ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

AIIMS, IIT ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್: ಸುಲಭ ಶೈಕ್ಷಣಿಕ ಸಾಲಕ್ಕೆ ಕೇಂದ್ರದಿಂದ ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಏನಿದರ ವೈಶಿಷ್ಟ್ಯ? ಅರ್ಹತೆ ಏನು? ಯಾರೆಲ್ಲ ಅಪ್ಲೈ ಮಾಡಬಹುದು?

PM-Vidyalaxmi Scheme: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ. ಅರ್ಹ ವಿದ್ಯಾರ್ಥಿಗಳು ಏಕೀಕೃತ ಡಿಜಿಟಲ್ ಪೋರ್ಟಲ್ ಮೂಲಕ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಐಐಟಿ, ಏಮ್ಸ್, ಐಐಎಂ ಪ್ರವೇಶ ಪಡೆದವರಿಗೆ ಕೇಂದ್ರದಿಂದ ಗುಡ್ ನ್ಯೂಸ್

ಸಾಂದರ್ಭಿಕ ಚಿತ್ರ -

Profile
Sushmitha Jain Aug 25, 2026 8:02 AM

ನವದೆಹಲಿ, ಆ. 25: ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (Higher Education Institution) ಪ್ರವೇಶ ಪಡೆದರೂ ದುಬಾರಿ ಬೋಧನಾ ಶುಲ್ಕ ಭರಿಸಲಾಗದೆ ಕಂಗಾಲಾಗುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ನೆರವಾಗಲು ಕೇಂದ್ರ ಶಿಕ್ಷಣ ಸಚಿವಾಲಯ (Union Ministry of Education) ಪಿಎಂ-ವಿದ್ಯಾಲಕ್ಷ್ಮೀ (PM-Vidyalaxmi) ಯೋಜನೆಯನ್ನು ಜಾರಿಗೆ ತಂದಿದೆ. ಯಾವುದೇ ಆರ್ಥಿಕ ಅಡಚಣೆಯಿಲ್ಲದೆ ಅರ್ಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಆಕಾಂಕ್ಷೆಗಳನ್ನು ನಿರಾತಂಕವಾಗಿ ಈಡೇರಿಸಿಕೊಳ್ಳಲು ಈ ಯೋಜನೆ ಪ್ರಮುಖ ಆಸರೆ ಎನಿಸಿಕೊಂಡಿದೆ.

ವೈದ್ಯಕೀಯ ರಂಗದಲ್ಲಿ ಏಮ್ಸ್‌ನಂತಹ ಪ್ರಮುಖ ಸಂಸ್ಥೆಗಳು, ಐಐಟಿ, ಐಐಎಂ ಹಾಗೂ ಎಂಜಿನಿಯರಿಂಗ್ ಸೇರಿ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ದೇಶದ ಉನ್ನತ ಹಾಗೂ ಗೊತ್ತುಪಡಿಸಿದ ಶಿಕ್ಷಣ ಸಂಸ್ಥೆಗಳಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ವಿದ್ಯಾರ್ಥಿಗಳು ಸುಲಭವಾಗಿ ಶೈಕ್ಷಣಿಕ ಸಾಲ ಪಡೆಯಲು ಈ ಏಕೀಕೃತ ಪೋರ್ಟಲ್ ಅನುವು ಮಾಡಿಕೊಡುತ್ತದೆ.

ನೀಟ್ ಪ್ರತಿಭಟನೆ: ಮಹಿಳಾ ದೌರ್ಜನ್ಯ ದೂರುಗಳಿಗೆ ಆದ್ಯತೆ, ಮಧ್ಯಂತರ ವರದಿ ಸಲ್ಲಿಸಲು ಸಮಿತಿಗೆ ಸುಪ್ರೀಂ ಕೋರ್ಟ್‌ ಸೂಚನೆ

ಮೊರಟೋರಿಯಂ ಹಾಗೂ ಮರುಪಾವತಿಯ ವಿಶೇಷ ಸೌಲಭ್ಯ

ಸಾಮಾನ್ಯವಾಗಿ ಬ್ಯಾಂಕ್ ಸಾಲ ಪಡೆದ ತಕ್ಷಣವೇ ಮಾಸಿಕ ಕಂತುಗಳನ್ನು (ಇಎಂಐ) ಪಾವತಿಸುವ ಆತಂಕ ಪೋಷಕರನ್ನು ಕಾಡುತ್ತದೆ. ಆದರೆ, ಪಿಎಂ-ವಿದ್ಯಾಲಕ್ಷ್ಮೀ ಯೋಜನೆಯಡಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅವಧಿಯಲ್ಲಿ ಯಾವುದೇ ರೀತಿಯ ಸಾಲದ ಕಂತನ್ನು ಮರುಪಾವತಿ ಮಾಡಬೇಕಾಗಿಲ್ಲ. ಅಷ್ಟೇ ಅಲ್ಲದೆ, ಕೋರ್ಸ್ ಯಶಸ್ವಿಯಾಗಿ ಮುಗಿದ ನಂತರವೂ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಹುಡುಕಿಕೊಳ್ಳಲು ಹಾಗೂ ಆರ್ಥಿಕವಾಗಿ ನೆಲೆನಿಲ್ಲಲು ಹೆಚ್ಚುವರಿಯಾಗಿ ಒಂದು ವರ್ಷದ ಮೊರಟೋರಿಯಂ ಅವಧಿಯ ವಿನಾಯಿತಿ ದೊರೆಯಲಿದೆ. ಈ ಎಲ್ಲ ವಿನಾಯಿತಿ ಅವಧಿ ಮುಗಿದ ನಂತರವಷ್ಟೇ ಸುಲಭ ಕಂತುಗಳಲ್ಲಿ ಸಾಲ ಮರುಪಾವತಿ ಪ್ರಕ್ರಿಯೆ ಆರಂಭವಾಗುತ್ತದೆ.

ಈ ಯೋಜನೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಕಾಗದರಹಿತ, ಸರಳ ಹಾಗೂ ನೇರ ಡಿಜಿಟಲ್ ರೂಪದಲ್ಲಿ ಸಾಲದ ಸೌಲಭ್ಯ ಒದಗಿಸುತ್ತದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಹಣಕಾಸಿನ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವುದು ಸಂಪೂರ್ಣವಾಗಿ ತಪ್ಪುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಶುಲ್ಕದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ pmvidyalaxmi.co.inಗೆ ಭೇಟಿ ನೀಡಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ದೇಶದ ಯುವಜನತೆಯ ಉಜ್ವಲ ಭವಿಷ್ಯ ಹಾಗೂ ಶೈಕ್ಷಣಿಕ ಸಬಲೀಕರಣಕ್ಕಾಗಿ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳಿಗಾಗಿ ವಿದ್ಯಾಲಕ್ಷ್ಮೀ ಅಭಿಯಾನವನ್ನು ಮುನ್ನಡೆಸುತ್ತಿದೆ.

ಯಾರೆಲ್ಲ ಅಪ್ಲೈ ಮಾಡಬಹುದು?

  • ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (QHEIs) ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ಬೋಧನಾ ಶುಲ್ಕ ಮತ್ತು ಕೋರ್ಸ್ ಸಂಬಂಧಿತ ವೆಚ್ಚಗಳನ್ನು ಭರಿಸಲು ಶಿಕ್ಷಣ ಸಾಲಗಳನ್ನು ಪಡೆಯಲು ಅರ್ಹರು.
  • ಕುಟುಂಬದ ವಾರ್ಷಿಕ ಆದಾಯ ಎಷ್ಟೇ ಇದ್ದರೂ ವಿದ್ಯಾರ್ಥಿಗಳು ಈ ಯೋಜನೆಯಡಿ ಸಾಲ ಪಡೆಯಲು ಅರ್ಹರು (ಬಡ್ಡಿ ಸಬ್ಸಿಡಿಗೆ ಆದಾಯದ ಮಿತಿ ಇರುತ್ತದೆ).

ಯಾವೆಲ್ಲ ದಾಖಲೆ ಅಗತ್ಯ

ಈ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ನೀಡಬೇಕಾಗುತ್ತದೆ.

  • ಆಧಾರ್‌ ಕಾರ್ಡ್‌.
  • ಬ್ಯಾಂಕ್‌ ಅಕೌಂಟ್‌ ಮಾಹಿತಿ.
  • ಕಾಲೇಜ್‌ ದಾಖಲಾತಿಯ ವಿವರ.
  • ಗುರುತಿನ ಚೀಟಿ

ವೈಶಿಷ್ಟ್ಯ

  • ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗಕ್ಕಾಗಿ 10 ಲಕ್ಷ ರುಪಾಯಿವರೆಗೆ ಸಾಲ ಪಡೆಯಬಹುದು.
  • 7.5 ಲಕ್ಷ ರುಪಾಯಿವರೆಗಿನ ಸಾಲದ ಮೊತ್ತಕ್ಕೆ ಭಾರತ ಸರ್ಕಾರವೇ 75% ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ.
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರುಪಾಯಿ ಒಳಗಿರುವ ವಿದ್ಯಾರ್ಥಿಗಳಿಗೆ ಶೇಕಡಾ 3ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ.
  • ವಾರ್ಷಿಕ ಆದಾಯ 4.5 ಲಕ್ಷ ರುಪಾಯಿಗಿಂತ ಕಡಿಮೆ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಇರುವ ನಿಯಮಗಳಂತೆ ಪೂರ್ಣ ಬಡ್ಡಿ ಮನ್ನಾ ಸೌಲಭ್ಯ ಮುಂದುವರಿಯಲಿದೆ.
  • ಎಲ್ಲ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಅನುಸೂಚಿತ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ಈ ಸಾಲ ಲಭ್ಯ.