ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Airspace Ban: ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧವನ್ನು ನವೆಂಬರ್ 23ರವರೆಗೆ ವಿಸ್ತರಿಸಿದ ಪಾಕ್

ಭಾರತೀಯ ವಿಮಾನಗಳ ಮೇಲಿನ ವಾಯುಪ್ರದೇಶ ನಿರ್ಬಂಧವನ್ನು ಪಾಕಿಸ್ತಾನ ಮತ್ತೊಂದು ತಿಂಗಳು ವಿಸ್ತರಿಸಿದೆ. ಅಂದರೆ ನವೆಂಬರ್ 23ರವರಗೆ ಪ್ರವೇಶವಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಏಪ್ರಿಲ್ 23ರಂದು ಒಂದು ತಿಂಗಳ ಕಾಲ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ನಿರ್ಬಂಧಿಸಿತ್ತು.

ಭಾರತ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧ ವಿಸ್ತರಿಸಿದ ಪಾಕ್

ಸಾಂದರ್ಭಿಕ ಚಿತ್ರ -

Profile Sushmitha Jain Oct 17, 2025 12:27 AM

ನವದೆಹಲಿ: ಭಾರತೀಯ ವಿಮಾನಗಳ ಮೇಲಿನ ತನ್ನ ವಾಯುಪ್ರದೇಶ (Airspace) ನಿರ್ಬಂಧವನ್ನು ಪಾಕಿಸ್ತಾನ ನವೆಂಬರ್ 23ರವರೆಗೆ ವಿಸ್ತರಿಸಿದ್ದು, ಭಾರತ-ಪಾಕ್ (India-Pakistan) ನಡುವೆ ವಾಯುಯಾನ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ಮತ್ತೊಂದು ಅಧ್ಯಾಯ ಶುರುವಾದಂತಾಗಿದೆ. ಪಾಕಿಸ್ತಾನ ಏವಿಯೇಶನ್ ಅಥಾರಿಟಿ (Pakistan Aviation Authority) ಈ ನಿರ್ಬಂಧವನ್ನು ದೃಢೀಕರಿಸುವ ಹೊಸ ನೋಟಿಸ್ ಟು ಏರ್‌ಮೆನ್ (NOTAM) ಅನ್ನು ಹೊರಡಿಸಿದೆ. ಇದು ಎಲ್ಲ ಭಾರತೀಯ ನಾಗರಿಕ ಹಾಗೂ ಸೈನಿಕ ವಿಮಾನಗಳಿಗೆ ಅನ್ವಯಿಸುತ್ತದೆ.

26 ಜನರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಏಪ್ರಿಲ್‌ 23ರಿಂದ ಎರಡೂ ದೇಶಗಳು ಪರಸ್ಪರ ವಿಮಾನಗಳಿಗೆ ತಮ್ಮ ವಾಯುಪ್ರದೇಶವನ್ನು ಬಂದ್ ಮಾಡಿಕೊಂಡಿವೆ. ಈ ಕ್ರಮದಿಂದಾಗಿ ಪ್ರಮುಖ ಅಂತರರಾಷ್ಟ್ರೀಯ ವಿಮಾನ ಮಾರ್ಗಗಳಿಗೆ ಅಡ್ಡಿ ಉಂಟಾಗಿದ್ದು, ಭಾರತ(India), ಮಧ್ಯಪ್ರಾಚ್ಯ (Middle East), ಯುರೋಪ್(Europe) ಮತ್ತು ಅಮೆರಿಕ (United States) ನಡುವೆ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಗಳ ವೆಚ್ಚವನ್ನು ಹೆಚ್ಚಿಸಿದೆ.

NOTAM ಇದು ವಿಮಾನಯಾನಕ್ಕೆ ಸಂಬಂಧಿತ ನಿರ್ಣಾಯಕ ಬದಲಾವಣೆಗಳನ್ನು ವಿಮಾನಯಾನ ಸಂಸ್ಥೆಗಳಿಗೆ ತಿಳಿಸಲು ಜಾಗತಿಕವಾಗಿ ಬಳಸಲಾಗುವ ಪ್ರಮಾಣಿತ ಸಂವಹನ. ಇದೀಗ ಪಾಕಿಸ್ತಾನ ಹೊರಡಿಸಿರುವ ಈ NOTAM, ಇನ್ನೂ ಒಂದು ತಿಂಗಳವರೆಗೆ ಭಾರತೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯುಪ್ರದೇಶ ಮುಚ್ಚಲ್ಪಟ್ಟಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಏಪ್ರಿಲ್ 23ರಿಂದ ಆರಂಭವಾದ ಈ ವಾಯುಪ್ರದೇಶ ನಿರ್ಬಂಧ ಕ್ರಮವನ್ನು ಪಾಕ್ ಹಲವು ಬಾರಿ ಮುಂದುವರಿಸುತ್ತ ಬಂದಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದೆ ಎಂಬ ಭಾರತದ ಆರೋಪಗಳನ್ನು ತಳ್ಳಿಹಾಕುತ್ತಿದೆ.

ಈ ಸುದ್ದಿಯನ್ನು ಓದಿ;Shilpa Shetty: 60 ಕೋಟಿ ವಂಚನೆ ಪ್ರಕರಣ: ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ನಟಿ ಶಿಲ್ಪಾ ಶೆಟ್ಟಿ
ಈ ನಿರ್ಬಂಧದಿಂದಾಗಿ ಭಾರತೀಯ ವಿಮಾನಯಾನ ಕಂಪನಿಗಳಿಗೆ ದೊಡ್ಡ ಹೊರೆ ಬಿದ್ದಿದೆ. ಪಾಕಿಸ್ತಾನದ ವಾಯು ಪ್ರದೇಶವನ್ನು ತಪ್ಪಿಸಲು ವಿಮಾನಗಳು ಅರಬ್ಬೀ ಸಮುದ್ರ ಅಥವಾ ಮಧ್ಯ ಏಷ್ಯಾ ಮಾರ್ಗದ ಮೂಲಕ ಸುತ್ತುವರೆದು ಹೋಗಬೇಕಾಗಿದೆ. ಇದರಿಂದಾಗಿ ಪ್ರಯಾಣ ಸಮಯ ಮತ್ತು ಇಂಧನ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ.

ಇದೀಗ ಭಾರತವು ತನ್ನ ವಾಯುಪ್ರದೇಶವನ್ನು ಪಾಕಿಸ್ತಾನಿ ನಾಗರಿಕ ಮತ್ತು ಸೈನಿಕ ವಿಮಾನಗಳಿಗೆ ವಿಧಿಸಿರುವ ನಿರ್ಬಂಧವನ್ನು ಅಕ್ಟೋಬರ್ 24ರವರೆಗೆ ಮುಂದುವರಿಸಿದೆ. ಏಪ್ರಿಲ್‌ನಿಂದ ಉಭಯ ದೇಶಗಳು ಪರಸ್ಪರ ಏರ್‌ಸ್ಪೇಸ್ ಮುಚ್ಚುವ ಕ್ರಮವನ್ನು ಅನುಸರಿಸುತ್ತಾ ಬಂದಿವೆ.

ಪಹಲ್ಗಾಮ್ ದಾಳಿ ಬಳಿಕ, ಭಾರತವು ಪಾಕಿಸ್ತಾನದ ವಿರುದ್ಧ ಅನೇಕ ನಿಬಂಧನೆಗಳನ್ನು ಹೇರಿದೆ. ಉಭಯ ರಾಷ್ಟ್ರಗಳ ನಡುವಿನ 65 ವರ್ಷಗಳಷ್ಟು ಹಳೆಯದಾದ ಸಿಂಧು ನದಿ ನೀರು ಹಂಚಿಕೆ ಒಪ್ಪಂದ ಅಮಾನತು, ವಾಘಾ ಗಡಿ ಮುಚ್ಚುವುದು, ಭಾರತದಲ್ಲಿರುವ ಪಾಕಿಸ್ತಾನೀಯರನ್ನು ಹೊರ ಹಾಕುವುದು ಸೇರಿದಂತೆ ಇನ್ನು ಹಲವಾರು ರಾಜತಾಂತ್ರಿಕ ಕ್ರಮಗಳನ್ನು ಭಾರತ ಕೈಗೊಂಡಿತ್ತು.