ಪಣಜಿ, ಡಿ. 18: ಇತ್ತೀಚೆಗೆ ಉತ್ತರ ಗೋವಾದ ನೈಟ್ ಕ್ಲಬ್ (Goa Nightclub Fire)ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ (Fire 0Accident) 25 ಜನರ ಜೀವವನ್ನು ಬಲಿ ಪಡೆದುಕೊಂಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ ಕ್ಲಬ್‌ನ ಮಾಲಕರಾದ ಸೌರವ್ ಮತ್ತು ಗೌರವ್ ಲೂಥ್ರಾ ಅವರನ್ನು ಪೊಲೀಸರು ಬಳಿಕ ಥಾಯ್ಲೆಂಡ್‌ನಿಂದ ಬಂಧಿಸಿ ಭಾರತಕ್ಕೆ ಕರೆತಂದಿದ್ದಾರೆ. ಆದರೆ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಗಳ ಜತೆ ಲೂಥ್ರಾ ಬ್ರದರ್ಸ್(Luthra Brothers) ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಇಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ ತಕ್ಷಣ ಲೂಥ್ರಾ ಬ್ರದರ್ಸ್ ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ಬಳಿಕ ಅವರನ್ನು ಡಿ. 16ರಂದು ಭಾರತಕ್ಕೆ ಕರೆತರಲಾಗಿತ್ತು. ಇಲ್ಲಿ ಅವರಿಗೆ ಐದು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಇವರಿಬ್ಬರನ್ನೂ ಗೋವಾದ ನ್ಯಾಯಾಲಕ್ಕೆ ಹಾಜರುಪಡಿಸಿದ್ದ ಸಂದರ್ಭದಲ್ಲಿ ಅವರು ವೈದ್ಯಕೀಯ ಸಹಾಯವನ್ನು ಬಯಸಿದ್ದರು. ಆದರೆ ನ್ಯಾಯಾಲಯ ಅದಕ್ಕೆ ನಿರಾಕರಿಸಿತು.
ಮೂಲಗಳ ಪ್ರಕಾರ ಲೂಥ್ರಾ ಬ್ರದರ್ಸ್ ಈಗಲೂ ತನಿಖೆಯ ಸಂದರ್ಭದಲ್ಲಿ ಗೋವಾ ಪೊಲೀಸರಿಗೆ ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ. ಪ್ರತೀ ಗಂಟೆಗೊಗೊಮ್ಮೆ ಲೂಥ್ರಾ ಬ್ರದರ್ಸ್ ಏನಾದರೊಂದು ಅನಾರೋಗ್ಯದ ಕುಂಟುನೆಪ ಹೇಳುತ್ತಿದ್ದಾರೆ ಅಥವಾ ಬೆನ್ನು ನೋವು, ಎದೆ ನೋವು, ಕಾಲು ನೋವೆಂದು ತನಿಖೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಆದರೆ ವೈದ್ಯಕೀಯ ಪರೀಕ್ಷೆಗಳ ಸಂದರ್ಭದಲ್ಲಿ ಅವರಲ್ಲಿ ಅಂತಹ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲವೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕಳೆದ 36 ಗಂಟೆಗಳಲ್ಲಿ ಈ ಕಿಲಾಡಿ ಬ್ರದರ್ಸ್‌ಗೆ ನಾಲ್ಕು ಬಾರಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದರೆ ಇದು ಪೊಲೀಸ್ ಕಸ್ಟಡಿ ಅವಧಿಯನ್ನು ಹಾಳು ಮಾಡಲು ಈ ಸಹೋದರರು ಮಾಡಿರುವ ಕಿತಾಪತಿ ಎಂದು ಪೊಲೀಸ್ ಅಧಿಕಾರಿಗಳು ಸಂಶಯಪಡುತ್ತಿದ್ದಾರೆ. ಅವರ ದಾಖಲೆಗಳಲ್ಲಿ ಹಲವು ಹಂತಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ.
ಲೂಥ್ರಾ ಸಹೋದರರು ಥಾಯ್ಲೆಂಡ್‌ಗೆ ಪರಾರಿಯಾದ ಬಳಿಕವೂ ಗೋವಾ ಪೊಲೀಸರು ಅವರನ್ನು ಸಂಪರ್ಕಿಸಿ, ಭಾರತಕ್ಕೆ ವಾಪಾಸಾಗಿ ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದ್ದರು. ಆದರೆ ಪೊಲೀಸರ ಈ ಮನವಿಯನ್ನು ಅವರಿಬ್ಬರೂ ಕ್ಯಾರೇ ಅಂದಿರಲಿಲ್ಲ. ತಮ್ಮ ಮಾಲಕತ್ವದ ಕ್ಲಬ್‌ನಲ್ಲಿ ದುರಂತ ಸಾವನ್ನಪ್ಪಿದ ನತದೃಷ್ಟರ ಬಗ್ಗೆ ಅವರಿಬ್ಬರಿಗೂ ಕನಿಷ್ಠ ನೋವೂ ಇದ್ದಂತಿರಲಿಲ್ಲ ಎನ್ನುವ ವಿಚಾರವನ್ನು ಪೊಲೀಸ್ ಮೂಲಗಳು ಮಾಧ್ಯಮಗಳಿಗೆ ಬಹಿರಂಗಪಡಿಸಿವೆ.
ಡಿ. 6ರ ದುರಂತದ ಬಳಿಕ ಲೂಥ್ರಾ ಬ್ರದರ್ಸ್ ಮೇಲೆ ಬಲವಂತದ ನರಮೇಧ ಮತ್ತು ನಿರ್ಲಕ್ಷತೆಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈ ನೈಟ್ ಕ್ಲಬ್‌ನಲ್ಲಿ ಸೂಕ್ತ ಫೈರ್ ಸೇಫ್ಟಿ ವ್ಯವಸ್ಥೆಗಳೂ ಇರಲಿಲ್ಲವೆಂಬುದು ತನಿಖೆಯ ವೇಳೆ ಬಹಿರಂಗಗೊಂಡಿದೆ.
ಕ್ಲಬ್ ಹೊತ್ತಿ ಉರಿಯುವಾಗಲೇ ಥೈಲ್ಯಾಂಡ್‌ಗೆ ಎಸ್ಕೇಪ್; ಲೂತ್ರಾ ಸಹೋದರರ ಪತ್ತೆ ಮಾಡಿದ್ದೇ ರೋಚಕ
ಥಾಯ್ಲೆಂಡ್‌ನಿಂದ ಲೂಥ್ರಾ ಬ್ರದರ್ಸ್ ಅನ್ನು ಭಾರತಕ್ಕೆ ಕರೆತಂದ ಬಳಿಕ ಅವರನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯವು ಗೋವಾ ಪೊಲೀಸರಿಗೆ ಎರಡು ದಿನಗಳ ಟ್ರಾನ್ಸಿಟ್ ರಿಮಾಂಡ್‌ಗೆ ಅವಕಾಶ ಕೊಟ್ಟಿತ್ತು. ಅಲ್ಲಿಂದ ಬಳಿಕ ಅವರನ್ನು ಗೋವಾಗೆ ಕರೆತರಲಾಗಿತ್ತು.
ನೈಟ್ ಕ್ಲಬ್‌ನಲ್ಲಿ ಡಿ. 6ರಂದು ಫೈರ್ ಶೋ ನಡೆಯುತ್ತಿದ್ದ ವೇಳೆ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ನೈಟ್ ಕ್ಲಬ್ ಕಳೆದ 18 ತಿಂಗಳಿಂದ ಸರಿಯಾದ ದಾಖಲೆಗಳಿಲ್ಲದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು ಎಂಬ ವಿಚಾರವನ್ನೂ ಸಹ ಪೊಲೀಸರು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಮಾತ್ರವಲ್ಲದೆ ಈ ನೈಟ್ ಕ್ಲಬ್ ಪರವಾನಿಗೆಯನ್ನು 2024ರ ಬಳಿಕ ನವೀಕರಿಸಿಕೊಂಡಿರಲಿಲ್ಲ. ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೆ ಫೈರ್ ವರ್ಕ್ ಆಯೋಜಿಸಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ಲೂಥ್ರಾ ಬ್ರದರ್ಸ್ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗಿದೆ.