ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್ ಸಮೀಕ್ಷೆ ಔಟ್: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭದ್ರಕೋಟೆ ಛಿದ್ರ ಛಿದ್ರ, ಅಸ್ಸಾಂನಲ್ಲಿ ಬಿಜೆಪಿಗೆ ಜಯ; ತಮಿಳುನಾಡಿನಲ್ಲಿ ಡಿಎಂಕೆಗೆ ಮತ್ತೆ ಅಧಿಕಾರ?
2026 ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ದೇಶದ ರಾಜಕೀಯ ಚಿತ್ರಣವನ್ನು ಬದಲಾಯಿಸುವ ಸೂಚನೆ ನೀಡಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಬಹುಮತ, ಅಸ್ಸಾಂನಲ್ಲಿ ಮೂರನೇ ಬಾರಿ ಅಧಿಕಾರ ಸಾಧ್ಯತೆ, ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಸರ್ಕಾರ ರಚಿಸುವ ಬಗ್ಗೆ ಭವಿಷ್ಯ ನುಡಿಯಲಾಗುತ್ತಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಅಚ್ಚರಿ ಸಾಧನೆ ಮಾಡಬಹುದು. ಕೇರಳದಲ್ಲಿ ಯುಡಿಎಫ್-ಎಲ್‌ಡಿಎಫ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಬಿಜೆಪಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಏ. 30: 2026ರ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ (Assembly Electiones) ಎಕ್ಸಿಟ್ ಪೋಲ್ ಸಮೀಕ್ಷಾ ವರದಿ ಪ್ರಕಟವಾಗಿದ್ದು, ದೇಶದಾದ್ಯಂತ ರಾಜಕೀಯ ಸಂಚಲನ ಮೂಡಿಸಿವೆ. 'ಟುಡೇಸ್ ಚಾಣಕ್ಯ (Today’s Chanakya)' ಸಮೀಕ್ಷೆಯ ವರದಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ರಾಜಕೀಯ ಸ್ಥಿತ್ಯಂತರ ನಡೆಯಲಿದ್ದು, ಬಿಜೆಪಿ ಸುಮಾರು 192 (+ 11) ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಇದರಿಂದಾಗಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (Trinamool Congress) 100 ಸ್ಥಾನಗಳಿಗೆ ಕುಸಿಯುವ ಮುನ್ಸೂಚನೆ ಲಭ್ಯವಾಗಿದೆ.
ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದ ಬಿಜೆಪಿ ಮೈತ್ರಿಕೂಟವು (ಎನ್‌ಡಿಎ) 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ತನ್ನ ಅಧಿಕಾರವನ್ನು ಭದ್ರಪಡಿಸಿಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಕೇವಲ 23 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇನ್ನು ದಕ್ಷಿಣದ ರಾಜ್ಯವಾದ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು 125 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳುವ ಸಾಧ್ಯತೆಯಿದೆ. ಆದರೆ ಇಲ್ಲಿನ ಅತಿದೊಡ್ಡ ಅಚ್ಚರಿ ಎಂದರೆ, ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು 63 ಸ್ಥಾನಗಳನ್ನು ಗೆಲ್ಲುವ ಮೂಲಕ ಹಳೆಯ ಪಕ್ಷವಾದ ಎಐಎಡಿಎಂಕೆಗಿಂತಲೂ (45 ಸ್ಥಾನ) ಪ್ರಬಲವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಎಕ್ಸಿಟ್ ಪೋಲ್ ಫಲಿತಾಂಶ:
🚨 HUGE! After Today’s Chanakya, another exit poll predicts a BJP government in West Bengal 🤯
— Megh Updates 🚨™ (@MeghUpdates) April 30, 2026
News18 Vote Vibe Exit Poll:
– BJP: 143–163 (projected 153)
– TMC: 133
– Congress: 3
– OTH: 1 pic.twitter.com/IBkjJfE77M
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 69 ಸ್ಥಾನಗಳನ್ನು ಹಾಗೂ ಎಲ್‌ಡಿಎಫ್ 64 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಸರ್ಕಾರ ರಚಿಸಲು ಅಗತ್ಯವಿರುವ 71 ಸ್ಥಾನಗಳಿಗಾಗಿ ತೀವ್ರ ಜಿದ್ದಾಜಿದ್ದಿ ಏರ್ಪಡಲಿದೆ. ಬಿಜೆಪಿ ಇಲ್ಲಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ 'ಕಿಂಗ್ ಮೇಕರ್' ಪಾತ್ರ ವಹಿಸುವ ಲಕ್ಷಣಗಳಿವೆ. ಸಮೀಕ್ಷೆಗಳ ಪ್ರಕಾರ ಯುಡಿಎಫ್ ಅಲ್ಪ ಮೇಲುಗೈ ಸಾಧಿಸಿದ್ದರೂ, ಅಧಿಕಾರ ಯಾರ ಪಾಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ವಿಧಾನಸಭಾ ಚುನಾವಣೆಗಳ ಫಲಿತಾಂಶಕ್ಕೆ ದಿನಗಣನೆ: ಕ್ಯುಆರ್ ಕೋಡ್ ಆಧಾರಿತ ಗುರುತು ವ್ಯವಸ್ಥೆ ಪರಿಚಯಿಸಿದ ಚುನಾವಣಾ ಆಯೋಗ
ಎಕ್ಸಿಟ್ ಪೋಲ್‌ಗಳು ಕೇವಲ ಮತದಾರರ ಅಭಿಪ್ರಾಯವನ್ನು ಆಧರಿಸಿದ ಅಂದಾಜುಗಳಾಗಿದ್ದು, ಇವುಗಳಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಎಲ್ಲ ಚುನಾವಣೆಗಳ ಫಲಿತಾಂಶ ಮೇ 4ರಂದು ಹೊರ ಬೀಳಲಿದೆ. ಈ ಬಾರಿ ದಾಖಲೆ ಮಟ್ಟದ ಮತದಾನ ನಡೆದಿರುವುದು ಅಂತಿಮ ಫಲಿತಾಂಶದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣ.