ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokesh Kayarga Column: ಮಿನಿ ಅರಣ್ಯ: ಕಾಂಕ್ರಿಟ್ ಕಾನನಕ್ಕೆ ಹಸಿರು ಮುಲಾಮು

1973ರಲ್ಲಿ ಬೃಹತ್ ಬೆಂಗಳೂರು ನಗರದ ಒಟ್ಟು ಭೂಪ್ರದೇಶದ ಶೇ. 68.27ರಷ್ಟು ಭಾಗವು ದಟ್ಟವಾದ ಹಸಿರು ಹೊದಿಕೆಯಿಂದ ಆವೃತವಾಗಿತ್ತು. ಕಾಂಕ್ರೀಟ್ ಕಟ್ಟಡಗಳು ಮತ್ತು ರಸ್ತೆಗಳ ಪ್ರಮಾಣ ಕೇವಲ ಶೇ. 7.97ರಷ್ಟಿತ್ತು. ಆದರೆ ಕಳೆದ ಐದು ದಶಕಗಳಲ್ಲಿ ನಗರದ ಕಾಂಕ್ರೀಟ್ ಪ್ರದೇಶವು ನಗರದ ಶೇ. 86 ರಿಂದ 93ರಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಬೆಂಗಳೂರಿನ ಹೃದಯಭಾಗದಲ್ಲಿ ಕೇವಲ ಶೇ.3ರಷ್ಟು ಪ್ರದೇಶದಲ್ಲಿ ಮಾತ್ರ ದಟ್ಟ ಹಸಿರು ಉಳಿದುಕೊಂಡಿದೆ.

ಮಿನಿ ಅರಣ್ಯ: ಕಾಂಕ್ರಿಟ್ ಕಾನನಕ್ಕೆ ಹಸಿರು ಮುಲಾಮು

-

ಲೋಕಮತ

ಉದ್ಯಾನ ನಗರಿ, ಕೆರೆಗಳ ನಾಡು, ಹವಾನಿಯಂತ್ರಿತ ನಗರ, ನಿವೃತ್ತರ ಸ್ವರ್ಗ-ಇವು ದಶಕಗಳ ಹಿಂದೆ ಬೆಂಗಳೂರಿಗಿದ್ದ ಹೆಮ್ಮೆಯ ವಿಶೇಷಣಗಳು. ನಾಡಪ್ರಭು ಕೆಂಪೇಗೌಡರು ಈ ನಗರವನ್ನು ಕಟ್ಟುವಾ ಗಲೇ ಹತ್ತಾರು ಕೆರೆಗಳನ್ನು ನಿರ್ಮಿಸಿದ್ದರು. ನಂತರ ಹೈದರಾಲಿ, ಟಿಪ್ಪು ಸುಲ್ತಾನ್ ಕಾಲದಲ್ಲಿ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಚಾಲನೆ ದೊರೆತರೆ ಮುಂದೆ ಬ್ರಿಟಿಷರು ಮತ್ತು ಮೈಸೂರು ಮಹಾರಾಜರ ಕಾಲದಲ್ಲಿ ಬೆಂಗಳೂರಿನ ಹಸಿರು ಹೊದಿಕೆಯನ್ನು ಮತ್ತಷ್ಟು ವಿಸ್ತರಿಸಲಾಯಿತು.

ಮೇಜರ್ ಜನರಲ್ ರಿಚರ್ಡ್ ಸ್ಯಾಂಕಿ ಇಂದಿನ ವಿಧಾನಸೌಧ, ಹೈಕೋರ್ಟ್ ಇರುವ ಜಾಗ ಒಳಗೊಂಡಂತೆ 400 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಕಬ್ಬನ್ ಪಾರ್ಕ್ ನಿರ್ಮಿಸಿ ಉದ್ಯಾನ ನಗರ ಹೆಸರು ಬರಲು ಕಾರಣನಾದ. ದಿವಾನರಾದ ಸರ್. ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದವರ ಕಾಲದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಳು ಮತ್ತಷ್ಟು ಹೊಸ ಗಿಡ, ಮರ ಗಳೊಂದಿಗೆ ನಳನಳಿಸಿದವು. ಆದರೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ನಡೆದ ಐಟಿ ಕ್ರಾಂತಿಯ ಹೆಸರಿನಲ್ಲಿ ದಿಢೀರನೆ ದೈತ್ಯಾಕಾರದಲ್ಲಿ ಬೆಳೆದ ಬೆಂಗಳೂರು ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡು ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ.

ಗಗನಚುಂಬಿ ಕಟ್ಟಡಗಳು, ವಿಸ್ತಾರಗೊಳ್ಳುತ್ತಿರುವ ರಸ್ತೆಗಳು, ಮೆಟ್ರೋ ಮಾರ್ಗಗಳು ಮತ್ತು ಸಾವಿರಾರು ಬಡಾವಣೆಗಳ ನಿರ್ಮಾಣಕ್ಕಾಗಿ ಲಕ್ಷಾಂತರ ಮರಗಳು ಧರೆಗುರುಳಿವೆ. ಪರಿಣಾಮ, ಎ.ಸಿ ಸಿಟಿಯ ತಾಪಮಾನ ಬೇಸಿಗೆಯಲ್ಲಿ 38 ಡಿಗ್ರಿ ಸೆಲ್ಸಿಯಸ್ ದಾಟಿ ಮುನ್ನುಗ್ಗುತ್ತಿದೆ. ಕೇವಲ ಅರ್ಧ ಗಂಟೆ ನಿರಂತರವಾಗಿ ಮಳೆ ಸುರಿದರೂ ಇಲ್ಲಿನ ಮುಖ್ಯರಸ್ತೆಗಳು ನದಿಗಳಾಗುತ್ತವೆ. ನಗರದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಪಾತಾಳ ಕಾಣುತ್ತಿದೆ. ಇಂತಹ ಸಂಕಷ್ಟದ ಕಾಲಘಟ್ಟ ದಲ್ಲಿ, ಕರ್ನಾಟಕ ಅರಣ್ಯ ಇಲಾಖೆಯು ಬೆಂಗಳೂರು ನಗರದ ಸುತ್ತಮುತ್ತ 10 ಆಯ್ದ ಸ್ಥಳಗಳಲ್ಲಿ 3,271 ಎಕರೆ ಪ್ರದೇಶದಲ್ಲಿ 223 ಕೋಟಿ ರೂಪಾಯಿ ವೆಚ್ಚದಲ್ಲಿ ‘ಮಿನಿ ಅರಣ್ಯಗಳ ಜಾಲ’ ನಿರ್ಮಿಸಲು ಮುಂದಾಗಿರುವುದು ಅತ್ಯಂತ ವಿವೇಚನೆಯ ಮತ್ತು ಸ್ವಾಗತಾರ್ಹ ನಡೆಯಾಗಿದೆ.

ಇದನ್ನೂ ಓದಿ: Lokesh Kayarga Column: ಆನೆಗಳ ಸ್ಥಳಾಂತರ: ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ !

ಮಿನಿ ಅರಣ್ಯದ ಹೊಸ ದೃಷ್ಟಿಕೋನ

ಅರಣ್ಯ ಇಲಾಖೆಯ ಈ ನೂತನ ಪ್ರಸ್ತಾವನೆಯು ಕೇವಲ ಹುಲ್ಲುಹಾಸು ಮತ್ತು ಅಲಂಕಾರಿಕ ಗಿಡಗಳನ್ನು ನೆಡುವ ಸಾಂಪ್ರದಾಯಿಕ ಉದ್ಯಾನವನ ಯೋಜನೆಯತಿಲ್ಲ ಎನ್ನುವುದೇ ವಿಶೇಷ. ಎಲ್ಲವೂ ಅಂದುಕೊಂಡಂತೆ ನಡೆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಬರುವ ತುರಹಳ್ಳಿ ಮೀಸಲು ಅರಣ್ಯ ವುಡ್‌ಲ್ಯಾಂಡ್ (514 ಎಕರೆ), ತುರಹಳ್ಳಿ ಸಣ್ಣ ಅರಣ್ಯ ಆರ್ಬೊರೇಟಂ (597 ಎಕರೆ), ಕಾಳಕೆರೆ ಅರಣ್ಯ ಪರಿಸರ ವ್ಯವಸ್ಥೆ ಕೇಂದ್ರ (143 ಎಕರೆ), ದೊರೆಸಾನಿ ಪಾಳ್ಯ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ (136 ಎಕರೆ) ಹಾಗೂ ಪಣತ್ತೂರು ನಗರವನ ಜೀವವೈವಿಧ್ಯ ಉದ್ಯಾನ (106 ಎಕರೆ) ನಗರದ ಒಳಭಾಗದ ಹಸಿರು ಕವಚವನ್ನು ಬಲಪಡಿಸಲಿವೆ.

ಅದೇ ರೀತಿ, ಜಿಬಿಎ ವ್ಯಾಪ್ತಿಯ ಹೊರಗಿರುವ ಮಾರಸಂದ್ರ ಜೀವವೈವಿಧ್ಯ ಉದ್ಯಾನ (855 ಎಕರೆ), ಮಂಡೂರು ಬಿದಿರು ಉದ್ಯಾನ (123 ಎಕರೆ), ಜಾರಕಬಂಡೆ ನಗರವನ ಬಿ ಬ್ಲಾಕ್ (272 ಎಕರೆ), ಜಾರಕಬಂಡೆ ವೃಕ್ಷ ಸಂವರ್ಧನಾ ಕೇಂದ್ರ ಎ ಬ್ಲಾಕ್ (371 ಎಕರೆ) ಹಾಗೂ ಯಲಹಂಕ ಸಮೀಪದ ಮಾದಪ್ಪನಹಳ್ಳಿಯಲ್ಲಿ 50.29 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿರುವ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ (154 ಎಕರೆ) ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಹಸಿರು ಬೇಲಿಯಂತೆ ಕಾರ್ಯನಿರ್ವಹಿಸಲಿವೆ.

ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ದಶಕಗಳಿಂದ ಮಾಡುತ್ತಾ ಬಂದ ಪರಿಸರ ಪ್ರಮಾದವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎನ್ನುವುದು ಖುಷಿ ಕೊಡುವ ವಿಚಾರ. 1960 ಮತ್ತು 70ರ ದಶಕದಲ್ಲಿ ಅರಣ್ಯೀಕರಣದ ಹೆಸರಿನಲ್ಲಿ ರಾಜ್ಯಾದ್ಯಂತ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ನೆಡಲಾಗಿತ್ತು. ಇವು ಅಂತರ್ಜಲವನ್ನು ವಿಪರೀತವಾಗಿ ಹೀರಿಕೊಂಡಿದ್ದಲ್ಲದೆ, ಸ್ಥಳೀಯ ಸಸ್ಯ ಪ್ರಭೇದ ಬೆಳೆಯದಂತೆ ಮಾಡಿದ್ದವು. ಇವುಗಳ ಕೆಳಗೆ ಬೆಳೆದ ಪಾರ್ಥೇನಿಯಂ, ಕಾಂಗ್ರೆಸ್ ಗಿಡ, ಲಂಟಾನಾದಂತಹ ಆಕ್ರಮಣಕಾರಿ ಕಳೆ ಸಸ್ಯಗಳು ಸ್ಥಳೀಯ ಜೀವವೈವಿಧ್ಯವನ್ನು ನಾಶಪಡಿಸಿದ್ದವು. ಈಗ ಹಂತ ಹಂತವಾಗಿ ಈ ವಿದೇಶಿ ಸಸ್ಯ ಪ್ರಭೇದಗಳು ಮತ್ತು ಕಳೆಗಳನ್ನು ತೆರವುಗೊಳಿಸಿ, ಇಲ್ಲಿನ ಮಣ್ಣಿನ ಫಲವತ್ತತೆಗೆ ಪೂರಕವಾದ ಸ್ಥಳೀಯ ಮರಗಳು, ಔಷಧೀಯ ಸಸ್ಯಗಳು, ಕಾಡು ಹಣ್ಣಿನ ಗಿಡಗಳು ಮತ್ತು ಹುಲ್ಲುಗಾವಲುಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ.

71foest 2511

ಅಂದು-ಇಂದಿನ ಕರಾಳ ತುಲನೆ

ಬೆಂಗಳೂರಿಗೆ ಇಂತಹ ಕಿರು ಅರಣ್ಯಗಳ ಅನಿವಾರ್ಯತೆ ಏಕಿದೆ ಎಂಬುದನ್ನು ಅರ್ಥಮಾಡಿ ಕೊಳ್ಳಲು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ವಿಜ್ಞಾನ ಕೇಂದ್ರದ ಪ್ರೊ. ಟಿ.ವಿ. ರಾಮಚಂದ್ರ ಅವರ ನೇತೃತ್ವದ ಸಂಶೋಧನಾ ತಂಡವು ಉಪಗ್ರಹ ಚಿತ್ರಗಳ ಆಧಾರದ ಮೇಲೆ ನಡೆಸಿದ ಅಧ್ಯಯನ ವರದಿಗಳನ್ನು ಗಮನಿಸಬೇಕು. 1973ರಲ್ಲಿ ಬೃಹತ್ ಬೆಂಗಳೂರು ನಗರದ ಒಟ್ಟು ಭೂಪ್ರದೇಶದ ಶೇ. 68.27ರಷ್ಟು ಭಾಗವು ದಟ್ಟವಾದ ಹಸಿರು ಹೊದಿಕೆಯಿಂದ ಆವೃತವಾಗಿತ್ತು.

ಕಾಂಕ್ರೀಟ್ ಕಟ್ಟಡಗಳು ಮತ್ತು ರಸ್ತೆಗಳ ಪ್ರಮಾಣ ಕೇವಲ ಶೇ. 7.97ರಷ್ಟಿತ್ತು. ಆದರೆ ಕಳೆದ ಐದು ದಶಕಗಳಲ್ಲಿ ನಗರದ ಕಾಂಕ್ರೀಟ್ ಪ್ರದೇಶವು ನಗರದ ಶೇ. 86 ರಿಂದ 93ರಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಇದೇ ಅವಧಿಯಲ್ಲಿ ನಗರದ ಹಸಿರು ಹೊದಿಕೆಯ ಪ್ರಮಾಣ ಶೇ. 88ರಷ್ಟು ಕುಸಿದಿದೆ. ಇಂದು ಬೆಂಗಳೂರಿನ ಹೃದಯಭಾಗದಲ್ಲಿ ಕೇವಲ ಶೇ.3ರಷ್ಟು ಪ್ರದೇಶದಲ್ಲಿ ಮಾತ್ರ ದಟ್ಟ ಹಸಿರು ಉಳಿದುಕೊಂಡಿದೆ.

ಇದೇ ವೇಗದಲ್ಲಿ ಮರಗಳ ಮಾರಣಹೋಮ ಮುಂದುವರಿದರೆ 2038ರ ವೇಳೆಗೆ ಬೆಂಗಳೂರಿನ ಹಸಿರು ಪ್ರಮಾಣ ಶೇ. 0.65ಕ್ಕೆ ಕುಸಿಯಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 50 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರತಿ ಒಬ್ಬ ವ್ಯಕ್ತಿಗೆ ಸರಾಸರಿ ಏಳೆಂಟು ಮರಗಳಿದ್ದವು. ಆದರೆ ಇಂದು ನೂರು ಜನರಿಗೆ ಕೇವಲ 17 ಮರಗಳಿವೆ. ಅಂದರೆ ಸುಮಾರು ಏಳು ಜನರಿಗೆ ಒಂದೇ ಒಂದು ಮರ ಎಂಬ ದುಸ್ಥಿತಿಗೆ ನಾವು ತಲುಪಿದ್ದೇವೆ. ತಜ್ಞರ ಪ್ರಕಾರ ಒಬ್ಬ ಮನುಷ್ಯ ಉಸಿರಾಡುವ ಆಮ್ಲಜನಕದ ಸಮತೋಲನಕ್ಕೆ ಕನಿಷ್ಠ ಏಳೆಂಟು ಮರಗಳ ಅಗತ್ಯವಿದೆ. ಅಂದರೆ ಇದೇ ಗತಿಯಲ್ಲಿ ಮುಂದು ವರಿದರೆ ಬೆಂಗಳೂರು ನಗರವೂ ಬಹು ಬೇಗನೇ ಮತ್ತೊಂದು ದೆಹಲಿಯಾಗಲಿದೆ.

ಹಸಿರಿನಂತೆಯೇ ಬೆಂಗಳೂರಿನ ಜೀವನಾಡಿಯಾಗಿದ್ದ ಕೆರೆಗಳ ಕಥೆಯೂ ಅಷ್ಟೇ ದಾರುಣವಾಗಿದೆ. 50-60 ವರ್ಷಗಳ ಹಿಂದೆ ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 262ಕ್ಕೂ ಹೆಚ್ಚು ಜೀವಂತ ಕೆರೆಗಳಿದ್ದವು. ಹಳೆಯ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಕೆರೆಗಳಿದ್ದವು. ಆದರೆ, ಭೂಗಳ್ಳರ ಒತ್ತುವರಿ, ಅವೈಜ್ಞಾನಿಕ ಬಡಾವಣೆಗಳ ನಿರ್ಮಾಣ ಮತ್ತು ಸರಕಾರಿ ಕಟ್ಟಡಗಳಿಗಾಗಿ ಜಲಮೂಲಗಳನ್ನು ಮುಚ್ಚಿದ ಪರಿಣಾಮವಾಗಿ ಸುಮಾರು ಶೇ.74 ರಿಂದ 79ರಷ್ಟು ಕೆರೆಗಳು ಕಣ್ಮರೆಯಾಗಿವೆ.

ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದ ಧರ್ಮಾಂಬುಧಿ ಕೆರೆ ಇಂದು ಮೆಜೆಸ್ಟಿಕ್ ಬಸ್ ನಿಲ್ದಾಣ ವಾಗಿದೆ. ಸಂಪಂಗಿ ಕೆರೆ ಕಂಠೀರವ ಕ್ರೀಡಾಂಗಣವಾಗಿದೆ. ಚಲ್ಲಘಟ್ಟ ಕೆರೆ ಗಾಲ್ಫ್ ಮೈದಾನ ಮತ್ತು ಬಡಾವಣೆಯಾಗಿದೆ. ಕೋರಮಂಗಲ, ಶೂಲೆ, ಅಕ್ಕಿತಿಮ್ಮನಹಳ್ಳಿ ಕೆರೆಗಳು ಬೃಹತ್ ಕಟ್ಟಡಗಳ ಅಡಿ ಹೂತುಹೋಗಿವೆ. ಉಳಿದಿರುವ ಸುಮಾರು 80 ರಿಂದ 100 ಕೆರೆಗಳಲ್ಲಿ ಬಹುತೇಕ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ. ಬಹುತೇಕ ಕೆರೆಗಳಿಗೆ ರಾಜಕಾಲುವೆ ಸಂಪರ್ಕ ಕಡಿತಗೊಂಡಿದೆ. ಈ ಕಾರಣದಿಂದಲೇ ಸ್ವಲ್ಪ ಮಳೆ ಬಂದರೂ ರಸ್ತೆಗಳು ಕೆರೆಗಳಂತಾಗುತ್ತವೆ. ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ.

1993ರಲ್ಲಿ ನಾನು ಮೊದಲ ಬಾರಿ ಈ ನಗರಕ್ಕೆ ಕಾಲಿಟ್ಟಾಗ ಸ್ನೇಹಿತರ ಜತೆ ಕೆ.ಆರ್.ಪುರಂನ ಸ್ಪಟಿಕ ಶುಭ್ರವಾಗಿದ್ದ ಕೆರೆಯ ನೀರಿನಲ್ಲಿ ಈಜಾಡಿದ್ದು ನೆನಪಿದೆ. ಈಗ ಈ ಕೆರೆ ಕೊಳಚೆ ಗುಂಡಿಯಾಗಿದೆ. 2000ನೇ ಇಸವಿಯ ಆಸುಪಾಸಿನಲ್ಲಿ ಕೆಂಗೇರಿ ಶಿರ್ಕೆ ಅಪಾರ್ಟ್‌ಮೆಂಟ್ ಸಮೀಪವಿದ್ದ ಬೃಹತ್ ಕೆರೆಯ ದಂಡೆ ಮೇಲೆ, ಉಳ್ಳಾಲ ಉಪನಗರ, ಪಟ್ಟಣಗೆರೆ ಭಾಗದಲ್ಲಿ ದ್ರಾಕ್ಷಿ ತೋಟಗಳ ಸುತ್ತ ಬೈಕ್ ಓಡಿಸಿದ ನೆನಪು ಇನ್ನೂ ಹಸಿರಾಗಿದೆ. ಕೇವಲ 25-30 ವರ್ಷಗಳಲ್ಲಿ ನಾವು ಕಣ್ಣಾರೆ ಕಂಡ ಬೆಂಗಳೂರಿನ ವಿಧ್ವಂಸಕ ಬೆಳವಣಿಗೆಯು ಈ ನಗರದ ಪ್ರಾಕೃತಿಕ ಇತಿಹಾಸವನ್ನೇ ಬದಲಾಯಿಸಿದೆ.

‘ಮಿನಿ ಅರಣ್ಯ’ಗಳ ಯಶಸ್ವಿ ಪ್ರಯೋಗ

ನಗರಗಳ ಮಧ್ಯೆ ಸಣ್ಣ ಸ್ಥಳಗಳಲ್ಲಿ ದಟ್ಟವಾದ ಅರಣ್ಯಗಳನ್ನು ಬೆಳೆಸುವ ‘ಮಿನಿ ಅರಣ್ಯ’ (Micro Forest / Pocket Forest) ಪರಿಕಲ್ಪನೆ ಜಗತ್ತಿನಾದ್ಯಂತ ಈಗ ಜನಪ್ರಿಯವಾಗುತ್ತಿದೆ. ಜಪಾನ್‌ನ ಖ್ಯಾತ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ (Akira Miyawaki) ಅವರು ರೂಪಿಸಿದ ‘ಮಿಯಾವಾಕಿ ಪದ್ಧತಿ’ ಯು ಇಂದು ಜಾಗತಿಕ ಮಾದರಿಯಾಗಿದೆ. ಜಪಾನ್‌ನ ಟೋಕಿಯೊ, ಯೊಕೊಹಾಮಾ ನಗರಗಳಲ್ಲಿ ಕೈಗಾರಿಕಾ ಪ್ರದೇಶಗಳ ಸುತ್ತಮುತ್ತ ಈ ಪದ್ಧತಿಯಲ್ಲಿ ಬೆಳೆಸಿದ ಮಿನಿ ಅರಣ್ಯಗಳು ಕೇವಲ 10-15 ವರ್ಷಗಳಲ್ಲಿ ನೈಸರ್ಗಿಕ ಕಾಡುಗಳಂತೆ ಬೆಳೆದು ನಿಂತಿವೆ.

ಅಂತೆಯೇ, ನೆದರ್ಲೆಂಡ್ಸ್‌ನ ‘ಟೈನಿ ಫಾರೆಸ್ಟ್‌ ’ ಅಭಿಯಾನ, ಬೆಲ್ಜಿಯಂನ ಮೆಚೆಲೆನ್ ನಗರದ ಕಾರ್ ಪಾರ್ಕಿಂಗ್ ಜಾಗವನ್ನು ದಟ್ಟ ಅರಣ್ಯವನ್ನಾಗಿಸಿದ ಪ್ರಯೋಗ ಮತ್ತು ಸಿಂಗಾಪುರದ ‘ಸಿಟಿ ಇನ್ ಎ ಗಾರ್ಡನ್’ ಪರಿಕಲ್ಪನೆಗಳು ನಗರೀಕರಣದ ನಡುವೆಯೂ ಹಸಿರನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನಗಳಾಗಿವೆ.

ಇದೀಗ ಕೇಂದ್ರ ಸರ್ಕಾರದ ‘ನಗರ ವನ ಯೋಜನೆ’ಯಡಿ ದೇಶಾದ್ಯಂತ ನೂರಾರು ನಗರ ಅರಣ್ಯ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂಬೈನ ಆರೆ ಕಾಲೋನಿ ಮತ್ತು ಬಿಕೆಸಿ ವ್ಯಾಪಾರ ಕೇಂದ್ರದ ಬಳಿ, ಚೆನ್ನೈನ ಅಡ್ಯಾರ್ ಪರಿಸರ ಉದ್ಯಾನದಲ್ಲಿ, ಹೈದರಾಬಾದ್‌ನ ಕಂಡ್ಲಕೋಯಾ ಆಕ್ಸಿಜನ್ ಪಾರ್ಕ್‌ನಲ್ಲಿ ಹಾಗೂ ತಮಿಳುನಾಡಿನ ಕೊಯಮತ್ತೂರು ಮಹಾನಗರ ಪಾಲಿಕೆಯ 100 ವಾರ್ಡ್‌ಗಳಲ್ಲಿ ಮಿಯಾವಾಕಿ ಮಾದರಿಯ ಮಿನಿ ಅರಣ್ಯಗಳನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ.

‘ಭಾರತ ವನ’ ಮಾದರಿ

ಕರ್ನಾಟಕದಲ್ಲೂ ಇತ್ತೀಚಿನ ವರ್ಷಗಳಲ್ಲಿ ಸರಕಾರ, ಮಠ-ಮಾನ್ಯರು ಮತ್ತು ಸ್ವಯಂ ಸೇವಾ ಸಂಘಟನೆಗಳ ವತಿಯಿಂದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಇಂತಹ ಹತ್ತಾರು ಯೋಜನೆ ಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಯಾವುದೂ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ ಎನ್ನುವುದು ಕೂಡ ಕಟು ಸತ್ಯ. ರಾಜ್ಯ ಸರಕಾರವು ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸಿದ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ಗಳು ಇಂದು ಬಿಕೋ ಎನ್ನುತ್ತಿವೆ. ಇದೇ ವೇಳೆ ಆದಿಚುಂಚನಗಿರಿ ಮಠ ಸೇರಿದಂತೆ ಕೆಲವು ಮಠಗಳ ಪ್ರಯತ್ನದಿಂದ ಆರಂಭ ವಾದ ಗಿಡ ನೆಡುವ ಕಾರ‌್ಯಕ್ರಮಗಳು ಯಶಸ್ವಿಯಾಗಿವೆ.

ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ ಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಾಲನೆ ನೀಡಿದ ‘ಭಾರತ ವನ’ ಯೋಜನೆ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ. ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆಯ ಕೆ.ಸಿ. ಬಡಾವಣೆ ಉದ್ಯಾನವನದ 4.5 ಎಕರೆ ಪ್ರದೇಶದಲ್ಲಿ 45 ಸಾವಿರ ಸ್ಥಳೀಯ ಪ್ರಭೇದದ ಗಿಡಗಳನ್ನು ನೆಟ್ಟು ದಟ್ಟವಾದ ಜೈವಿಕ ಅರಣ್ಯವನ್ನು ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿ ಸ್ಥಳೀಯ ಮರಗಳನ್ನೇ ನೆಡಲಾಗಿದೆ. ರಾಸಾಯನಿಕ ಗೊಬ್ಬರಗಳ ಬದಲಿಗೆ ಸಗಣಿ, ಕಾಂಪೋಸ್ಟ್‌ ಮತ್ತು ಜೀವಾಮೃತವನ್ನು ಬಳಸಿ ಮಣ್ಣಿನ ನೈಸರ್ಗಿಕ ಫಲವತ್ತತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, 500ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು, ತಾವು ನೆಟ್ಟ ಸಸಿಗಳನ್ನು ನಿಯಮಿತವಾಗಿ ಬಂದು ಪೋಷಿಸುವಂತೆ ಪ್ರೇರೇಪಿಸಿರುವುದು ಭವಿಷ್ಯದ ಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಬಿತ್ತುವ ಅತ್ಯುತ್ತಮ ವಿಧಾನವಾಗಿದೆ.

ಅನುದಾನ ಮತ್ತು ವಾಸ್ತವಿಕ ಲೆಕ್ಕಾಚಾರ

ಹಸಿರೀಕರಣ ಮತ್ತು ಕೆರೆಗಳ ಸಂರಕ್ಷಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರಕಾರವು ಕಳೆದ 10 ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಹಣವನ್ನು ವ್ಯಯಿಸಿದೆ. ಕಳೆದ ಒಂದು ದಶಕದ ಅಂಕಿ-ಅಂಶಗಳನ್ನು ಒಟ್ಟುಗೂಡಿಸಿದರೆ, ಬಿಬಿಎಂಪಿ, ಬಿಡಿಎ ಮತ್ತು ಅರಣ್ಯ ಇಲಾಖೆಗಳು ಸೇರಿ ಬೆಂಗಳೂರಿನ ಉದ್ಯಾನಗಳು, ರಸ್ತೆಬದಿ ಸಸಿ ನೆಡುವಿಕೆ ಮತ್ತು ಕೆರೆಗಳ ಅಭಿವೃದ್ಧಿಗೆ ಸುಮಾರು 2,500 ರಿಂದ 3,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿವೆ.

ಆದರೆ, ಇಷ್ಟೊಂದು ಬೃಹತ್ ಮೊತ್ತದ ಅನುದಾನ ಖರ್ಚಾದರೂ ಬೆಂಗಳೂರಿನ ಹಸಿರು ಹೊದಿಕೆ ಏಕೆ ಹೆಚ್ಚಾಗಲಿಲ್ಲ ಎಂಬ ಪ್ರಶ್ನೆ ಪ್ರತಿಯೊಬ್ಬ ತೆರಿಗೆದಾರನನ್ನೂ ಕಾಡುತ್ತದೆ. ‘ಗಿಡ ನೆಡುವು ದೊಂದೇ’ ಅಧಿಕಾರಿಗಳ ಗುರಿಯಾಗಿರುವುದು ಇದಕ್ಕೆ ಮುಖ್ಯ ಕಾರಣ. ರಸ್ತೆಬದಿಗಳಲ್ಲಿ ಅವೈಜ್ಞಾನಿಕ ವಾಗಿ ಸಣ್ಣ ಸಸಿಗಳನ್ನು ನೆಟ್ಟು ಅವುಗಳ ನಿರ್ವಹಣೆಯನ್ನು ಮರೆಯಲಾಗುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಕೋಟ್ಯಂತರ ರೂಪಾಯಿ ವ್ಯಯಿಸಿ ನೆಟ್ಟ ಸಸಿಗಳಲ್ಲಿ ಶೇ 5ರಷ್ಟು ಕೂಡ ಬದುಕುಳಿಯುತ್ತಿಲ್ಲ ಎಂಬುದು ಕಟು ವಾಸ್ತವ. 223 ಕೋಟಿ ರೂ. ವೆಚ್ಚದ 10 ಮಿನಿ ಅರಣ್ಯಗಳ ಯೋಜನೆಯು ಗುತ್ತಿಗೆದಾರರ ಜೇಬು ತುಂಬಿಸುವ ಕಾಮಗಾರಿಯಾಗದೆ, ಪಾರದರ್ಶಕವಾಗಿ ಮತ್ತು ವೈಜ್ಞಾನಿಕವಾಗಿ ಅನುಷ್ಠಾನ ಗೊಳ್ಳುವಂತೆ ನೋಡಿಕೊಳ್ಳುವುದು ಸರಕಾರದ ಆದ್ಯ ಕರ್ತವ್ಯವಾಗಿದೆ.

ನಾವು ನಮ್ಮ ಪೂರ್ವಜರಿಂದ ಬಳುವಳಿಯಾಗಿ ಪಡೆದ ಸುಂದರ ಉದ್ಯಾನ ನಗರವನ್ನು ಈಗಾಗಲೇ ಹಾಳುಗೆಡವಿದ್ದೇವೆ. ಕರ್ನಾಟಕ ಅರಣ್ಯ ಇಲಾಖೆಯು ಕೈಗೆತ್ತಿಕೊಂಡಿರುವ 10 ಮಿನಿ ಅರಣ್ಯಗಳ ಯೋಜನೆಯು ಕೇವಲ ಕಾಗದದ ಮೇಲಿನ ಪ್ರಸ್ತಾವನೆಯಾಗಿ ಉಳಿಯದೆ, ಸ್ಥಳೀಯ ಸಸ್ಯಸಂಕುಲ ದೊಂದಿಗೆ ನೈಜ ಅರಣ್ಯಗಳಾಗಿ ತಲೆ ಎತ್ತಲಿ. ಸರಕಾರದ ಇಚ್ಛಾಶಕ್ತಿ, ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವ ಮತ್ತು ನಾಗರಿಕರ ಪ್ರೀತಿಯ ಆರೈಕೆ ಜೊತೆಯಾದರೆ, ಬೆಂಗಳೂರು ತನ್ನ ಕಳೆದುಹೋದ ‘ಉದ್ಯಾನ ನಗರಿ’ಯ ಕಿರೀಟವನ್ನು ಮತ್ತೆ ಮುಡಿಗೇರಿಸಿಕೊಳ್ಳುವುದು ಅಸಾಧ್ಯವೇನೂ ಅಲ್ಲ.