ನವದೆಹಲಿ, ಮೇ 12: ಭಾರತದಲ್ಲಿ ಇಂಧನ ಬೆಲೆ ಏರಿಕೆಯಾಗಲಿವೆಯೇ ಎಂಬ ಪ್ರಶ್ನೆಗೆ ಸಿಐಐ (CII) ವಾರ್ಷಿಕ ವ್ಯಾಪಾರ ಶೃಂಗಸಭೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ (Union Oil Minister Hardeep Singh Puri) ಪ್ರಮುಖ ಸುಳಿವು ನೀಡಿದ್ದಾರೆ. "ಬೆಲೆಗಳು ಏರುವುದೇ ಇಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಬೆಲೆ ಏರಿಕೆಗೂ ಮತ್ತು ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳುವ ಮೂಲಕ ಅವರು ಮುಂಬರುವ ದಿನಗಳಲ್ಲಿ ತೈಲ ಬೆಲೆ ಏರಿಕೆಯ ಸಂಕೇತ ನೀಡಿದ್ದಾರೆ.
ವಿವಿಧ ರಾಜ್ಯಗಳ ಚುನಾವಣೆಗಳು ಮುಗಿದ ನಂತರ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಟೀಕೆಗಳನ್ನು ಸಚಿವರು ತಳ್ಳಿಹಾಕಿದರು. "75 ದಿನಗಳಿಂದ ಯುದ್ಧ ನಡೆಯುತ್ತಿದೆ. ಆದರೆ ಕಳೆದ 4 ವರ್ಷಗಳಿಂದ ನಾವು ಬೆಲೆ ಏರಿಕೆ ಮಾಡಿಲ್ಲ. ಇಂತಹ ಸಾಧನೆ ಮಾಡಿದ ವಿಶ್ವದ ಏಕೈಕ ದೇಶ ನಮ್ಮದು. 2022ರ ನಂತರ ನಾವು ಬೆಲೆ ಹೆಚ್ಚಿಸಿಲ್ಲ, ಅದರ ನಂತರವೂ ಅನೇಕ ಸಾಮಾನ್ಯ ಮತ್ತು ವಿಧಾನಸಭಾ ಚುನಾವಣೆಗಳು ನಡೆದಿವೆ" ಎಂದು ಅವರು ಪ್ರತಿಪಾದಿಸಿದರು.
ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿಕೆ:
ಎಲ್‌ಪಿಜಿ ಮತ್ತು ಕಚ್ಚಾ ತೈಲ ಸಂಗ್ರಹ
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಇಂಧನ ಕೊರತೆಯಿಲ್ಲ ಎಂದು ಸಚಿವರು ಭರವಸೆ ನೀಡಿದರು. ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 36 ಸಾವಿರ ಮೆಟ್ರಿಕ್ ಟನ್‌ನಿಂದ 54 ಸಾವಿರ ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಭಾರತದ ಬಳಿ 60 ದಿನಗಳ ಕಚ್ಚಾ ತೈಲ ಮತ್ತು 45 ದಿನಗಳ ಎಲ್‌ಪಿಜಿ ಸಂಗ್ರಹವಿದೆ. ಪೆಟ್ರೋಲ್ ಬಳಕೆ ಶೇ. 6ರಷ್ಟು ಹೆಚ್ಚಾಗಿದ್ದರೂ, ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಪೂರೈಕೆ ವ್ಯತ್ಯಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇಂಧನ ಉಳಿತಾಯಕ್ಕೆ ಪ್ರಧಾನಿ ಮನವಿ ಬೆನ್ನಲ್ಲೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ ಎಂದ ಸರ್ಕಾರ
ಪ್ರಧಾನಿ ಮೋದಿಯವರ 'ವೇಕ್-ಅಪ್ ಕಾಲ್'
ಪ್ರಧಾನಿ ನರೇಂದ್ರ ಮೋದಿ ಇಂಧನ ಬಳಕೆ ಕಡಿತ, ಚಿನ್ನದ ಖರೀದಿ ಮತ್ತು ವಿದೇಶಿ ಪ್ರವಾಸಗಳನ್ನು ಮುಂದೂಡುವಂತೆ ನೀಡಿರುವ ಕರೆಯನ್ನು ಸಚಿವರು 'ಎಚ್ಚರಿಕೆಯ ಗಂಟೆ' (Wake-up call) ಎಂದು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ತಗ್ಗಿಸಲು ಜನರು ಮಿತವ್ಯಯದ ಹಾದಿ ಹಿಡಿಯಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಮೆಟ್ರೋ ಬಳಕೆ, ವರ್ಕ್ ಫ್ರಮ್ ಹೋಮ್ ಮತ್ತು ರೈಲ್ವೆ ಸೇವೆಗಳ ಬಳಕೆಗೆ ಪ್ರಧಾನಿ ನೀಡಿದ ಸಲಹೆಯು ದೇಶದ ವಿದೇಶಿ ವಿನಿಮಯವನ್ನು ಉಳಿಸುವ ಯೋಜನೆಯ ಭಾಗ.
ಒಟ್ಟಾರೆಯಾಗಿ, ಜಾಗತಿಕ ಅನಿಶ್ಚಿತತೆ ಮತ್ತು ಹೆಚ್ಚುತ್ತಿರುವ ಆಮದು ವೆಚ್ಚಗಳ ನಡುವೆ, ಮುಂಬರುವ ದಿನಗಳಲ್ಲಿ ಇಂಧನ ಬೆಲೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯನ್ನು ಸಚಿವರ ಮಾತುಗಳು ಪುಷ್ಟೀಕರಿಸಿವೆ. ಇದು ದೇಶದ ವಿತ್ತೀಯ ಸ್ಥಿತಿಯನ್ನು ಕಾಪಾಡಿಕೊಳ್ಳಲು ಅನಿವಾರ್ಯ ಎಂಬ ಧ್ವನಿ ಅವರ ಹೇಳಿಕೆಯಲ್ಲಿ ಎದ್ದು ಕಾಣುತ್ತಿದೆ.