ನವದೆಹಲಿ, ಮಾ. 16: 4 ರಾಜ್ಯ ಮತ್ತು 1 ಕೇಂದ್ರಾಡಳಿತ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಮಾರ್ಚ್ 15ರಂದು ಭಾರತೀಯ ಚುನಾವಣಾ ಆಯೋಗ (Election Commission India) ಅಧಿಕೃತವಾಗಿ ಘೋಷಿಸಿತು. ಪಶ್ಚಿಮ ಬಂಗಾಳದಲ್ಲಿ (West Bengal) ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅಸ್ಸಾಂ, ಕೇರಳಂ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಚುನಾವಣಾ ಫಲಿತಾಂಶಗಳನ್ನು ಮೇ 4ರಂದು ಘೋಷಿಸಲಾಗುವುದು. ಈ ಮಧ್ಯೆ MATRIZE-IANS ನಡೆಸಿದ ಸಮೀಕ್ಷೆಯ ವರದಿ ಹೊರಬಿದ್ದಿದೆ. ಈ ರಾಜ್ಯಗಳ ಮತದಾರರ ಮನೋಭಾವದ ಮುಂಚಿತ ನೋಟವನ್ನು ಇದು ನೀಡುತ್ತದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳಂ ಮತ್ತು ತಮಿಳುನಾಡಿನಲ್ಲಿ ನಡೆಸಿದ ಸಮೀಕ್ಷೆಯು ಯಾವ ಪಕ್ಷಗಳು ಮುನ್ನಡೆ ಸಾಧಿಸಲಿವೆ ಎಂಬುದರ ಸ್ಥೂಲ ಚಿತ್ರಣ ನೀಡುತ್ತದೆ.
4ನೇ ಬಾರಿಗೆ ಗೆಲುವಿಗೆ ಸಜ್ಜಾದ ಟಿಎಂಸಿ
ಪಶ್ಚಿಮ ಬಂಗಾಳವು 294 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ 148 ಸ್ಥಾನಗಳು ಬೇಕು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದು ಸಮೀಕ್ಷೆ ಸೂಚಿಸುತ್ತದೆ. ಈ ಭವಿಷ್ಯವಾಣಿ ನಿಜವಾದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ರಾಜ್ಯದಲ್ಲಿ ಸತತ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಏರಲಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು
ಸಮೀಕ್ಷೆಯ ಪ್ರಕಾರ, ಟಿಎಂಸಿ 155ರಿಂದ 170 ಸ್ಥಾನಗಳನ್ನು ಗೆಲ್ಲಬಹುದು. ಪ್ರಮುಖ ವಿರೋಧ ಪಕ್ಷ ಬಿಜೆಪಿ 100ರಿಂದ 115 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (AIMIM) 5-6 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಇತರ ಪಕ್ಷಗಳು 0-1 ಸ್ಥಾನಗಳನ್ನು ಪಡೆಯಬಹುದು.
ಅಸ್ಸಾಂನಲ್ಲಿ ಭದ್ರಕೋಟೆ ಉಳಿಸಲು ಬಿಜೆಪಿ ಸಜ್ಜು
ಅಸ್ಸಾಂನಲ್ಲಿ ಬಿಜೆಪಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಸಮೀಕ್ಷೆ ಊಹಿಸಿದೆ. ಪಕ್ಷವು 96-98 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿಯುತ್ತದೆ. ವಿರೋಧ ಪಕ್ಷ ಕಾಂಗ್ರೆಸ್ 26-28 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) 1-5 ಸ್ಥಾನಗಳನ್ನು ಪಡೆಯಬಹುದು. ಇತರರು 1-3 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಮತ್ತು ಎಐಯುಡಿಎಫ್ ಸೇರಿ ವಿರೋಧ ಪಕ್ಷಗಳು ಬಿಜೆಪಿಯ ಪ್ರಾಬಲ್ಯವನ್ನು ಅಲುಗಾಡಿಸುವಲ್ಲಿ ವಿಫಲವಾಗಬಹುದು ಎಂದು ಸಮೀಕ್ಷೆ ಸೂಚಿಸುತ್ತದೆ.
ತಮಿಳುನಾಡಿನಲ್ಲಿ ಎನ್‌ಡಿಎ ಮೇಲುಗೈ?
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಸಂಭಾವ್ಯ ಮುನ್ನಡೆಯನ್ನು ತೋರಿಸುತ್ತಿವೆ. ಸಮೀಕ್ಷೆಯ ಪ್ರಕಾರ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಡಿಎಂಕೆ)-ಬಿಜೆಪಿ ಒಕ್ಕೂಟವು 114-127 ಸ್ಥಾನಗಳನ್ನು ಗಳಿಸಬಹುದು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 104-114 ಸ್ಥಾನಗಳನ್ನು ಗೆಲ್ಲಬಹುದು ಮತ್ತು ತಮಿಳುಗ ವಿದುತಲೈ ಕಚ್ಚಿ (ಟಿವಿಕೆ) 6-12 ಸ್ಥಾನಗಳನ್ನು ಪಡೆಯಬಹುದು.
ಪ್ರಸ್ತುತ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ತಮಿಳುನಾಡು ಆಡಳಿತ ನಡೆಸುತ್ತಿದೆ. ರಾಜ್ಯ ರಾಜಕೀಯವು ಐತಿಹಾಸಿಕವಾಗಿ ಎಐಎಡಿಎಂಕೆ ಮತ್ತು ಡಿಎಂಕೆ ನಡುವಿನ ಪೈಪೋಟಿಯ ಸುತ್ತ ಸುತ್ತುತ್ತದೆ. 2021ರ ಚುನಾವಣೆಯಲ್ಲಿ, ಡಿಎಂಕೆ ನೇತೃತ್ವದ ಮೈತ್ರಿಕೂಟ 159 ಸ್ಥಾನಗಳನ್ನು ಗೆದ್ದರೆ, ಎಐಎಡಿಎಂಕೆ ಒಕ್ಕೂಟವು 75 ಸ್ಥಾನಗಳನ್ನು ಗಳಿಸಿತು.
ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಕಾದಿದೆ ಅಗ್ನಿ ಪರೀಕ್ಷೆ; ಈ ಬಾರಿಯಾದರೂ ಕಮಲ ಅರಳುತ್ತಾ?
ಕೇರಳದಲ್ಲಿ ಎಲ್‌ಡಿಎಫ್-ಯುಡಿಎಫ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ
ಕೇರಳದ ಚುನಾವಣೆಯು ತೀವ್ರ ಪೈಪೋಟಿಗೆ ಸಜ್ಜಾಗಿರುವಂತೆ ಕಾಣುತ್ತಿದೆ. ರಾಜ್ಯವು 140 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) 61-71 ಸ್ಥಾನಗಳನ್ನು, ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) 58-69 ಸ್ಥಾನಗಳನ್ನು ಮತ್ತು ಬಿಜೆಪಿ 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಅಥವಾ ಸಿಪಿಐ(ಎಂ) ನೇತೃತ್ವದಲ್ಲಿ ಎಲ್‌ಡಿಎಫ್ ಪ್ರಸ್ತುತ ರಾಜ್ಯವನ್ನು ಆಳುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಯುಡಿಎಫ್ ಪ್ರಮುಖ ಸವಾಲೊಡ್ಡುತ್ತಿದೆ. 2021ರಲ್ಲಿ, ಎಲ್‌ಡಿಎಫ್ 99 ಸ್ಥಾನಗಳನ್ನು ಗಳಿಸಿತ್ತು. ಯುಡಿಎಫ್ 41 ಸ್ಥಾನಕ್ಕರ ತೃಪ್ತಿಪಟ್ಟಿತ್ತು. ಭಾರತದಲ್ಲಿ ಎಡಪಂಥೀಯರು ಅಧಿಕಾರದಲ್ಲಿರುವ ಏಕೈಕ ರಾಜ್ಯ ಕೇರಳ.
ಮೇ 4ರಂದು ಬರಲಿರುವ ಫಲಿತಾಂಶಗಳು ಈ ಸಮೀಕ್ಷೆಗಳು ನಿಜವಾಗುತ್ತವೆಯೇ ಅಥವಾ ಅನಿರೀಕ್ಷಿತ ಬದಲಾವಣೆಗಳು ರಾಜಕೀಯ ನಕ್ಷೆಯನ್ನು ಬದಲಾಯಿಸುತ್ತವೆಯೇ ಎಂಬುದನ್ನು ದೃಢಪಡಿಸುತ್ತವೆ.