ಮಾದಕವಸ್ತು ಸಾಗಿಸಿದ್ದ ಆಸ್ಟ್ರೇಲಿಯಾ ಪ್ರಜೆಯ ಒಳ ಉಡುಪಿನ ಗಾತ್ರ ಬದಲಾಯಿಸಿದ ಕೇರಳದ ಎಲ್‌ಡಿಎಫ್ ಶಾಸಕ ಆ್ಯಂಟನಿ ರಾಜು ಅನರ್ಹ
ಕೇರಳದ ಶಾಸಕ ಆ್ಯಂಟನಿ ರಾಜು ಅವರ ಸಾಕ್ಷ್ಯ ತಿರುಚಿದ ಪ್ರಕರಣದಲ್ಲಿ ಮಹತ್ತರ ತೀರ್ಪು ಹೊರ ಬಿದ್ದಿದೆ. ಅವರು ತಪ್ಪಿತಸ್ಥರೆಂದು ಪರಿಗಣಿಸಿ 3 ವರ್ಷಗಳ ಸೆರೆವಾಸ ವಿಧಿಸಲಾಗಿದೆ. ಇದರಿಂದ ಆ್ಯಂಟನಿ ರಾಜು ಅವರ ಶಾಸಕ ಸ್ಥಾನ ರದ್ದಾಗಿದೆ. ಆ ಮೂಲಕ 3 ದಶಕಗಳ ಹಿಂದಿನ ಪ್ರಕರಣವೊಂದು ಇದೀಗ ಇತ್ಯರ್ಥವಾಗಿದೆ.
ಆ್ಯಂಟನಿ ರಾಜು (ಸಂಗ್ರಹ ಚಿತ್ರ) -
ತಿರುವನಂತಪುರಂ, ಜ. 9: ಕೇರಳ ರಾಜಕೀಯ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ಮಾಜಿ ಸಚಿವ, ಶಾಸಕ ಆ್ಯಂಟನಿ ರಾಜು (Antony Raju) ಅವರ ಸಾಕ್ಷ್ಯ ತಿರುಚಿದ ಪ್ರಕರಣದಲ್ಲಿ ಮಹತ್ತರ ತೀರ್ಪು ಹೊರ ಬಿದ್ದಿದೆ. ನೆಯ್ಯಾಂಟಿಕರ ಫಸ್ಟ್ ಕ್ಲಾಸ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆ್ಯಂಟನಿ ರಾಜು ಮತ್ತು ಅವರ ಸಹವರ್ತಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಇದರಿಂದ ಆ್ಯಂಟನಿ ರಾಜು ಅವರ ಶಾಸಕ ಸ್ಥಾನ ರದ್ದಾಗಿದೆ. ಆ ಮೂಲಕ 3 ದಶಕಗಳ ಹಿಂದಿನ ಪ್ರಕರಣವೊಂದು ಇದೀಗ ಇತ್ಯರ್ಥವಾಗಿದೆ.
90ರ ದಶಕದಲ್ಲಿ ದಾಖಲಾಗಿದ್ದ ಮಾದಕವಸ್ತು ಸಾಗಾಟ ಪ್ರಕರಣದಲ್ಲಿ ಸಾಕ್ಷ್ಯ ಬದಲಾವಣೆ ಮಾಡಿದ್ದ ಆ್ಯಂಟನಿ ರಾಜು ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಇದರಿಂದ ಆಡಳಿತಾರೂಢ ಎಲ್‌ಡಿಎಫ್‌ನ ಆ್ಯಂಟನಿ ರಾಜು ಅವರ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ವರ್ಷ ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದು ಎಲ್‌ಡಿಎಫ್‌ಗೆ ಕೊಂಚ ಮಟ್ಟಿನ ಹಿನ್ನೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜನಪ್ರತಿನಿಧಿಗೆ ಕೋರ್ಟ್ 2 ವರ್ಷಕ್ಕಿಂತ ಅಧಿಕ ಶಿಕ್ಷೆ ವಿಧಿಸಿದರೆ ಅವರನ್ನು ಅನರ್ಹಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆ್ಯಂಟನಿ ರಾಜು ಇದೀಗ ಮಾಜಿ ಶಾಸಕ ಎನಿಸಿಕೊಂಡಿದ್ದಾರೆ.
ಆ್ಯಂಟನಿ ರಾಜು ಪ್ರಕರಣದ ಎಕ್ಸ್ ಪೋಸ್ಟ್:
Kerala politics, vintage edition.
— Prasanna Viswanathan (@prasannavishy) January 4, 2026
After 34 years, former minister and Thiruvananthapuram incumbent MLA (LDF) Antony Raju gets 3 years in jail for evidence tampering in a 1990 drug case. MLA faces disqualification.
The case is so sordid and farcical. Antony conspired with a… pic.twitter.com/Z6YJBCF33H
ಏನಿದು ಪ್ರಕರಣ?
1990ರಲ್ಲಿ ಆಸ್ಟ್ರೇಲಿಯಾ ಪ್ರಜೆ ಆಂಡ್ರ್ಯೂ ಸಾಲ್ವಟೋರ್ ಸೆರ್ವೆಲ್ಲಿ ಒಳ ಉಡುಪಿನಲ್ಲಿ ಮಾದಕ ವಸ್ತು ಹಶೀಶ್ ಸಾಗಿಸುವಾಗ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಆತನ ಕಡು ನೀಲಿ ಒಳ ಉಡುಪಿನಲ್ಲಿ ಹೊಲಿದ ರಹಸ್ಯ ಜೇಬಿನಲ್ಲಿ 61.5 ಗ್ರಾಂ ಹಶೀಶ್ ಅಡಗಿಸಿಡಲಾಗಿತ್ತು.
ರಸ್ತೆ ಅಪಘಾತದ ಬಳಿಕ ಕಾರಿನಲ್ಲಿದ್ದ ಮಾದಕ ದ್ರವ್ಯ ಪತ್ತೆ: ಬರೇಲಿ ಹಿಂಸಾಚಾರ ಆರೋಪಿಯ ಮಗನ ಬಂಧನ
ಕಳ್ಳ ಸಾಗಣೆ ಮಾಡಿದ ವಸ್ತುಗಳನ್ನು ನೇರವಾಗಿ ಆರೋಪಿಯಿಂದ ವಶಪಡಿಸಿಕೊಳ್ಳಲಾದ ಕಾರಣ ಸೆಷನ್ಸ್ ನ್ಯಾಯಾಲಯವು ಸೆರ್ವೆಲ್ಲಿಯನ್ನು ದೋಷಿ ಎಂದು ಘೋಷಿಸಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿತು. ಶಿಕ್ಷೆ ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸೆರ್ವೆಲ್ಲಿ ತನ್ನ ದೇಹದ ಗಾತ್ರಕ್ಕಿಂತಲೂ ತಾನು ಮಾದಕವಸ್ತು ಬಚ್ಚಿಟ್ಟುಕೊಂಡಿದ್ದೆನೆನ್ನಲಾದ ಒಳ ಉಡುಪು ಚಿಕ್ಕದು ಎಂದು ಪ್ರತಿಪಾದಿಸಿದ. ಆಗ ಯುವ ವಕೀಲರಾಗಿದ್ದ ಆ್ಯಂಟನಿ ರಾಜು ನ್ಯಾಯಾಲಯದಲ್ಲಿ ಸೆರ್ವೆಲ್ಲಿಯ ಪರವಾಗಿ ವಾದಿಸಿದ್ದರು.
ಆ್ಯಂಟನಿ ರಾಜು ಆರೋಪಿಯು ಮಾದಕವಸ್ತು ಕಳ್ಳಸಾಗಾಣೆಗೆ ಬಳಸಿದ್ದ ಒಳ ಉಡುಪನ್ನು ಸಹೋದ್ಯೋಗಿಯೊಬ್ಬನ ಸಹಾಯದಿಂದ ಬದಲಾಯಿಸಿ ಬೇರೆ ಬಟ್ಟೆಯನ್ನು ಕೋರ್ಟ್‌ಗೆ ನೀಡಿದ್ದರು. ಆ ಒಳ ಉಡುಪು ಆರೋಪಿಗೆ ಹೊಂದಿಕೆಯಾಗದ ಕಾರಣ ಆತನನ್ನು ಖುಲಾಸೆಗೊಳಿಸಲಾಯಿತು.
ಅದಾದ ಬಳಿಕ ಸೆರ್ವೆಲ್ಲಿ ತನ್ನ ಹುಟ್ಟೀರಾದ ಆಸ್ಟ್ರೇಲಿಯಾದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದು, ಜೈಲಿನಲ್ಲಿ ಭಾರತದ ಪೊಲೀಸರು ಮತ್ತು ನ್ಯಾಯಾಲಯಗಳಿಗೆ ಚಳ್ಳೆಹಣ್ಣು ತಿನ್ನಿಸಿದೆ ಎಂದು ಹೇಳಿಕೊಂಡಾಗ ಕೇರಳದ ಪ್ರಕರಣ ಮತ್ತೆ ಬೆಳಕಿಗೆ ಬಂತು. ಮತ್ತೆ ನಡೆಸಿದ ತನಿಖೆಯಲ್ಲಿ ರಾಜು ಸಾಕ್ಷ್ಯವನ್ನು ತಿರುಚಿರುವುದು ಬೆಳಕಿಗೆ ಬಂತು. ಅಂತಿಮವಾಗಿ ಇದು ರಾಜು ಅವರ ಶಾಸಕ ಸ್ಥಾನ ನಷ್ಟಕ್ಕೆ ಕಾರಣವಾಯಿತು.