ನವದೆಹಲಿ, ಮೇ 4: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ವರದಿ ಮಾಡುವಾಗ ಅಂತಾರಾಷ್ಟ್ರೀಯ ಸುದ್ದಿ ಪತ್ರಿಕೆಗಳ ಪುಟಗಳನ್ನು ಕಿತ್ತಳೆ ಬಣ್ಣದಲ್ಲಿ ಚಿತ್ರಿಸಲಾಗಿತ್ತು. ವಿದೇಶಿ ಮಾಧ್ಯಮಗಳಲ್ಲಿನ ಹೆಚ್ಚಿನ ವರದಿಗಳು ಪ್ರಧಾನವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಬಿಜೆಪಿ ಪಶ್ಚಿಮ ಬಂಗಾಳದ ಚುನಾವಣಾ ಗೆಲುವಿನ ಮೇಲೆ ಕೇಂದ್ರೀಕರಿಸಿದ್ದು, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamatha Banerjee) ಅವರ 15 ವರ್ಷಗಳ ಭದ್ರಕೋಟೆಯನ್ನು ಕೊನೆಗೊಳಿಸಿದೆ ಎಂಬುದನ್ನು ಬಿತ್ತರಿಸಿದ್ದವು.
ಲಂಡನ್‌ನಿಂದ ನ್ಯೂಯಾರ್ಕ್‌ವರೆಗೆ ಮತ್ತು ಇಸ್ಲಾಮಾಬಾದ್‌ನಿಂದ ಢಾಕಾದವರೆಗೆ ಹಲವು ಮಾಧ್ಯಮಗಳು ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಗೆಲವನ್ನು ಉಲ್ಲೇಖಿಸಿದವು. ವಿಜಯ್ ಕೇವಲ ಎರಡು ವರ್ಷಗಳ ಹಿಂದೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಪ್ರಾರಂಭಿಸಿ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅನ್ನು ಸೋಲಿಸಿದರು.
ವಿರೋಧ ಪಕ್ಷದ ಭದ್ರಕೋಟೆ ಪಶ್ಚಿಮ ಬಂಗಾಳದ ಮೇಲೆ ಬಿಜೆಪಿ ಹಿಡಿತ ಸಾಧಿಸಿರುವುದರ ಮೇಲೆ ಬಿಬಿಸಿ ತನ್ನ ವರದಿಯನ್ನು ಕೇಂದ್ರೀಕರಿಸಿದೆ. ‘ಭಾರತದ ಅತ್ಯಂತ ಕಠಿಣ ರಾಜಕೀಯ ಗಡಿಗಳಲ್ಲಿ ಒಂದಾದ ಬಂಗಾಳವನ್ನು ಮೋದಿಯ ಬಿಜೆಪಿ ವಶಪಡಿಸಿಕೊಂಡಿದೆ’ ಎಂದು ಶೀರ್ಷಿಕೆ ನೀಡಲಾಗಿದೆ. ಪೂರ್ವ ರಾಜ್ಯದಲ್ಲಿ ಬಿಜೆಪಿಯ ಗೆಲುವು ‘ಮೋದಿಯವರ 12 ವರ್ಷಗಳ ಆಳ್ವಿಕೆಯ ಅತ್ಯಂತ ಮಹತ್ವದ ಪ್ರಗತಿಗಳಲ್ಲಿ ಒಂದಾಗಿದೆ’ ಎಂದು ಹೇಳಿಕೊಂಡಿದೆ.
ಮನೆಗೆಲಸ ಮಾಡುತ್ತಿದ್ಧ ಮಹಿಳೆ ಈಗ ಬಂಗಾಳದ ಶಾಸಕಿ!; ಯಾರು ಈ ಕಲಿತಾ ಮಾಝಿ?
ಇನ್ನೊಂದು ಪ್ರಮುಖ ಬ್ರಿಟಿಷ್ ದಿನಪತ್ರಿಕೆ 'ದಿ ಗಾರ್ಡಿಯನ್' ಕೂಡ ಬಂಗಾಳ ಫಲಿತಾಂಶಗಳ ಮೇಲೆ ಗಮನ ಕೇಂದ್ರೀಕರಿಸಿತು. ವಿರೋಧ ಪಕ್ಷದ ಭದ್ರಕೋಟೆಯಾಗಿದ್ದ ರಾಜ್ಯವನ್ನು ಬಿಜೆಪಿ ವಶಪಡಿಸಿಕೊಂಡಿದೆ ಎಂದು ವಿವರಿಸಿದೆ.
ಅಮೆರಿಕದ ಪ್ರಸಿದ್ಧ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್, ʼಮೋದಿಯ ಹಿಂದೂ ರಾಷ್ಟ್ರೀಯವಾದಿಗಳು ಭಾರತದ ವಿರೋಧ ಪಕ್ಷದ ಭದ್ರಕೋಟೆಯನ್ನು ವಶಪಡಿಸಿಕೊಂಡರುʼ ಎಂಬ ಶೀರ್ಷಿಕೆಯ ವರದಿಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಾಧನೆಯನ್ನು ಐತಿಹಾಸಿಕ ಎಂದು ಬಣ್ಣಿಸಿದೆ.
ತಮಿಳುನಾಡಿನಲ್ಲಿ ವಿಜಯ್ ಅವರ ಅಚ್ಚರಿಯ ಗೆಲುವಿನ ಬಗ್ಗೆಯೂ ಪ್ರಕಟಿಸಿದೆ. ʼಆ ದಿನದ ಅತಿದೊಡ್ಡ ಅಚ್ಚರಿಗಳಲ್ಲಿ ಒಂದು ತಮಿಳುನಾಡಿನಲ್ಲಿತ್ತು. ಅಲ್ಲಿ ನಟ ಜೋಸೆಫ್ ವಿಜಯ್ ಚಂದ್ರಶೇಖರ್ ಅವರ ಪಕ್ಷವು ರಾಜ್ಯದ ಯಾವುದೇ ಸ್ಥಾಪಿತ ಪಕ್ಷಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿತುʼ ಎಂದು ವರದಿಯಲ್ಲಿ ಹೇಳಲಾಗಿದೆ.
ʼಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವು ಪ್ರಧಾನಿ ಮೋದಿ ಅವರ ವರ್ಚಸ್ಸು ಹೆಚ್ಚಿಸುತ್ತದೆ ಮತ್ತು ಅವರ ಮೂರನೇ ಅವಧಿಯ ಮಧ್ಯದಲ್ಲಿ ಅವರ ಸ್ಥಾನವನ್ನು ಬಲಪಡಿಸುತ್ತದೆʼ ಎಂದು ವಾಷಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ಹೇಳಿದೆ.
“2024ರ ರಾಷ್ಟ್ರೀಯ ಚುನಾವಣೆಯು ಬಿಜೆಪಿ ಸರ್ಕಾರ ರಚಿಸಲು ಪ್ರಾದೇಶಿಕ ಮಿತ್ರಪಕ್ಷಗಳನ್ನು ಅವಲಂಬಿಸುವಂತೆ ಮಾಡಿತು. 2029ರಲ್ಲಿ ಅವರು ದಾಖಲೆಯ ನಾಲ್ಕನೇ ಅವಧಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ” ಎಂದು ಲೇಖನದಲ್ಲಿ ತಿಳಿಸಿದೆ.
ಇಂದಿರಾ ಗಾಂಧಿ ಕಾಲದ ಕಾಂಗ್ರೆಸ್ ದಾಖಲೆ ಸರಿಗಟ್ಟಿದ ಬಿಜೆಪಿ: ಈಗ ಕಛ್‌ನಿಂದ ಕಿಬಿತ್ತುವರೆಗೆ ಕೇಸರಿ ಅಲೆ
ಪಾಕಿಸ್ತಾನ ಮಾಧ್ಯಮಗಳ ವರದಿಯಲ್ಲಿ ಏನಿದೆ?
ಇತ್ತ ಪಾಕಿಸ್ತಾನದಲ್ಲಿ, ಡಾನ್ ಪತ್ರಿಕೆಯು ಚುನಾವಣೆಗಳ ಕುರಿತು ವಿಶೇಷ ವರದಿ ಪ್ರಕಟಿಸಿತು. ಅದರಲ್ಲಿ ʼಪ್ರಧಾನಿ ಮೋದಿ ಅವರ ರಾಷ್ಟ್ರೀಯತಾವಾದಿ ಪಕ್ಷವು ವಿರೋಧ ಪಕ್ಷದ ಹಿಡಿತದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಜಯಗಳಿಸಿತು. ತನ್ನ ಎದುರಾಳಿಯು ದೀರ್ಘಕಾಲದಿಂದ ಹೊಂದಿದ್ದ ಭದ್ರಕೋಟೆಯನ್ನು ವಶಪಡಿಸಿಕೊಂಡಿತುʼʼ ಎಂದು ವಿವರಿಸಿದೆ.
ಬಾಂಗ್ಲಾದೇಶದ ಢಾಕಾ ಟ್ರಿಬ್ಯೂನ್ ಕೂಡ ಅದೇ ವರದಿಯನ್ನು ಪ್ರಕಟಿಸಿತು. ಜತೆಗೆ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಎಂ.ಕೆ. ಸ್ಟಾಲಿನ್ ಅವರ ಸೋಲು ಹಾಗೂ ನಟ ಜೋಸೆಫ್ ವಿಜಯ್‌ರ ಅಪ್ರತಿಮ ಗೆಲುವಿನ ಬಗ್ಗೆ ಹೇಳಿದೆ.