ಒಡಿಶಾದಲ್ಲಿ ಅನಾಹುತ ಸೃಷ್ಟಿಸಿದ ʼಅರ್ನಾಬ್ʼ ಬೆನ್ನಲ್ಲೇ ಅಪ್ಪಳಿಸಲಿದೆ ಮುರಸು ಚಂಡಮಾರುತ; ದಕ್ಷಿಣ ಭಾರತದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆ ಸಾಧ್ಯತೆ
Cyclone Murasu: ಬಂಗಾಳ ಕೊಲ್ಲಿಯ ನೈಋತ್ಯ ಮತ್ತು ಅದನ್ನು ಹೊಂದಿಕೊಂಡಿರುವ ಪಶ್ಚಿಮ-ಮಧ್ಯ ಭಾಗದಲ್ಲಿ ಮತ್ತೊಂದು ಚಂಡ ಮಾರುತ ರೂಪುಗೊಳ್ಳುತ್ತಿದೆ. ಮುರಸು ಹೆಸರಿನ ಈ ಚಂಡಮಾರುತವು ಆಂಧ್ರ ಪ್ರದೇಶ ಮತ್ತು ಅದನ್ನು ಹೊಂದಿಕೊಂಡಿರುವ ಉತ್ತರ ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಗೆ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ಅಮರಾವತಿ, ನ. 1: ಇತ್ತೀಚೆಗೆ ಭಾರತದ ಕರಾವಳಿಗೆ ಅಪ್ಪಳಿಸಿದ ಅರ್ನಾಬ್ ಚಂಡಮಾರುತದ ಪರಿಣಾಮ ಅಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಭೀಕರ ಮಳೆಯಾಗಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. ಈ ಮಧ್ಯೆ ಮತ್ತೊಂದು ಚಂಡಮಾರುತ ರೂಪುಗೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಬಂಗಾಳ ಕೊಲ್ಲಿಯ ನೈಋತ್ಯ ಮತ್ತು ಅದನ್ನು ಹೊಂದಿಕೊಂಡಿರುವ ಪಶ್ಚಿಮ-ಮಧ್ಯ ಭಾಗದಲ್ಲಿ ಮುರಸು ಚಂಡಮಾರುತವು (Cyclone Murasu) ಸೃಷ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (IMD) ಆಂಧ್ರ ಪ್ರದೇಶ ಮತ್ತು ಅದನ್ನು ಹೊಂದಿಕೊಂಡಿರುವ ಉತ್ತರ ತಮಿಳುನಾಡು ಕರಾವಳಿ ಪ್ರದೇಶಗಳಿಗೆ ಚಂಡಮಾರುತದ ಎಚ್ಚರಿಕೆ ನೀಡಿದೆ.
ʼʼಬಂಗಾಲ ಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಭಾನುವಾರ (ನವೆಂಬರ್ 1) ಮತ್ತಷ್ಟು ತೀವ್ರಗೊಂಡು ಆಳವಾದ ವಾಯುಭಾರ ಕುಸಿತವಾಗಿ ಪರಿವರ್ತನೆಗೊಂಡಿದೆ. ಇದರ ಪರಿಣಾಮವಾಗಿ ಬಂಗಾಲ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದ್ದು, ನವೆಂಬರ್ 3ರವರೆಗೆ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ'' ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಹವಾಮಾನ ಇಲಾಖೆಯ ಎಚ್ಚರಿಕೆ:
Cyclonic Storm “MURASU” Intensifies Over the Bay of Bengal Cyclonic Storm “MURASU” is likely to intensify into a Severe Cyclonic Storm by the morning of 02 November 2026. It is very likely to cross the South Andhra Pradesh coast between Nellore and Narsapur during midnight of 02 November and early hours of 03 November, with a wind speed of 100–110 kmph, gusting up to 120 kmph. Stay tuned to IMD for the latest updates and weather warnings. #Cyclone #CycloneMurasu #SevereCyclonicStorm #Murasu #HeavyRainfall #IMD #AndhraPradesh #Yanam #Odisha #AndhraPradesh #WeatherUpdate #BengalWeather @moesgoi @airnewsalerts @DDNational @ndmaindia @ICRER_MHA
— India Meteorological Department (@Indiametdept) November 1, 2026
ಈ ಚಂಡಮಾರುತವು ಇನ್ನಷ್ಟು ಪ್ರಬಲಗೊಂಡು ನವೆಂಬರ್ 2ರ ತಡರಾತ್ರಿ ಮತ್ತು ನವೆಂಬರ್ 3ರ ಮುಂಜಾನೆಯ ನಡುವಿನ ಅವಧಿಯಲ್ಲಿ ನೆಲ್ಲೂರು ಮತ್ತು ನರಸಾಪುರಗಳ ನಡುವೆ ದಕ್ಷಿಣ ಆಂಧ್ರ ಪ್ರದೇಶ ಕರಾವಳಿಯನ್ನು ದಾಟಲಿದೆ. ಈ ಚಂಡಮಾರುತವು ಗಂಟೆಗೆ 23 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುವ ನಿರೀಕ್ಷೆ ಇದೆ. ಈ ವೇಳೆ ಗಾಳಿಯ ವೇಗವು ಗಂಟೆಗೆ 100ರಿಂದ 110 ಕಿಲೋ ಮೀಟರ್ ಇರಲಿದ್ದು, ಕೆಲವೊಮ್ಮೆ ಗಂಟೆಗೆ 120 ಕಿಲೋ ಮೀಟರ್ಗಳ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅರ್ನಾಬ್ ಆರ್ಭಟಕ್ಕೆ ಆಂಧ್ರಪ್ರದೇಶದಲ್ಲಿ ಐವರು ಸಾವು; ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ
ಒಡಿಶಾದಲ್ಲಿ ಹೈ ಅಲರ್ಟ್
ಚಂಡಮಾರುತವು ಸದ್ಯದಲ್ಲೇ ಆಂಧ್ರ ಪ್ರದೇಶದ ಕರಾವಳಿಯನ್ನು ಸಮೀಪಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ತನ್ನ ದಕ್ಷಿಣ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಬಲವಾದ ಗಾಳಿ ಬೀಸಲಿದೆ.
ತಗ್ಗು ಪ್ರದೇಶಗಳು ಮತ್ತು ಅಪಾಯಕ್ಕೆ ತುತ್ತಾಗಬಹುದಾದ ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ನವೆಂಬರ್ 2 ಮತ್ತು ನವೆಂಬರ್ 4ರ ನಡುವೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಆಡಳಿತವು ಸಲಹೆ ನೀಡಿದೆ. ಅಪಾಯಕ್ಕೊಳಗಾಗಬಹುದಾದ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಒಡಿಶಾ ವಿಪತ್ತು ತ್ವರಿತ ಪ್ರತಿಕ್ರಿಯೆ ಪಡೆಯ (ODRAF) ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಗುಲಾಬ್ ಚಂಡ ಮಾರುತಕ್ಕೆ ಭಾರಿ ಮಳೆ: 25 ಮಂದಿ ಬಲಿ
ಆಂಧ್ರ ಪ್ರದೇಶ, ತಮಿಳುನಾಡಿನಲ್ಲೂ ಭಾರಿ ಮಳೆ ಸಾಧ್ಯತೆ
ಚಂಡಮಾರುತದ ಪರಿಣಾಮ ನವೆಂಬರ್ 1ರಿಂದ ಕರಾವಳಿ ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 2 ಮತ್ತು 3ರಂದು ಹಲವು ಕಡೆಗಳಿಗೆ ಇದು ವಿಸ್ತರಿಸಲಿದೆ. ಇನ್ನು ತಮಿಳುನಾಡಿನ ಹಲವೆಡೆ ನವೆಂಬರ್ 2 ಮತ್ತು 3ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರ ಅತ್ಯಂತ ಪ್ರಕ್ಷುಬ್ಧವಾಗಿರಲಿದೆ. ಚಂಡಮಾರುತ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮೀನುಗಾರರು ಮುಂದಿನ ಎರಡು-ಮೂರು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ತಿಳಿಸಲಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.