ರಸ್ತೆ ಅಪಘಾತದ ಬಳಿಕ ಕಾರಿನಲ್ಲಿದ್ದ ಮಾದಕ ದ್ರವ್ಯ ಪತ್ತೆ: ಬರೇಲಿ ಹಿಂಸಾಚಾರ ಆರೋಪಿಯ ಮಗನ ಬಂಧನ
Drugs seized: ಲಖನೌ–ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದ ವೇಳೆ ಕಾರಿನಿಂದ ಮಾದಕ ದ್ರವ್ಯ ಮತ್ತು ಸಿರಿಂಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 2025ರ ಸೆಪ್ಟೆಂಬರ್‌ನಲ್ಲಿ ನಡೆದ ಬರೇಲಿ ಹಿಂಸಾಚಾರದ ಆರೋಪಿಯ ಪುತ್ರ ಫರ್ಮಾನ್ ರಜಾ ಖಾನ್‍ನನ್ನು ಈ ಸಂಬಂಧ ಮಂಗಳವಾರ ತಡರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪಘಾತವಾದ ಕಾರು -
ಲಖನೌ, ಜ. 5: ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಲಖನೌ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Lucknow–Delhi National Highway) ನಡೆದ ರಸ್ತೆ ಅಪಘಾತದ ನಂತರ ಪೊಲೀಸರು ಕಾರ್‌ನಿಂದ ಮಾದಕ ದ್ರವ್ಯ ಮತ್ತು ಸಿರಿಂಜ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 2025ರ ಸೆಪ್ಟೆಂಬರ್‌ನಲ್ಲಿ ಬರೇಲಿ ಹಿಂಸಾಚಾರದ ಮಾಸ್ಟರ್ ಮೈಂಡ್ ಎಂದು ಹೇಳಲಾದ ಮೌಲಾನಾ ತೌಕೀರ್ ರಜಾನ ಪುತ್ರ ಫರ್ಮಾನ್ ರಜಾ ಖಾನ್‍ನನ್ನು (Farman Raza Khan) ಮಂಗಳವಾರ ತಡರಾತ್ರಿ ಬಂಧಿಸಲಾಗಿದೆ.
ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಚ್ಚಿಯಾನಿ ಖೇಡಾ ಗ್ರಾಮದ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಹುಂಡೈ ವೆರ್ನಾ ಕಾರನ್ನು ಚಲಾಯಿಸುತ್ತಿದ್ದ ಫರ್ಮಾನ್ ರಜಾ ಸೀತಾಪುರ ಡಿಪೋ ರಸ್ತೆ ಮಾರ್ಗದ ಬಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದ ಪರಿಣಾಮವಾಗಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಫರ್ಮಾನ್ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾನೆ.
ಕ್ಯಾಬ್ ಚಾಲಕನಿಗೆ ಬಾಡಿಗೆ ನೀಡದೆ ಸುಳ್ಳು ಕಿರುಕುಳದ ಆರೋಪ ಹೊರಿಸಿದ ಮಹಿಳೆ!
ಪೊಲೀಸ್ ಅಧಿಕಾರಿಗಳ ಪ್ರಕಾರ, ಫರ್ಮಾನ್ ಬರೇಲಿಯಿಂದ ಪ್ರಯಾಗ್‌ರಾಜ್ ಕಡೆಗೆ ಪ್ರಯಾಣಿಸುತ್ತಿದ್ದ. ಪ್ರಸ್ತುತ ಫತೇಘರ್ ಜೈಲಿನಲ್ಲಿರುವ ತನ್ನ ತಂದೆಯ ಜಾಮೀನು ವಿಚಾರಣೆಗೆ ಸಂಬಂಧಿಸಿದಂತೆ ವಕೀಲರನ್ನು ಭೇಟಿಯಾಗಲು ಹೊರಟಿದ್ದ. ಆದರೆ ಆತನ ಯೋಜನೆ ಕೊನೆಯ ಕ್ಷಣದಲ್ಲಿ ಬದಲಾಯಿತು. ಹೀಗಾಗಿ ಶಹಜಹಾನ್‌ಪುರದ ಮೂಲಕ ತಡರಾತ್ರಿ ಪ್ರಯಾಣ ಬೆಳೆಸಿದ್ದ.
ಪೊಲೀಸರು ಅಪಘಾತದ ಸ್ಥಳಕ್ಕೆ ತಲುಪಿದಾಗ ಫರ್ಮಾನ್‍ನ ಅಸಹಜ ನಡವಳಿಕೆ ಅನುಮಾನಕ್ಕೆ ಕಾರಣವಾಯಿತು. ಪರಿಶೀಲನೆಗಾಗಿ ಕಾರಿನ ಡಿಕ್ಕಿ ತೆರೆಯಲು ಕೇಳಿದಾಗ ನಿರಾಕರಿಸಿದ್ದ. ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಲು ಪ್ರಾರಂಭಿಸಿದ್ದ ಎಂದು ವರದಿಯಾಗಿದೆ. ಇದು ಹೆದ್ದಾರಿಯಲ್ಲಿ ಸ್ವಲ್ಪ ಸಮಯ ಗೊಂದಲಕ್ಕೆ ಕಾರಣವಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ದೀಕ್ಷಾ ಭಾವರೆ ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತಲುಪಿದರು. ಪೊಲೀಸರ ಮಧ್ಯ ಪ್ರವೇಶದ ನಂತರ ಡಿಕ್ಕಿ ತೆರೆಯಲಾಯಿತು. ಈ ವೇಳೆ ಸೂಟ್‌ಕೇಸ್ ಕಂಡುಬಂತು. ಕೂಲಂಕುಷ ಪರಿಶೀಲನೆಯ ನಂತರ ಸುಮಾರು ಅರ್ಧ ಗ್ರಾಂ ಶಂಕಿತ ಮಾದಕ ವಸ್ತು ಮತ್ತು ಒಂದು ಸಿರಿಂಜ್ ಒಳಗೊಂಡಿರುವ ಸಣ್ಣ ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್‌ಪಿ ದೀಕ್ಷಾ ಭಾವರೆ ಹೇಳಿದರು.
ಆರೋಪಿಯು ವಿಚಾರಣೆಯ ಸಮಯದಲ್ಲಿ ತಾನು ಮಾದಕ ದ್ರವ್ಯ ಸೇವಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳೊಂದಿಗೆ ಪೊಲೀಸರು ಫರ್ಮಾನ್ ರಜಾನನ್ನು ತಿಲ್ಹಾರ್ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತಂದರು. ವಶಪಡಿಸಿಕೊಂಡ ಮಾದಕ ವಸ್ತುವನ್ನು ಅದರ ನಿಖರ ಸಂಯೋಜನೆಯನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆ ಹೇರುವ ಸಾಧ್ಯತೆ ಇದೆ.
ಪೊಲೀಸರ ದಾರಿ ತಪ್ಪಿಸಲು ಯತ್ನ
ಫರ್ಮಾನ್ ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ ಮತ್ತು ಕಾರು ಪರಿಶೀಲಿಸುವುದನ್ನು ವಿರೋಧಿಸಿದ್ದ. ನಂತರ ತನ್ನ ಗುರುತನ್ನು ಬಹಿರಂಗಪಡಿಸಿದನು. ತಾನು ಮೌಲಾನಾ ತೌಕೀರ್ ರಜಾ ಖಾನ್ ಮಗ ಎಂದು ಹೇಳಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (IMC) ಅಧ್ಯಕ್ಷ ಮೌಲಾನಾ ತೌಕೀರ್ ರಜಾ 2025ರ ಸೆಪ್ಟೆಂಬರ್ 26ರಂದು ಬರೇಲಿಯಲ್ಲಿ ಭುಗಿಲೆದ್ದ ದೊಡ್ಡ ಪ್ರಮಾಣದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾನೆ. ಶುಕ್ರವಾರದ ಪ್ರಾರ್ಥನೆಯ ನಂತರ ಇಸ್ಲಾಮಿಯಾ ಮೈದಾನದಲ್ಲಿ ಜನರು ಒಟ್ಟುಗೂಡುವಂತೆ ಮತ್ತು ಜಿಲ್ಲಾಧಿಕಾರಿ ಕಚೇರಿಯ ಕಡೆಗೆ ಮೆರವಣಿಗೆ ನಡೆಸುವಂತೆ ರಜಾ ಕರೆ ನೀಡಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು.
ತೌಕೀರ್ ರಜಾ ಮತ್ತು ಆತನ ಆಪ್ತ ಸಹಚರರ ಮೇಲೆ ವಿಧಿಸಲಾದ ಮುನ್ನೆಚ್ಚರಿಕೆ ಕ್ರಮ ಮತ್ತು ಗೃಹಬಂಧನದ ಆದೇಶಗಳ ಹೊರತಾಗಿಯೂ, ಗುಂಪುಗಳು ಇಸ್ಲಾಮಿಯಾ ಮೈದಾನದ ಕಡೆಗೆ ತೆರಳಲು ಪ್ರಯತ್ನಿಸಿದವು. ಇದು ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಘರ್ಷಣೆಗೆ ಕಾರಣವಾಯಿತು. ಪೊಲೀಸರ ಮೇಲೆ ಕಲ್ಲುಗಳಿಂದ ದಾಳಿ ಮಾಡಲಾಗಿದೆ ಮತ್ತು ಗುಂಡಿನ ದಾಳಿ ಘಟನೆಗಳು ವರದಿಯಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ಮತ್ತು ಅಶ್ರುವಾಯು ಬಳಸಿದರು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಪೊಲೀಸರು 11 ಪ್ರಕರಣಗಳನ್ನು ದಾಖಲಿಸಿಕೊಂಡು ಕನಿಷ್ಠ 84 ಜನರನ್ನು ಬಂಧಿಸಿದ್ದಾರೆ. ಆ ಪೈಕಿ 10 ಪ್ರಕರಣಗಳಲ್ಲಿ ತೌಕೀರ್ ರಜಾನನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.