ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AI Video: ಸುಪ್ರಿಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆದಿರುವಂತೆ AI ವಿಡಿಯೊ- ಕಿಡಿಗೇಡಿ ವಿರುದ್ಧFIR

Depicting Shoe Attack: ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಬಿರ್.ಆರ್ ಗವಾಯಿ ಅವರು ನ್ಯಾಯಾಲಯದಲ್ಲಿ ಕಲಾಪ ನಡೆಸುವ ವೇಳೆ ವಕೀಲ ರಾಕೇಶ್ ಕಿಶೋರ್ (Rakesh Kishore)ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ಆಗಿದ್ದು, ಗವಾಯಿ (CJI) ಅವರ ಮೇಲೆ ಶೂ ಎಸೆದಿರುವಂತೆ ತೋರಿಸುವ ಎಐ ಆಧಾರಿತ ವಿಡಿಯೋವನ್ನು ಸೃಷ್ಟಿಸಿದ ಆರೋಪದ ಮೇಲೆ ನವಿ ಮುಂಬೈ ಪೊಲೀಸರು ಸಾಮಾಜಿಕ ಮಾಧ್ಯಮ ಬಳಕೆದಾರನೊಬ್ಬನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ರಾಕೇಶ್ ಕಿಶೋರ್ಬಿ - .ಆರ್.ಗವಾಯಿ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ(Chief Justice of India) ಬಿ.ಆರ್.ಗವಾಯಿ (Bhushan Gavai) ಅವರ ಮೇಲೆ ಶೂ ಎಸೆದಿರುವಂತೆ ತೋರಿಸುವ ಎಐ(AI Video) ಆಧಾರಿತ ವಿಡಿಯೋವನ್ನು ಸೃಷ್ಟಿಸಿದ ಆರೋಪದ ಮೇಲೆ ನವಿ ಮುಂಬೈ ಪೊಲೀಸರು ಸಾಮಾಜಿಕ ಮಾಧ್ಯಮ ಬಳಕೆದಾರನೊಬ್ಬನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪರಿಶಿಷ್ಟ ಸಮುದಾದ ವರ್ಗದವರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದ ಆರೋಪಿಯು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಸಿಜೆಐ ವಿರುದ್ಧ ಆಕ್ಷೇಪಾರ್ಹ ಮತ್ತು ಜಾತಿ ಆಧಾರಿತ ಕಾಮೆಂಟ್‌ಗಳನ್ನು ಮಾಡಿದವರ ವಿರುದ್ಧ ಪಂಜಾಬ್ ಪೊಲೀಸರು ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಸೋಮವಾರ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಬೆಳಗಿನ ಕಲಾಪದ ವೇಳೆ ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದ. ಕೂಡಲೇ ಭದ್ರತಾ ಸಿಬ್ಬಂದಿಯು ಆತನನ್ನು ತಡೆದು ಕೋರ್ಟ್ ಹಾಲ್‌ನಿಂದ ಹೊರಹಾಕಿದ್ದರು. ಹೊರಹೋಗುವಾಗ ರಾಕೇಶ್ ಕಿಶೋರ್, “ಸನಾತನ ಧರ್ಮ ಕಾ ಅಪ್‌ಮಾನ್‌ ನಹಿ ಸಹೇಗಾ ಹಿಂದೂಸ್ತಾನ್ (ಭಾರತವು ಸನಾತನ ಧರ್ಮಕ್ಕೆ ಅಗೌರವ ತೋರಿಸುವುದನ್ನು ಸಹಿಸುವುದಿಲ್ಲ),” ಎಂದು ಕೂಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಈ ಸುದ್ದಿಯನ್ನು ಓದಿ: Nobel Prize 2025: ಈ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ- ಯಾರ್ಯಾರ ಹೆಸರು ಪಟ್ಟಿಯಲ್ಲಿದೆ?

ಘಟನೆಯ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದ ಕಿಶೋರ್, “ನನ್ನ ವರ್ತನೆ ಕೋಪದಿಂದಲ್ಲ, ಭಾವನಾತ್ಮಕ ನೋವಿನಿಂದ ಆಗಿದೆ. ಹಿಂದೂ ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ನಡೆಯುತ್ತಿರುವುದರಿಂದ ನನ್ನ ಮನಸ್ಸು ನೋವಿನಿಂದ ತುಂಬಿತ್ತು. ನಾನು ಮಾಡಿದದ್ದಕ್ಕೆ ಯಾವುದೇ ವಿಷಾದವಿಲ್ಲ,” ಎಂದು ಹೇಳಿಕೆ ನೀಡಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಗುರುವಾರ ವಕೀಲ ರಾಕೇಶ್ ಕಿಶೋರ್ ಅವರ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಇತ್ತೀಚೆಗೆ ಖಜುರಾಹೊದಲ್ಲಿನ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಮರುಸ್ಥಾಪಿಸುವ ಕುರಿತ ಪ್ರಕರಣವೊಂದರಲ್ಲಿ ಸಿಜೆಐ ಬಿ.ಆರ್‌.ಗವಾಯಿ ನೀಡಿದ್ದ ಹೇಳಿಕೆಯೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ವಜಾಗೊಳಿಸುವಾಗ, "ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಈಗ ಹೋಗಿ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ," ಎಂದು ಅರ್ಜಿದಾರರಿಗೆ ಸಿಜೆಐ ಮೌಖಿಕವಾಗಿ ಹೇಳಿದ್ದರು.

ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿವಾದದ ನಂತರ, ಸಿಜೆಐ ಗವಾಯಿ ಅವರು ಸ್ಪಷ್ಟನೆ ನೀಡಿ, "ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ," ಎಂದು ಹೇಳಿದ್ದರು. ಸದ್ಯ ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್.ಗವಾಯಿ ಅವರ ಮೇಲಿನ ಶೂ ಎಸೆತ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ನ್ಯಾಯವಾದಿ ರಾಕೇಶ್ ಕಿಶೋರ್ ವರ್ತನೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.