Foods Banned in Space : ಬಾಹ್ಯಾಕಾಶದಲ್ಲಿ ಬದುಕುವುದು ಅಷ್ಟು ಸುಲಭವಲ್ಲ, ಈ 8 ಆಹಾರಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗುವಂತಿಲ್ಲ
Foods Banned in Space: ಕೆಲವೊಂದು ಆಹಾರ ಪದಾರ್ಥಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲು ಅನುಮತಿಯಿದ್ದರೂ, ಈ 8 ವಸ್ತುಗಳಿಗೆ ಮಾತ್ರ ನಾಸಾ ಎಂದಿಗೂ ಅವಕಾಶ ಕೊಡುವುದಿಲ್ಲ. ಯಾವುದು ಆ 8 ವಸ್ತುಗಳು? ಅವುಗಳು ಬಾಹ್ಯಾಕಾಶದಲ್ಲಿ ಏಕೆ ನಿಷಿದ್ಧ? ಎಂಬುದನ್ನು ತಿಳಿಯೋಣ ಬನ್ನಿ.

ಸಾಂದರ್ಭಿಕ ಚಿತ್ರ

ನವದೆಹಲಿ: ಭೂಮಿ ಮೇಲೆ ನಾವು ಆರಾಮವಾಗಿ ಎಲ್ಲಾ ರೀತಿಯ ಆಹಾರಗಳನ್ನು ಆಸ್ವಾದಿಸುತ್ತೇವೆ. ಉಪ್ಪು, ಹುಳಿ, ಖಾರವನ್ನು ಹಾಕಿ ಬಾಯಿ ಚಪ್ಪರಿಸಿಕೊಂಡು ಊಟ ಮಾಡುತ್ತೇವೆ. ಆದರೆ, ಬಾಹ್ಯಾಕಾಶಕ್ಕೆ(Foods Banned in Space) ಹೋದರೆ ಈ ಎಲ್ಲಾ ಆಹಾರಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವೇ? ಇಲ್ಲ ಅನ್ನುತ್ತದೆ ನಾಸಾ. ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳ ಸುರಕ್ಷತೆ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಆಹಾರವನ್ನು ಮಾತ್ರ ಕಳುಹಿಸಿಕೊಡಲಾಗುತ್ತದೆ. ಕೆಲವೊಂದು ಆಹಾರ ಪದಾರ್ಥಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲು ಅನುಮತಿಯಿದ್ದರೂ, ಈ 8 ವಸ್ತುಗಳಿಗೆ ಮಾತ್ರ ನಾಸಾ ಎಂದಿಗೂ ಅವಕಾಶ ಕೊಡುವುದಿಲ್ಲ. ಯಾವುದು ಆ 8 ವಸ್ತುಗಳು? ಅವುಗಳು ಬಾಹ್ಯಾಕಾಶದಲ್ಲಿ ಏಕೆ ನಿಷಿದ್ಧ? ಎಂಬುದನ್ನು ತಿಳಿಯೋಣ ಬನ್ನಿ.
ಬ್ರೆಡ್
ಭೂಮಿಯ ಮೇಲೆ ಬ್ರೆಡ್ ಮುಖ್ಯ ಆಹಾರವಾಗಿರಬಹುದು, ಆದರೆ ಬಾಹ್ಯಾಕಾಶದಲ್ಲಿ ಅದು ಸಂಪೂರ್ಣ ನಿಷಿದ್ಧ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಬ್ರೆಡ್ ತುಂಡುಗಳು ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ತೇಲುತ್ತವೆ. ಇವು ತೇಲುತ್ತಾ ಸಾಗಿ ಸೂಕ್ಷ್ಮ ಉಪಕರಣಗಳಿಗೆ ಹೋಗಬಹುದು, ಗಾಳಿಯ ಫಿಲ್ಟರ್‌ಗಳನ್ನು ಮುಚ್ಚಿಹಾಕಿ ಗಗನಯಾತ್ರಿಗಳಿಗೆ ಉಸಿರುಗಟ್ಟಿಸುವ ಅಪಾಯವನ್ನು ಉಂಟುಮಾಡಬಹದು. ಬ್ರೆಡ್ ಬದಲಾಗಿ, ನಾಸಾ ಗಗನಯಾತ್ರಿಗಳಿಗೆ ಟೋರ್ಟಿಲ್ಲಾಗಳನ್ನು ಒದಗಿಸುತ್ತದೆ, ಇವುಗಳನ್ನು ನಿರ್ವಹಿಸಲು ಸುಲಭ. ಟೋರ್ಟಿಲ್ಲಾಗಳನ್ನು ಹೆಚ್ಚು ಸಮಯ ಶೇಖರಿಸಲು ಅಗುವುದರಿಂದ ಅವುಗಳಿಂದಾಗುವ ಸಮಸ್ಯೆ ತುಂಬಾ ಕಡಿಮೆ.
ಹುಡಿ ಉಪ್ಪು ಮತ್ತು ಮೆಣಸಿನ ಪುಡಿ
ಸಾಮಾನ್ಯ ಹರಳಿನ ರೂಪದಲ್ಲಿರುವ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋದರೆ ಅಪಾಯ ಗ್ಯಾರಂಟಿ. ಗುರುತ್ವಾಕರ್ಷಣೆ ಇಲ್ಲದ ಕಾರಣ ಅವು ಆಹಾರದ ಮೇಲೆ ಬೀಳುವುದಿಲ್ಲ, ಬದಲಾಗಿ ತೇಲುತ್ತವೆ. ಈ ಸಣ್ಣ ಕಣಗಳು ಬಾಹ್ಯಾಕಾಶ ನೌಕೆಯ ವಾತಾಯನ ವ್ಯವಸ್ಥೆಗೆ ಪ್ರವೇಶಿಸಿದರೆ, ದೊಡ್ಡ ಮಟ್ಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಹುಡಿ ಉಪ್ಪು ಅಥವಾ ಮೆಣಸಿಣ ಪುಡಿಯ ಬದಲು ಗಗನಯಾತ್ರಿಗಳಿಗೆ ದ್ರವ ಉಪ್ಪು ಮತ್ತು ಮೆಣಸನ್ನು ಒದಗಿಸಲಾಗುತ್ತದೆ. ಇದು ಯಾವುದೇ ಸಮಸ್ಯೆ ಸೃಷ್ಟಿಸದೆ ಆರಾಮವಾಗಿ ಊಟದಲ್ಲಿ ಬೆರೆಸಲು ಸಹಾಯ ಮಾಡುತ್ತದೆ.
ಈ ಸುದ್ದಿಯನ್ನು ಓದಿ: Virat-Anushka : ಪ್ರೇಮಾನಂದ್ ಮಹಾರಾಜರ ಆಶ್ರಮಕ್ಕೆ ತೆರಳಿದ ವಿರುಷ್ಕಾ ದಂಪತಿ!
ಕಾರ್ಬೊನೇಟೆಡ್ ಪಾನೀಯಗಳು
ಸೋಡಾ ಮತ್ತು ಇತರ ಕಾರ್ಬೊನೇಟೆಡ್ ಪಾನೀಯಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಯದ್ವಾತದ್ವವಾಗಿ ವರ್ತಿಸುತ್ತವೆ. ಗುರುತ್ವಾಕರ್ಷಣೆಯಿಲ್ಲದ ಕಾರಣ ಕಾರ್ಬೊನೇಟೆಡ್ ಅನಿಲ ದ್ರವದಿಂದ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಭೂಮಿಯ ಮೇಲೆ ಕೋಕೋ-ಕೋಲಾ, ಪೆಪ್ಸಿ ಕುಡಿದು ತೇಗಿದಂತೆ ಬಾಹ್ಯಾಕಾಶದಲ್ಲಿ ತೇಗಲು ಸಾಧ್ಯವಿಲ್ಲ. ಇದು ಗಗನಯಾತ್ರಿಗಳಿಗೆ ಹೊಟ್ಟೆಯುಬ್ಬರ ಮತ್ತು ಇತರ ಅಸ್ವಸ್ಥತೆಗಳನ್ನು ಉಂಟು ಮಾಡುತ್ತದೆ. 'ವೆಟ್ ಬರ್ಪಿಂಗ್' ಎಂದು ಕರೆಯಲ್ಪಡುವ ಈ ವಿದ್ಯಮಾನವು ಅಹಿತಕರ ಮತ್ತು ಅಪ್ರಾಯೋಗಿಕವಾಗಿದೆ.
ತಾಜಾ ಹಾಲು
ಹಾಲು ಅತ್ಯಂತ ಬೇಗ ಹಾಳಾಗುವ ಸ್ವಭಾವವನ್ನು ಹೊಂದಿದ್ದರಿಂದ ಅದು ನಿಷೇಧಿತ ಆಹಾರಗಳ ಪಟ್ಟಿಯಲ್ಲಿ ಸೇರಿದೆ. ತಾಜಾ ಹಾಲಿನ ಬದಲು, ಗಗನಯಾತ್ರಿಗಳು ಪುಡಿಮಾಡಿದ ಅಥವಾ ಅಲ್ಟ್ರಾ-ಪಾಶ್ಚರೀಕರಿಸಿದ ಹಾಲನ್ನು ಬಳಸುತ್ತಾರೆ. ಇದನ್ನು ದೀರ್ಘಾವಧಿಗೆ ಬಳಸಬಹುದಾಗಿದೆ.
ಆಲ್ಕೋಹಾಲ್
ಕೆಲವು ಆರಂಭಿಕ ಸೋವಿಯತ್ ಬಾಹ್ಯಾಕಾಶ ಯಾತ್ರೆಗಳು ಆಲ್ಕೋಹಾಲ್ ಅನುಮತಿಸಿದ್ದರೂ, NASA ISSನಲ್ಲಿ ಕಟ್ಟುನಿಟ್ಟಾದ ಆಲ್ಕೋಹಾಲ್ ನಿಷೇಧ ನೀತಿಯನ್ನು ಹೊಂದಿದೆ. ಆಲ್ಕೋಹಾಲ್ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ದೈಹಿಕ ಸ್ಥಿರತೆ ಮತ್ತು ಸಮನ್ವಯದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೂ ಮಿಗಿಲಾಗಿ ಬಾಹ್ಯಾಕಾಶ ನೌಕೆಯ ನೀರಿನ ಮರುಬಳಕೆ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ. ISS ನಲ್ಲಿ ನೀರು ಅಮೂಲ್ಯವಾದ ಕಾರಣ, ಮೂತ್ರವನ್ನು ಮರುಬಳಕೆ ಮಾಡುವುದು ಅವಶ್ಯಕ. ಇಂತಹ ವ್ಯವಸ್ಥೆಯಲ್ಲಿ ಆಲ್ಕೋಹಾಲ್ ಈ ಪ್ರಕ್ರಿಯೆಯನ್ನು ಅಡ್ಡಿಪಡಿಸಬಹುದು.
ಎಲೆಗಳ ಸೊಪ್ಪು (ತಾಜಾ ಲೆಟಿಸ್, ಪಾಲಕ್, ಇತ್ಯಾದಿ)
ಕ್ಯಾಬೇಜ್, ಪಾಲಕ್, ಲೆಟಿಸ್ ಮುಂತಾದ ಎಲೆಗಳ ಸೊಪ್ಪುಗಳನ್ನು ಬಾಹ್ಯಾಕಾಶದಲ್ಲಿ ನಿರ್ವಹಿಸುವುದು ತುಂಬಾ ಕಷ್ಟ. ಏಕೆಂದರೆ ಅವು ದುರ್ಬಲವಾಗಿರುತ್ತವೆ ಮತ್ತು ಬೇಗನೆ ಒಣಗುತ್ತವೆ. ಅದರ ಸಣ್ಣ ತುಂಡುಗಳು ತೇಲುತ್ತಾ ಸಾಗಿ ಫಿಲ್ಟರ್‌ಗಳು ಅಥವಾ ವಾತಾಯನ ವ್ಯವಸ್ಥೆಗಳನ್ನು ಮುಚ್ಚಬಹುದು. ಆದರೂ, ಇತ್ತೀಚಿನ ವರ್ಷಗಳಲ್ಲಿ, ಗಗನಯಾತ್ರಿಗಳು ನಿಯಂತ್ರಿತ ಪರಿಸರದಲ್ಲಿ ಬಾಹ್ಯಾಕಾಶದಲ್ಲಿಯೇ ಬೆಳೆದ ಲೆಟಿಸ್ ಅನ್ನು ಯಶಸ್ವಿಯಾಗಿ ತಿನ್ನುತ್ತಿದ್ದಾರೆ, ಇದು ಮುಂದೊಂದು ದಿನ ತಾಜಾ ಸೊಪ್ಪುಗಳು ಬಾಹ್ಯಾಕಾಶ ಆಹಾರದ ಭಾಗವಾಗಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.
ಸಾಂಪ್ರದಾಯಿಕ ಐಸ್ ಕ್ರೀಮ್
ಫ್ರೀಜ್ ಮಾಡಿ ಒಣಗಿಸಿದ 'ಗಗನಯಾತ್ರಿ ಐಸ್ ಕ್ರೀಮ್' ಭೂಮಿಯ ಮೇಲೆ ಜನಪ್ರಿಯ ವಸ್ತುವಾಗಿದ್ದರೂ, ನಿಜವಾದ ಐಸ್ ಕ್ರೀಮ್ ಬಾಹ್ಯಾಕಾಶದಲ್ಲಿ ತಿನ್ನುವಂತಿಲ್ಲ. ಇದನ್ನು ಅತಿಯಾಗಿ ಘನೀಕರಿಸುವ ಅಗತ್ಯವಿದೆ, ಇದು ಬಾಹ್ಯಾಕಾಶ ಯಾತ್ರೆಗಳಿಗೆ ಸಮರ್ಥವಲ್ಲ. ಜೊತೆಗೆ, ಇದು ಕರಗಿದ ನಂತರ ಜಿಗುಟಾಗಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ಮೀನು ಮತ್ತು ಇತರ ಬಲವಾದ ವಾಸನೆಯ ಆಹಾರಗಳು
ಬಾಹ್ಯಾಕಾಶ ನೌಕೆಯ ಪರಿಸರದಲ್ಲಿ ವಾಸನೆ ಅಷ್ಟು ಸುಲಭವಾಗಿ ಹೊರಗೆ ಹೋಗದ ಕಾರಣ, ಮೀನು ಮತ್ತು ಇತರ ವಾಸನೆಯುಕ್ತ ಆಹಾರಗಳನ್ನು ನಿಷೇಧಿಸಲಾಗಿದೆ ಅಥವಾ ಸೀಮಿತಗೊಳಿಸಲಾಗಿದೆ. ISSನ ಪ್ರದೇಶಗಳಲ್ಲಿ ಬಲವಾದ ವಾಸನೆಗಯಿಂದಾಗಿ ಗಗನಯಾತ್ರಿಗಳಿಗೆ ಅನಾನುಕೂಲವಾಗಬಹುದು. ಅತಿಯಾದ ವಾಸನೆಯಿಂದ ಅವರಿಗೆ ಸಾಮಾನ್ಯವಾದ ಆಹಾರ ಸೇವಿಸಲೂ ಕಷ್ಟವಾಗಬಹುದು.
ನಾಸಾದ ಆಹಾರ ನಿರ್ಬಂಧಗಳು ಕೇವಲ ಅನುಕೂಲತೆಯನ್ನು ಅವಲಂಬಿಸಿಲ್ಲ. ಬದಲಾಗಿ, ಶೂನ್ಯ-ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಸುರಕ್ಷತೆ ಮತ್ತು ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ನಿಯಮಗಳಾಗಿವೆ. ಗಗನಯಾತ್ರಿಗಳು ಆರೋಗ್ಯವಾಗಿರಲು, ಉತ್ತಮ ಆಹಾರ ಸೇವಿಸಲು ಮತ್ತು ಸಂಭಾವ್ಯ ಅಪಾಯಗಳಿಂದ ಮುಕ್ತವಾಗಿರಲು ಪ್ರತಿಯೊಂದು ಆಹಾರ ಪದಾರ್ಥವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಇದು ನಾವು ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.