Pahalgam Terror Attack: ಪ್ರತಿ ಕ್ಷಣದಲ್ಲೂ ಅನ್ಸುತ್ತೆ ಆತ ಎಲ್ಲಿಂದಾದರೂ ಮರಳಿ ಬರಲಿ- ಪಹಲ್ಗಾಮ್ ದುರಂತದಲ್ಲಿ ಬಲಿಯಾದ ಮಗನ ನೆನೆದ ತಾಯಿ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಎಷ್ಟೋ ಮಂದಿ ಮಹಿಳೆಯರು ತನ್ನ ಮಗ, ಗಂಡ, ಸಹೋದರನನ್ನು ಕಳೆದುಕೊಂಡರು. ಈ ಘಟನೆ ನಡೆದು ವಾರಗಳೇ ಕಳೆದಿದ್ದರೂ ಅದರ ಭಯಾನಕ ನೆನಪುಗಳು ಇನ್ನೂ ಅವರಲ್ಲಿ ಹಾಗೆಯೇ ಉಳಿದಿದೆ. ತಮ್ಮವರು ಮರಳಿ ಬರಲಿ ಎನ್ನುವ ಆಶಯದೊಂದಿಗೆ ಕಾಯುತ್ತಿದ್ದಾರೆ. ಅಂತಹ ಒಂದು ಮನಮಿಡಿಯುವ ತಾಯಿಯ ಮಾತುಗಳು ಇಲ್ಲಿದೆ.


ಕಾನ್ಪುರ: ಪ್ರತಿ ದಿನ, ಪ್ರತಿ ಕ್ಷಣ.. ಎಲ್ಲ ಸಮಯದಲ್ಲೂ ಅನ್ಸುತ್ತೆ.. ಆತ ಎಲ್ಲಿಂದಾದರೂ ಮರಳಿ ಬರಲಿ ಎಂದು.. ಪಹಲ್ಗಾಮ್ (Pahalgam Terror Attack) ನಲ್ಲಿ ಭಯೋತ್ಪಾದಕರ (Terror Attack) ಗುಂಡೇಟಿಗೆ ಬಲಿಯಾದ ಶುಭಂ ದ್ವಿವೇದಿಯವರ ತಾಯಿ ಸೀಮಾ ಅವರು ತಾಯಂದಿರ ದಿನದಂದು (Mother's day) ಮಗನನ್ನು ನೆನಪಿಸಿಕೊಂಡಿದ್ದಾರೆ. ಮಗ ಮರಳಿ ಬಾರದ ಊರಿಗೆ ಹೋಗಿದ್ದರೂ ಮನೆಯ ಬಾಗಿಲಿಗೆ ದೃಷ್ಟಿ ನೆಟ್ಟು ಅವನು ಮರಳಿ ಬರಲಿ ಎನ್ನುವ ನೀರಿಕ್ಷೆಯಿಂದ ಕಾಯುತ್ತಿದ್ದಾರೆ. ಕಾಶ್ಮೀರದ (Jammu Kashmir)ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಉಗ್ರರ ದಾಳಿಗೆ ಬಲಿಯಾದ ಪ್ರವಾಸಿಗರಲ್ಲಿ ಶುಭಂ ದ್ವಿವೇದಿ ಕೂಡ ಒಬ್ಬರು.
ಫೆಬ್ರವರಿ 12ರಂದು ಮದುವೆಯಾಗಿದ್ದ ಶುಭಂ ಕುಟುಂಬದವರೊಂದಿಗೆ ಕಾಶ್ಮೀರಕ್ಕೆ ತೆರಳಿದ್ದು ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿದ್ದರು. ಮದುಮಗನ ಅಲಂಕಾರದಲ್ಲಿ ಮಗ ಶುಭಂನನ್ನು ಕಣ್ತುಂಬಿಕೊಂಡಿದ್ದ ಸೀಮಾ ಆ ದಿನ ರಾಜಕುಮಾರನಂತೆ ಕಾಣುತ್ತಿದ್ದ. ಅತ್ಯಂತ ಸುಂದರ ವರನಾಗಿ ನನ್ನ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾನೆ ಎನ್ನುತ್ತಾರೆ.
ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಶುಭಂ ಸಾವನ್ನಪ್ಪಿ ವಾರಗಳು ಕಳೆದಿದ್ದರೂ ಮಗ ಹಿಂದಿರುಗಿ ಬರುತ್ತಾನೆ ಎನ್ನುವ ಭರವಸೆಯಲ್ಲಿ ಕಾಯುತ್ತಿದ್ದಾರೆ. ಅವನು ಹುಟ್ಟಿದಾಗ ಆತನ ಅಜ್ಜ ಆತನಿಗೆ ಪ್ರಿನ್ಸ್ ಎಂದು ಹೆಸರಿಟ್ಟಿದ್ದರು. ಯಾಕೆಂದರೆ ಅವನು ನಮ್ಮ ರಾಜಕುಮಾರನಾಗಿದ್ದ. ಈಗ ಪ್ರತಿ ಕ್ಷಣವೂ ಅನ್ಸುತ್ತೆ ಆತ ಎಲ್ಲಿಂದಲಾದರೂ ಆತ ಮರಳಿ ಬರಲಿ ಎನ್ನತ್ತಾರೆ ಸೀಮಾ. ತಂದೆ, ತಾಯಿ, ಪತ್ನಿ ಅಶಾನ್ಯಾ, ಅತ್ತೆ, ಮಾವಂದಿರು, ಸಹೋದರಿಯರು ಸೇರಿ ಒಟ್ಟು 11 ಮಂದಿಯೊಂದಿಗೆ ಶುಭಂ ಕಾಶ್ಮೀರಕ್ಕೆ ತೆರಳಿದ್ದರು.
ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದ. ನನ್ನನ್ನು ತುಂಬಾ ಪ್ರೀತಿಸುತ್ತಿದ್ದ. ನಾನು ನನ್ನ ಮಗಳಿಗೆ ಜನ್ಮ ನೀಡಿದಾಗ ಕೆಲವು ದಿನಗಳ ಕಾಲ ಆತನಿಂದ ದೂರವಿದ್ದೆ. ಆದರೆ ನಾನು ಮರಳಿ ಬಂದಾಗ ಎರಡು ದಿನಗಳ ನನ್ನೊಂದಿಗೆ ಇದ್ದ. ನನ್ನನ್ನು ವರ್ಷಗಳಿಂದ ನೋಡಿಲ್ಲ ಎನ್ನುವಂತೆ ನನ್ನೊಂದಿಗೆ ಅಂಟಿಕೊಂಡಿದ್ದ ಎಂದು ನೆನಪು ಮಾಡಿಕೊಳ್ಳುವ ಸೀಮಾ, ಆತ ಕೊನೆಯ ದಿನದವರೆಗೂ ಹಾಗೆಯೇ ಇದ್ದ ಎಂದು ನೆನಪಿಸಿಕೊಳ್ಳುತ್ತಾರೆ.
ನನಗೆ ಸ್ವಲ್ಪ ಆರೋಗ್ಯ ಏರುಪೇರಾದರೂ ಆತ ನನ್ನೊಂದಿಗೆ ಇರುತ್ತಿದ್ದ. ತುಂಬಾ ಕಾಳಜಿ ವಹಿಸುತ್ತಿದ್ದ. ಕಾಶ್ಮೀರಕ್ಕೆ ಹೋದಾಗ ನಾನು ಬೀಳುತ್ತೇನೆ ಎಂಬ ಭಯದಿಂದ ಸದಾ ನನ್ನ ಕೈ ಹಿಡಿದುಕೊಂಡೆ ನಡೆದಿದ್ದ. ಅವನಿಗೆ ರಬ್ಡಿ, ಚೋಲೆ ಬಟೂರಾ, ದೂದ್ ಬರಿಯ, ರಾಜ್ಮಾದೊಂದಿಗೆ ಅನ್ನ ತುಂಬಾ ಇಷ್ಟವಾಗುತ್ತಿತ್ತು ಎನ್ನುತ್ತಾ ದುಃಖಿಸುತ್ತಾರೆ ಸೀಮಾ. ಶುಭಂಗೆ ಕ್ರಿಕೆಟ್ ತುಂಬಾ ಇಷ್ಟ. ಆಗಾಗ್ಗೆ ಸ್ನೇಹಿತರು ಮತ್ತು ಸೋದರಸಂಬಂಧಿಗಳೊಂದಿಗೆ ಆಟವಾಡುತ್ತಿದ್ದ. ಅವನಿಗೆ ಪ್ರವಾಸ ಹೋಗುವುದು ಪ್ರಿಯವಾಗಿತ್ತು. ಅವನು ಯಾವಾಗಲೂ ಕುಟುಂಬದ ವ್ಯವಹಾರ ನಡೆಸಲು ಆಸಕ್ತಿ ಹೊಂದಿರುವುದಾಗಿ ಹೇಳುತ್ತಿದ್ದ ಎಂದು ನೆನಪಿಸಿಕೊಳ್ಳುತ್ತಾರೆ ಸೀಮಾ.
ಇದನ್ನೂ ಓದಿ: Operation sindoor: ಪಾಕ್‌ನ ಇಬ್ಬಗೆ ನೀತಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ: ಪ್ರಲ್ಹಾದ್ ಜೋಶಿ
ಏಪ್ರಿಲ್ 22ರಂದು ಮಧ್ಯಾಹ್ನ. ನಾವೆಲ್ಲ ಟ್ರೆಕ್ಕಿಂಗ್ ಮಾಡುತಿದ್ದೆವು. ಶುಭಂ ನೆಟ್ವರ್ಕ್ ಹುಡುಕಿಕೊಂಡು ಮೇಲೆ ಹೋದ. ನಾವು ಕೆಳಗೆ ಇದ್ದೆವು. ಅಲ್ಲಿದ್ದ ಕುದುರೆ ಸವಾರಿ ಮಾಡುತ್ತಿದ್ದವನ ಬಳಿ ಆತ ಮೇಲೆ ನೆಟ್ವರ್ಕ್ ಸಿಗುತ್ತದೆಯೇ ಎಂದು ಕೇಳಿದ. ಅವನು ಹೌದು ಎಂದ. ಹೀಗಾಗಿ ಶುಭಂ ನೆಟ್ವರ್ಕ್ ಹುಡುಕಿಕೊಂಡು ಮೇಲೆ ಹೋದ. ಉಗ್ರರ ದಾಳಿಗೆ ಬಲಿಯಾದ. ಒಂದು ವೇಳೆ ಕುದುರೆ ಸವಾರಿ ಮಾಡುವವನು ಮೇಲೆ ನೆಟ್ವರ್ಕ್ ಸಿಗುವುದಿಲ್ಲ ಎಂದು ಹೇಳಿದ್ದರೆ ಇವತ್ತು ಆತ ನಮ್ಮೊಂದಿಗೆ ಇರುತ್ತಿದ್ದ ಎಂದು ದುಃಖಿಸಿಕೊಳ್ಳುತ್ತಾರೆ ಸೀಮಾ.