ಆತ್ಮಹತ್ಯೆಗೆ ಶರಣಾದ್ರಾ ಟಿಎಂಸಿ ನಾಯಕ ಆಶಿಶ್ ಬ್ಯಾನರ್ಜಿ? ಪಕ್ಷದ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
TMC leader Ashish Banerjee: ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಅವರು ರಾಜ್ಯದ ಬಿರ್ಭುಮ್ ಜಿಲ್ಲೆಯ ಪಕ್ಷದ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮ್ಮ ರಾಜಕೀಯ ಜೀವನದುದ್ದಕ್ಕೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಆತ್ಮಹತ್ಯೆ ಪತ್ರದಲ್ಲಿ ಬ್ಯಾನರ್ಜಿ ಬರೆದಿದ್ದಾರೆ.
ಆತ್ಮಹತ್ಯೆಗೆ ಶರಣಾದ್ರಾ ಟಿಎಂಸಿ ನಾಯಕ ಆಶಿಶ್ ಬ್ಯಾನರ್ಜಿ? -
ಕೋಲ್ಕತ್ತಾ, ಆ.16: ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಪಶ್ಚಿಮ ಬಂಗಾಳ (West Bengal) ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ (Ashish Banerjee) ಅವರು ರಾಜ್ಯದ ಬಿರ್ಭುಮ್ ಜಿಲ್ಲೆಯ ಪಕ್ಷದ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಜಿ ಸಚಿವರಾಗಿದ್ದ ಅವರು, ರಾಂಪುರ್ಹತ್‌ನಿಂದ ಐದು ಬಾರಿ ಶಾಸಕರಾಗಿದ್ದರು. 2001 ರಿಂದ 2026 ರವರೆಗೆ ಸತತ 25 ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ, ಬ್ಯಾನರ್ಜಿ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಧ್ರುಬಾ ಸಹಾ ವಿರುದ್ಧ ಸೋಲುಂಡರು.
ಸ್ಥಳೀಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಆಶಿಶ್ ಬ್ಯಾನರ್ಜಿ ಅವರು ತ್ರಿವರ್ಣ ಧ್ವಜ ಹಾರಿಸಿದ ಒಂದು ದಿನದ ನಂತರ, ಅವರ ರಾಮ್‌ಪುರ್ಹತ್ ನಿವಾಸದ ಪಕ್ಕದಲ್ಲಿರುವ ಟಿಎಂಸಿ ಕಚೇರಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ವೇಳೆ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದೆ. ಪತ್ರದಲ್ಲಿ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ತಮ್ಮ ರಾಜಕೀಯ ಜೀವನದುದ್ದಕ್ಕೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಬ್ಯಾನರ್ಜಿ ಬರೆದಿದ್ದಾರೆ.
ಅವರು ಈ ಹಿಂದೆ ಅಧ್ಯಕ್ಷರಾಗಿದ್ದ ತಾರಾಪೀಠ್ ರಾಮ್‌ಪುರಹಾಟ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ನಡೆದಿವೆ ಎನ್ನಲಾದ ಅಕ್ರಮಗಳ ಆರೋಪಗಳನ್ನು ಉಲ್ಲೇಖಿಸಿದ್ದಾರೆ. ಯೋಜನೆ ಮತ್ತು ಅಭಿವೃದ್ಧಿ ಸಂಸ್ಥೆಯ ಟೆಂಡರ್ ಸಂಬಂಧಿತ ನಿರ್ಧಾರಗಳು, ಚೆಕ್ ವಿತರಣೆ, ಯೋಜನಾ ಅನುಮೋದನೆಗಳು ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರಗಳಲ್ಲಿ ತನ್ನ ಪಾತ್ರವಿಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ. ತನ್ನನ್ನು ಅವಮಾನಿಸಲು ಪ್ರಯತ್ನಗಳು ನಡೆದಿವೆ ಎಂದು ಅವರು ಆರೋಪಿಸಿದರು.
ಪಕ್ಷದೊಳಗಿನ ತಪ್ಪುಗಳನ್ನು ತಮಗೆ ಯಾವಾಗಲೂ ಪ್ರತಿಭಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಿರಿಯ ನಾಯಕರಾದ ಆಶೀಶ್ ಬ್ಯಾನರ್ಜಿ ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ನಂತರ ಅವರು ರಾಜಕೀಯದಲ್ಲಿ ಅಷ್ಟಾಗಿ ಸಕ್ರಿಯರಾಗಿರಲಿಲ್ಲ ಎನ್ನಲಾಗಿದೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ 15 ವರ್ಷಗಳ ಆಡಳಿತ ಅಂತ್ಯಗೊಂಡ ಕೆಲವೇ ತಿಂಗಳುಗಳಲ್ಲಿ ಅವರ ಸಾವು ಸಂಭವಿಸಿದೆ.
ರಾಜಕೀಯ ಪರಿಸ್ಥಿತಿಯ ಈ ಬದಲಾವಣೆಯಿಂದಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಹಲವಾರು ಮಾಜಿ ನಾಯಕರು ಮತ್ತು ಶಾಸಕರು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖೆ ಹಾಗೂ ಬಂಧನಗಳನ್ನು ಎದುರಿಸುವಂತಾಗಿದೆ. ಬ್ಯಾನರ್ಜಿ ಅವರ ಸಾವಿಗೆ ಕಾರಣವಾದ ನಿಖರವಾದ ಸಂದರ್ಭಗಳು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.