Goods Train Derails: ಹಳಿ ತಪ್ಪಿದ ಗೂಡ್ಸ್ ರೈಲು; ಜನವಸತಿ ಪ್ರದೇಶಕ್ಕೆ ನುಗ್ಗಿದ ಬೋಗಿಗಳು
ನಮ್ಮ ದೇಶದಲ್ಲಿ ರೈಲು ಹಳಿ ತಪ್ಪುವ ಘಟನೆಗಳು ಸಾಮಾನ್ಯ. ಕೆಲವೊಂದು ಪ್ರಕರಣಗಳಲ್ಲಿ ಅಪಾರ ಸಾವು ನೋವು ಉಂಟಾಗುತ್ತವೆ. ಆದರೆ ರೂರ್ಕೆಲಾದಲ್ಲಿ ನಡೆದ ರೈಲು ಹಳಿತಪ್ಪಿದ ಘಟನೆಯಲ್ಲಿ ನಡೆದಿದ್ದು ಮಾತ್ರ ವಿಚಿತ್ರ ವಿದ್ಯಮಾನ. ಅದೇನು ಎನ್ನುವ ವಿವರ ಇಲ್ಲಿದೆ.
ಭುವನೇಶ್ವರ: ಗೂಡ್ಸ್ ರೈಲೊಂದರ ಮೂರು ಬೋಗಿಗಳು ಹಳಿ ತಪ್ಪಿ ಸಮೀಪದಲ್ಲಿದ್ದ ಜನ ವಸತಿಯ ಕಾಲೊನಿಯೊಂದಕ್ಕೆ ನುಗ್ಗಿದ ಘಟನೆ ಫೆ. 5ರಂದು ಒಡಿಶಾದ (Odisha) ರೂರ್ಕೆಲಾದಲ್ಲಿ (Rourkela) ನಡೆದಿದೆ. ಈ ಘಟನೆಯಿಂದಾಗಿ ಈ ಭಾಗದ ನಿವಾಸಿಗಳು ಕ್ಷಣಕಾಲ ಆತಂಕಕ್ಕೊಳಗಾದರು. ಹಳಿತಪ್ಪಿದ ಈ ಗೂಡ್ಸ್ ರೈಲು ಇನ್ನು ಐದು ಮೀಟರ್ ಮುಂದೆ ಚಲಿಸಿದ್ದರೂ ಸಹ ಈ ಭಾಗದಲ್ಲಿ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಿಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ. ರೈಲು ಬೋಗಿಗಳನ್ನು ಸಂಚಾರಕ್ಕೆ ಜೋಡಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ಅಥವಾ ಪ್ರಾಣ ಹಾನಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ರೈಲು ನುಗ್ಗಿಬಂದ ಸ್ಥಳದಲ್ಲಿದ್ದ ಟೆಂಪೋ ಒಂದು ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದೆ. ಘಟನೆಯ ಬಳಿಕ ಈ ಗೂಡ್ಸ್ ರೈಲಿ ಚಾಲಕ ಘಟನಾ ಸ‍್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: Viral Video: ವಿನಾಯಕನಿಗೆ ಒಂದು ಲಕ್ಷ ಪೆನ್ನುಗಳ ಅರ್ಪಣೆ; ಏನಿದು ವಸಂತ ಪಂಚಮಿ?
#WATCH | Odisha: Many People narrowly escaped as three wagons of a goods train derailed near the Basanti Colony of Raurkela.
— Kalinga TV (@Kalingatv) February 5, 2025
No casualties have been reported so far. pic.twitter.com/gFTFsDJP2T
ಈ ಘಟನೆಯ ಬಳಿಕ ಗೇಟ್-ಬಸಂತಿ ಕಾಲೊನಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಹಳಿ ತಪ್ಪಿದ ಗೂಡ್ಸ್ ರೈಲಿನ ಮೂರು ಬೋಗಿಗಳು ರಸ್ತೆಗೆ ಬಿದ್ದಿದ್ದೇ ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದೆ.
ಘಟನೆ ನಡೆದ ತಕ್ಷಣ ರೈಲ್ವೇ ಸಿಬ್ಬಂದಿ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು.
ಇನ್ನೊಂದು ಮೂಲಗಳ ಪ್ರಕಾರ ಇಲ್ಲಿದ್ದ ಕಾಲೋನಿಗಳು ಅಕ್ರಮವಾಗಿ ನಿರ್ಮಿಸಲ್ಪಟ್ಟಿದ್ದಾಗಿದ್ದು, ಇವರನ್ನೆಲ್ಲ ಇಲ್ಲಿಂದ ಒಕ್ಕಲು ಎಬ್ಬಿಸಲೆಂದು ಈ ಅಪಘಾತದ ಘಟನೆಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ರೈಲು ಹಳಿ ತಪ್ಪಿದ ಘಟನೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.