ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ricin Terror Plot: ಉತ್ತರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳಿಂದ ದಾಳಿ; ಐಸಿಸ್ ಧ್ವಜ ಪತ್ತೆ

ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಉತ್ತರ ಪ್ರದೇಶದಲ್ಲಿ ದಾಳಿ ನಡೆಸಿದೆ. ಈ ವೇಳೆ ಐಸಿಸ್ ಸಂಬಂಧಿತ ಭಯೋತ್ಪಾದಕ ಚಟುವಟಿಕೆಯಲ್ಲಿ ಬಂಧಿತನಾಗಿರುವ ಮೊಹಮ್ಮದ್ ಸುಹೈಲ್ ಖಾನ್ ಮನೆ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳಿಂದ ಮಹತ್ವದ ದಾಖಲೆ ವಶ

ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಉತ್ತರ ಪ್ರದೇಶದಲ್ಲಿ ಪರಿಶೀಲನೆ ನಡೆಸಿತು. -

Ramesh B
Ramesh B Nov 17, 2025 12:44 PM

ಲಖನೌ, ನ. 17: ದೇಶಾದ್ಯಂತ ಉಗ್ರ ಜಾಲದ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದ್ದು, ವಿವಿಧ ಕಡೆ ದಾಳಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಉತ್ತರ ಪ್ರದೇಶ ಪೊಲೀಸರೊಂದಿಗೆ ಸೇರಿ ಲಖಿಂಪುರದಲ್ಲಿ ಶೋಧ ಕಾರ್ಯ ನಡೆಸಿದೆ (Ricin Terror Plot). ಐಸಿಸ್ ಸಂಬಂಧಿತ ಭಯೋತ್ಪಾದಕ ಚಟುವಟಿಕೆಯಲ್ಲಿ ಬಂಧಿತನಾಗಿರುವ ಮೊಹಮ್ಮದ್ ಸುಹೈಲ್ ಖಾನ್ (Mohammad Suhail Khan) ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಟಿಎಸ್ ಪ್ರಕಾರ ಶೋಧದ ಸಮಯದಲ್ಲಿ ಸುಹೈಲ್ ಖಾನ್ ನಿವಾಸದಿಂದ ಐಸಿಸ್ ಧ್ವಜ ಪತ್ತೆಯಾಗಿದೆ. ಸುಹೈಲ್ ಖಾನ್ ಮತ್ತು ಆತನ ಸಹಚರ ಆಜಾದ್ ಸುಲೇಮಾನ್ ಶೇಖ್ ಶಸ್ತ್ರಾಸ್ತ್ರಗಳು ಮತ್ತು ರಾಸಾಯನಿಕಗಳನ್ನು ಸಾಗಿಸುವ ಸಂಭಾವ್ಯ ಮಾರ್ಗಗಳನ್ನು ಪರಿಶೀಲಿಸಲು ಕಾಶ್ಮೀರಕ್ಕೆ ಪ್ರಯಾಣಿಸಿದ್ದರು ಎಂದು ದೃಢಪಡಿಸಲಾಗಿದೆ.

ಈಗಾಗಲೇ ಗುಜರಾತ್ ಎಟಿಎಸ್ ಆಜಾದ್ ಸುಲೇಮಾನ್ ಶೇಖ್, ಮೊಹಮ್ಮದ್ ಸುಹೈಲ್ ಮೊಹಮ್ಮದ್ ಸಲೀಮ್ ಮತ್ತು ಎಂಬಿಬಿಎಸ್ ವೈದ್ಯ ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಎಂಬ ಮೂವರನ್ನು ಬಂಧಿಸಿದೆ. ಈ ಮೂವರು ಕ್ಯಾಸ್ಟರ್ ಬೀನ್ ತ್ಯಾಜ್ಯದಿಂದ ಅತ್ಯಂತ ವಿಷಕಾರಿ ರಾಸಾಯನಿಕ ರಿಸಿನ್ ತಯಾರಿಸುವ ಭಯೋತ್ಪಾದಕ ಮಾಡ್ಯೂಲ್‌ನ ಭಾಗವಾಗಿದ್ದಾರೆ ಎಂದು ಎಟಿಎಸ್ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Ricin poison terror plot: ಈ ಕೆಮಿಕಲ್‌ ಸೇವಿಸಿದ್ರೆ ಕ್ಷಣಾರ್ಧದಲ್ಲೇ ಸಾವು... ಬಯೋ ವಾರ್‌ಗೆ ಉಗ್ರರ ಸಂಚು-ಏನಿದು ರಿಸಿನ್‌ ಪಾಯ್ಸನ್‌?

ಅಧಿಕಾರಿಗಳ ಪ್ರಕಾರ ಈ ಉಗ್ರರ ತಂಡವು ಡಾ. ಸಯ್ಯದ್ ನೇತೃತ್ವದಲ್ಲಿ ಉಪಕರಣಗಳನ್ನು, ಹರಳೆಣ್ಣೆಯನ್ನು ಸಂಗ್ರಹಿಸಿ ರಿಸಿನ್ ತಯಾರಿಸುವ ಆರಂಭಿಕ ಹಂತದ ಸಂಸ್ಕರಣೆಯನ್ನು ಪ್ರಾರಂಭಿಸಿತ್ತು. ಅಲ್ಲದೆ ಈ ಗುಂಪು ಲಖನೌನಲ್ಲಿರುವ ಆರ್‌ಎಸ್‌ಎಸ್ ಕಚೇರಿ, ದೆಹಲಿಯ ಆಜಾದ್‌ಪುರ ಮಂಡಿ ಮತ್ತು ಅಹಮದಾಬಾದ್‌ನ ಹಲವು ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪರೀಶೀಲನೆ ನಡೆಸಿತ್ತು.

ಡಾ. ಸಯ್ಯದ್ ಬಳಿಯಿಂದ ಅಧಿಕಾರಿಗಳು 2 ಗ್ಲಾಕ್ ಪಿಸ್ತೂಲ್‌, 1 ಬೆರೆಟ್ಟಾ, 30 ಜೀವಂತ ಗುಂಡುಗಳು ಮತ್ತು 4 ಲೀಟರ್ ಕ್ಯಾಸ್ಟರ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಈ ಗುಂಪು ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪಿನೊಂದಿಗೆ ಯಾವ ರೀತಿ ಸಂಪರ್ಕ ಸಾಧಿಸಿದೆ ಎನ್ನುವುದನ್ನು ಕಂಡುಕೊಳ್ಳಲು ಪರಿಶೀಲನೆ ಮುಂದುವರಿದಿದೆ.

ಏನಿದು ರಿಸಿನ್ ವಿಷ?

ರಿಸಿನ್ ಒಂದು ಜೈವಿಕ ವಿಷವಾಗಿದ್ದು, ಇದನ್ನು ಕ್ಯಾಸ್ಟರ್ ಬೀನ್ಸ್ (ಹರಳೆಣ್ಣೆ ಬೀಜ) ಸಂಸ್ಕರಿಸಿದ ನಂತರ ಉಳಿದಿರುವ ತ್ಯಾಜ್ಯ ವಸ್ತುಗಳಿಂದ ಉತ್ಪಾದಿಸಲಾಗುತ್ತದೆ. ಇದು ಅಪಾಯಕಾರಿ ವಿಷವಾಗಿದ್ದು, ಗಂಭೀರ ಅನಾರೋಗ್ಯ ಸಮಸ್ಯೆ ಅಥವಾ ಸಾವಿಗೆ ಕಾರಣವಾಗಬಹುದು. ಈ ರಿಸಿನ್‌ ವಿಷವನ್ನು ಸಣ್ಣ ಪ್ರಮಾಣದಲ್ಲೂ ಉಸಿರಾಡಿದರೆ, ಸೇವಿಸಿದರೆ ಅಥವಾ ಯಾವುದೇ ರೀತಿಯಲ್ಲಾದರೂ ದೇಹಕ್ಕೆ ಸೇರಿದರೆ ಹೆಚ್ಚು ವಿಷಕಾರಿಯಾಗಿರುತ್ತದೆ. ಈ ವಿಷ ಪದಾರ್ಥ ದೇಹಕ್ಕೆ ಸೇರಿದರೆ ತೀವ್ರ ಅಂಗಾಂಗಗಳು ವೈಫಲ್ಯಗೊಂಡು ಮನುಷ್ಯರು ಸಾವನ್ನಪ್ಪುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ವೈದ್ಯಲೋಕದಲ್ಲಿ ಯಾವುದೇ ಔಷಧ ಇಲ್ಲ. ಹಾಗಾಗಿ ಈ ರಾಸಾಯನಿಕ ವಸ್ತು ಬಳಕೆ ಮತ್ತ ತಯಾರಿಕೆ ಕಾನೂನಾತ್ಮಕವಾಗಿ ಅಪರಾಧವಾಗಿದೆ.