜ್ಯಗಳ ರಾಜ್ಯಸಭಾ ಸ್ಥಾನಗಳು ತೆರವಾಗಲಿವೆ. ಆಂಧ್ರಪ್ರದೇಶ, ಗುಜರಾತ್​ ಮತ್ತು ಕರ್ನಾಟಕದ ತಲಾ 4 ಸ್ಥಾನ, ಮಧ್ಯಪ್ರದೇಶ ರಾಜಸ್ಥಾನದ ತಲಾ ಮೂರು ಸ್ಥಾನ ಮತ್ತು ಜಾರ್ಖಂಡ್​ನ ಎರಡು ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ತಲಾ ಒಂದು ಸ್ಥಾನಗಳು ತೆರವಾಗಲಿವೆ.

ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವವರಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್‌ ನಾಯಕ ಹೆಚ್‌. ಡಿ ದೇವೇಗೌಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು (ರಾಜಸ್ಥಾನ) ಮತ್ತು ಜಾರ್ಜ್ ಕುರಿಯನ್ (ಮಧ್ಯಪ್ರದೇಶ); ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್; ಕಾಂಗ್ರೆಸ್ ನಾಯಕ ಶಕ್ತಿಸಿಂಗ್ ಗೋಹಿಲ್ ಸೇರಿದಂತೆ ಹಲವು ನಾಯಕರು ಸೇರಿದ್ದಾರೆ.

ಅಯೋಧ್ಯಾ ರಾಮಿ ರೆಡ್ಡಿ ಅಲ್ಲಾ, ಪಿಲ್ಲಿ ಸುಭಾಶ್ಚಂದ್ರ ಬೋಸ್, ರಾಮ್‌ಭಾಯ್ ಹರ್ಜಿಭಾಯಿ ಮೊಕರಿಯಾ, ಜಾರ್ಜ್ ಕುರಿಯನ್, ಮಹಾರಾಜ ಸನಜವೋಬ ಲೀಶೆಂಬಾ, ವಾನ್ವೇರೋಯ್ ಖಾರ್ಲುಖಿ, ನೀರಜ್ ಡಾಂಗಿ, ರಾಜೇಂದ್ರ ಗೆಹ್ಲೋಟ್, ನಬಮ್ ರೆಬಿಯಾ, ಈರಣ್ಣ ಕಡಾಡಿ, ಮತ್ತು ಕೆ. ವನಲಾಲ್ವೇನಾ ಸೇರಿದಂತೆ ಇತರ ಸದಸ್ಯರು ನಿವೃತ್ತರಾಗುತ್ತಿದ್ದಾರೆ.

ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮೂರು ಮತ್ತು ಬಿಜೆಪಿಗೆ ಒಂದು ಸ್ಥಾನ ಸಿಗಲಿದೆ. ಕಾಂಗ್ರೆಸ್‌ಗೆ ಸಿಗುವ ಮೂರು ಸ್ಥಾನಗಳ ಪೈಕಿ ಒಂದು ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂದುವರಿಸುವ ಸಾಧ್ಯತೆ ಇದೆ. ಬಾಕಿ ಎರಡು ಸ್ಥಾನಗಳಿಗೆ ಪೈಪೋಟಿ ನಡೆಯಲಿದೆ. ಬಿಜೆಪಿಗೆ ಸಿಗುವ ಒಂದು ಸ್ಥಾನದ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಹೆಚ್‌.ಡಿ.ದೇವೇಗೌಡ ಅವರನ್ನು ಮುಂದುವರಿಸುವ ಬಗ್ಗೆ ಮಾತುಕತೆಗಳು ನಡೆದಿವೆ.

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮೂರನೇ ಹಂತದ ಎಸ್‍ಐಆರ್ ಘೋಷಣೆ; ಈ ಮೂರು ರಾಜ್ಯದಲ್ಲಿ ಸದ್ಯಕ್ಕಿಲ್ಲ ಮತದಾರರ ಪಟ್ಟಿ ಪರಿಷ್ಕರಣೆ

ಪೂರ್ಣ ವೇಳಾಪಟ್ಟಿ ಹೀಗಿದೆ

  • ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಸೋಮವಾರ, ಜೂನ್ 8, 2026
  • ನಾಮನಿರ್ದೇಶನಗಳ ಪರಿಶೀಲನೆ: ಮಂಗಳವಾರ, ಜೂನ್ 9, 2026
  • ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ: ಗುರುವಾರ, ಜೂನ್ 11, 2026
  • ಮತದಾನದ ದಿನಾಂಕ: ಗುರುವಾರ, ಜೂನ್ 18, 2026
  • ಮತದಾನದ ಸಮಯ: ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ
  • ಮತ ಎಣಿಕೆ: ಜೂನ್ 18, 2026 ರಂದು ನಡೆಯಲಿದೆ.