ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 50 ಲಕ್ಷ ರುಪಾಯಿ ಮೌಲ್ಯದ ಚಿನ್ನ ಮಾಯ; ಜೀವನದ ಸಂಪಾದನೆಯನ್ನೆಲ್ಲ ಧಾರೆ ಎರೆದು ಖರೀದಿಸಿದ್ದ ಆಭರಣ ಕಾಣದೆ ಮಹಿಳೆ ಶಾಕ್‌

Gold Jewellery Missing: 55 ವರ್ಷದ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಲಾಕರ್ ಖಾಲಿಯಾಗಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ರಶ್ಮಿ ಅರೋರಾ ಎಂಬ ಮಹಿಳೆ 2003ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ (ಎಸ್‌ಬಿಟಿ) ಲಾಕರ್‌ನಲ್ಲಿ 50 ಲಕ್ಷ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಇಟ್ಟಿದ್ದರು.

ಎಐ ರಚಿತ ಚಿತ್ರ

ಲಖನೌ, ಆ. 11: ಮನೆಯಲ್ಲಿಟ್ಟರೆ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನವನ್ನು ಎಲ್ಲಿ ಕಳ್ಳರು ದೋಚುತ್ತಾರೋ ಎಂಬ ಭಯದಿಂದ ಹಲವರು ಬ್ಯಾಂಕ್ ಲಾಂಕರ್‌ನಲ್ಲಿಡುತ್ತಾರೆ. ಆದರೆ ಅಲ್ಲಿಂದಲೇ ಹಣ, ಬೆಲೆ ಬಾಳುವ ವಸ್ತು ಮಾಯವಾದರೆ? ಹೌದು, ಇಂತಹದ್ದೊಂದು ಆಘಾತಕಾರಿ ಈ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದ್ದು, ಮಹಿಳೆ ದಿಗ್ಭ್ರಮೆಗೊಂಡಿದ್ದಾರೆ. 55 ವರ್ಷದ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಲಾಕರ್ ಖಾಲಿಯಾಗಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ರಶ್ಮಿ ಅರೋರಾ 2003ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ (SBT) ಲಾಕರ್‌ನಲ್ಲಿ 50 ಲಕ್ಷ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಇಟ್ಟಿದ್ದರು. ಸುಮಾರು 23ವರ್ಷಗಳ ನಂತರ ಇದೀಗ ಅವರು ಲಾಕರ್ ತೆರೆದಾಗ, ಅದು ಖಾಲಿಯಾಗಿರುವುದು ಕಂಡುಬಂದಿದೆ.

2003ರ ಫೆಬ್ರವರಿ 26ರಂದು ರಶ್ಮಿ ಅರೋರಾ ಮತ್ತು ಅವರ ಪತಿ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ನಲ್ಲಿ ಉಳಿತಾಯ ಖಾತೆಯನ್ನು ತೆರೆದರು. ಅವರಿಗೆ ಲಾಕರ್ ಸಂಖ್ಯೆ 23 ಅನ್ನು ನೀಡಲಾಯಿತು. ಅವರು ತಮ್ಮ 50 ಲಕ್ಷ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಸಂಗ್ರಹಿಸಿಟ್ಟರು. ಅರೋರಾ ದಂಪತಿ ಆಗಾಗ ಬ್ಯಾಂಕಿಗೆ ಭೇಟಿ ನೀಡಿ ತಮ್ಮ ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸುತ್ತಿದ್ದರು. ಆದರೆ ರಶ್ಮಿ ಅರೋರಾ ಅವರ ಪತಿ ತೀರಿಕೊಂಡಾಗ, ಅವರು ಕಾನ್ಪುರದ ಸ್ವರೂಪ್ ನಗರದಿಂದ ಲಖನೌಗೆ ತಮ್ಮ ಮಗಳು ಮತ್ತು ಅಳಿಯನೊಂದಿಗೆ ವಾಸಿಸಲು ಸ್ಥಳಾಂತರಗೊಂಡರು. ತುಂಬಾ ದೂರದ ಕಾರಣ, ತಮ್ಮ ಆಸ್ತಿಗಳು ಸುರಕ್ಷಿತವಾಗಿರುತ್ತವೆ ಎಂದು ಆಶಿಸಿ ಅವರು ಬ್ಯಾಂಕ್‌ಗೆ ಭೇಟಿ ನೀಡುವುದನ್ನು ನಿಲ್ಲಿಸಿದರು.

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಿಂದ ಬ್ಯಾಂಕ್ ಲಾಕರ್‌ನಲ್ಲಿರುವ ಚಿನ್ನ, ಬೆಳ್ಳಿ ಪರಿಶೀಲನೆ

ನಾಲ್ಕು ತಿಂಗಳ ಹಿಂದೆ, ಅರೋರಾ ತನ್ನ ಕಿರಿಯ ಮಗಳೊಂದಿಗೆ ಬ್ಯಾಂಕಿಗೆ ಭೇಟಿ ನೀಡಿದಾಗ, ಎಸ್‌ಬಿಟಿ ಪ್ರತ್ಯೇಕ ಘಟಕವಾಗಿ ಅಸ್ತಿತ್ವದಲ್ಲಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿದೆ ಎಂದು ಅವರಿಗೆ ತಿಳಿಸಲಾಯಿತು. ಎಸ್‌ಬಿಐನಲ್ಲಿ ಅವರ ಹೆಸರಿನಲ್ಲಿ ಯಾವುದೇ ಲಾಕರ್ ಇಲ್ಲ ಎಂಬ ಆಘಾತಕಾರಿ ವಿಚಾರವೂ ಈ ವೇಳೆ ಬಹುರಂಗಗೊಂಡಿತು.

ದಿಗ್ಭ್ರಮೆಗೊಂಡ ರಶ್ಮಿ ಅರೋರಾ ಖಾತೆ ಮತ್ತು ಲಾಕರ್‌ ಸೇರಿ ಎಲ್ಲ ಸಂಬಂಧಿತ ದಾಖಲೆಗಳೊಂದಿಗೆ ಮತ್ತೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿದರು. ಶಾಖಾ ವ್ಯವಸ್ಥಾಪಕರು ಅವರ ಖಾತೆಯಿಂದ ಲಾಕರ್ ಬಾಡಿಗೆಯನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ಶೂನ್ಯ ಬ್ಯಾಲೆನ್ಸ್ ಉಂಟಾಗಿದೆ ಎಂದು ಹೇಳಿದರು.

ಜುಲೈ 21ರಂದು ಅರೋರಾ ತಮ್ಮ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಹಣವನ್ನು ವರ್ಗಾಯಿಸಿದರು. ಆದರೆ, ಅವರು ಲಾಕರ್ ಕೀಲಿಯನ್ನು ತರಲು ಮರೆತಿದ್ದರು. ಜುಲೈ 27ರಂದ, ಅವರು ಮತ್ತೆ ಬ್ಯಾಂಕಿಗೆ ಭೇಟಿ ನೀಡಿ ಲಾಕರ್‌ಗೆ ಪ್ರವೇಶ ಪಡೆದರು. ಈ ವೇಳೆ ಲಾಕರ್ ಸಂಖ್ಯೆ 23 ಖಾಲಿಯಾಗಿದ್ದನ್ನು ನೋಡಿ ಅವರು ಆಘಾತಗೊಂಡರು.

ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಆಭರಣಗಳನ್ನು ದುರುಪಯೋಗಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ರಶ್ಮಿ ಅರೋರಾ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಖಾ ವ್ಯವಸ್ಥಾಪಕ ಮತ್ತು ಸಂಬಂಧಪಟ್ಟ ಸಿಬ್ಬಂದಿ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

“ನಾವು ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಪಟ್ಟ ಬ್ಯಾಂಕ್ ಉದ್ಯೋಗಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ. ಸಿಸಿಟಿವಿ ದಾಖಲೆಗಳನ್ನು ಸಹ ಪರಿಶೀಲಿಸುತ್ತಿದ್ದೇವೆ” ಎಂದು ಕಾನ್ಪುರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅತುಲ್ ಶ್ರೀವಾಸ್ತವ ಹೇಳಿದ್ದಾರೆ. ಪೊಲೀಸರು ಲಾಕರ್ ದಾಖಲೆಗಳು, ಬ್ಯಾಂಕ್ ದಾಖಲೆಗಳು ಮತ್ತು ಉದ್ಯೋಗಿಗಳ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.