ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಕೀಯ ಗುರು ಮಮತಾ ಬ್ಯಾನರ್ಜಿ ವಿರುದ್ಧವೇ ತೊಡೆ ತಟ್ಟಿದ ಸುವೇಂದು ಅಧಿಕಾರಿ; ಟಿಎಂಸಿ ಭದ್ರಕೋಟೆಯನ್ನು ಬಿಜೆಪಿ ನಾಯಕ ಒಡೆದಿದ್ದು ಹೇಗೆ? ಹೋರಾಟದ ಹಾದಿ ಹೇಗಿತ್ತು?

Suvendu Adhikari: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, 293 ಸ್ಥಾನಗಳ ಪೈಕಿ ಬಿಜೆಪಿ 200ಕ್ಕಿಂತ ಅಧಿಕ ಕಡೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಬಿಜೆಪಿ ಇತಿಹಾಸ ರಚಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುವತ್ತ ದಾಪುಗಾಲು ಇಟ್ಟಿದೆ. ಹಾಗಾದರೆ ಯಾರು ಈ ಸುವೇಂದು ಅಧಿಕಾರಿ? ಅವರ ಹೋರಾಟದ ಹಾದಿ ಹೇಗಿತ್ತು? ಇಲ್ಲಿದೆ ವಿವರ.

ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ)

ಕೋಲ್ಕತ್ತಾ, ಮೇ 4: ಸುಮಾರು 1 ತಿಂಗಳ ಕಾಯುವಿಕೆ ಅಂತ್ಯಗೊಂಡಿದೆ. ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ (West Bengal Assembly Election Results) ಹೊರ ಬೀಳುತ್ತಿದ್ದು, 293 ಸ್ಥಾನಗಳ ಪೈಕಿ ಬಿಜೆಪಿ 200ಕ್ಕಿಂತ ಅಧಿಕ ಕಡೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಬಿಜೆಪಿ ಇತಿಹಾಸ ರಚಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುವತ್ತ ದಾಪುಗಾಲು ಇಟ್ಟಿದೆ. ಏಪ್ರಿಲ್‌ 23 ಮತ್ತು ಏಪ್ರಿಲ್‌ 29ರಂದು 2 ಹಂತಗಳಲ್ಲಿದಾಖಲೆಯ ಶೇಕಡಾ 90ರಷ್ಟು ಮತದಾನವಾದಾಗಲೇ ಸರ್ಕಾರ ಬದಲಾಗುವ ಸೂಚನೆ ಲಭಿಸಿತ್ತು. ಇನ್ನು ಎಕ್ಸಿಟ್‌ ಪೋಲ್‌ ಭವಿಷ್ಯ ನುಡಿದಂತೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಈ ದಾಖಲೆಯ ಗೆಲುವಿನ ಹಿಂದೆ ಪ್ರಧಾನಿ ನರೇಂದ್ರ ಮೋದಿ-ಅಮಿತ್‌ ಶಾ ಜೋಡಿಯ ಕಮಾಲ್‌ ಜತೆಗೆ ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುವೇಂದು ಅಧಿಕಾರಿ (Suvendu Adhikari) ಅವರ ಪಾತ್ರವೂ ದೊಡ್ಡದು.

ವಿಶೇಷ ಎಂದರೆ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಭದ್ರಕೋಟೆ ಕುಸಿಯುವಂತೆ ಮಾಡಿದ ಸುವೇಂದು ಅಧಿಕಾರಿ ಈ ಹಿಂದೆ ಮಮತಾ ಬ್ಯಾನರ್ಜಿ ಅವರ ಟಿಎಂಸಿಯಲ್ಲಿದ್ದರು. 2020ರ ಡಿಸೆಂಬರ್‌ನಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ, ಈಗ ಬಿಜೆಪಿಯಲ್ಲಿ ಪ್ರಭಾವಿ ಮತ್ತು ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

Suvendu Adhikari and Modi

ಗುರುವಿಗೇ ತಿರುಮಂತ್ರ

2021ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಗುರು ಮಮತಾ ಬ್ಯಾನರ್ಜಿ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧಿಸುವ ಮೂಲಕ ಸುವೇಂದು ಅಧಿಕಾರಿ ದೇಶದ ಗಮನ ಸೆಳೆದರು. ಅಲ್ಲದೆ ಮಮತಾ ಬ್ಯಾನರ್ಜಿ ಅವರಂತಹ ಬಲಿಷ್ಠ ಸ್ಪರ್ಧಿಯನ್ನೇ ಸೋಲಿಸಿದರು. ಆ ಮೂಲಕ ಮತ್ತೊಂದು ರಾಜಕೀಯ ಇನ್ನಿಂಗ್ಸ್‌ ಅನ್ನು ಭರ್ಜರಿಯಾಗಿಯೇ ಆರಂಭಿಸಿದರು. ಜತೆಗೆ ಪ್ರಬಲ ವಿಪಕ್ಷ ನಾಯಕನಾಗಿ ಟಿಎಂಸಿ ಸರ್ಕಾರದ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು: ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿರುವ ಮಮತಾ ಬ್ಯಾನರ್ಜಿ! ಸೂರ್ಯಾಸ್ತದವರೆಗೂ ಕಾಯಿರಿ ಎಂದ ನಾಯಕಿ

2 ಕಡೆ ಸ್ಪರ್ಧೆ

ಈ ಬಾರಿ ಸುವೇಂದು ಅಧಿಕಾರಿ ನಂದಿಗ್ರಾಮ ಜತೆಗೆ ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಆ ಮೂಲಕ ಭವಾನಿಪುರದಲ್ಲಿ ಕಣಕ್ಕಿಳಿದಿರುವ ಮಮತಾ ಬ್ಯಾನಮರ್ಜಿ ವಿರುದ್ಧ ಮತ್ತೆ ತೊಡೆ ತಟ್ಟಿದ್ದಾರೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಸುವೇಂದು ಅಧಿಕಾರಿ ಎರಡೂ ಕಡೆಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಜತೆಗೆ ಪಶ್ಚಿಮ ಬಂಗಾಳದ ಚೊಚ್ಚಲ ಬಿಜೆಪಿ ಸರ್ಕಾರದಲ್ಲಿ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಯಾರು ಈ ಸುವೇಂದು ಅಧಿಕಾರಿ?

1970ರಲ್ಲಿ ರಾಜಕೀಯ ಕುಟುಂಬದಲ್ಲಿ ಜನಿಸಿದ ಸುವೇಂದು ಅಧಿಕಾರಿ ಸ್ನಾತಕೋತ್ತರ ಪದವೀಧರರು. ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಅವರ ತಂದೆ ಶಿಶಿರ್‌ ಅಧಿಕಾರಿ ಕಾಂಗ್ರೆಸ್‌ನ ನಾಯಕರಾಗಿದ್ದರು. ಶಿಶಿರ್‌ ಡಾ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು. ತಂದೆಯಂತೆಯೇ ಆರಂಭದಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಬಳಿಕ ಮಮತಾ ಬ್ಯಾನರ್ಜಿ ಸ್ಥಾಪಿಸಿದ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 2006ರಲ್ಲಿ ಕಾಂತಿ ದಕ್ಷಿಣ ಕ್ಷೇತ್ರದಲ್ಲಿ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.

ಟಿಎಂಸಿಯಲ್ಲಿ ಪ್ರಭಾವಿ ನಾಯಕ

ಒಂದು ಕಾಲದಲ್ಲಿ ಟಿಎಂಸಿಯ ಪ್ರಭಾವ ನಾಯಕರಾಗಿದ್ದ ಸುವೇಂದು ಮಮತಾ ಬ್ಯಾನರ್ಜಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಸುವೇಂದು ಅಧಿಕಾರಿಯನ್ನು ನಂದಿಗ್ರಾಮ ಮತ್ತು ಸಿಂಗೂರ್‌ನಲ್ಲಿ ನಡೆದ ಭೂಸ್ವಾಧೀನ ವಿರೋಧಿ ಚಳುವಳಿಯ ಮುಖ್ಯ ಸಂಘಟಕರನ್ನಾಗಿ ಮಾಡಲಾಯಿತು. ಹೀಗೆ ಸುವೇಂದ್ರ ಅಧಿಕಾರಿ ಭೂಮಿ ಉಚ್ಛೇದ್ ಪ್ರತಿರೋಧ್ ಸಮಿತಿಯ ನೇತೃತ್ವ ವಹಿಸಿ ನಂದಿಗ್ರಾಮದಲ್ಲಿ ಚಳುವಳಿಯನ್ನು ಮುನ್ನಡೆಸಿದರು. ಈ ಆಂದೋಲನವು 2011ರಲ್ಲಿ ಸುಮಾರು 3 ದಶಕಗಳ ಎಡಗಂಗದ ಆಡಳಿತವನ್ನು ಕೊನೆಗೊಳಿಸಿ ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸಿತು. ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರ್ಕಾರದ 34 ವರ್ಷಗಳ ಆಡಳಿತವನ್ನು ಕೊನೆಗೊಂಡಿತು.

ಸಂಸತ್‌ ಪ್ರದೇಶಿಸಿದ್ದ ಅಧಿಕಾರಿ

2009 ಮತ್ತು 2014ರಲ್ಲಿ ತಮ್ಲುಕ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸುವೇಂದು ಅಧಿಕಾರಿ ಟಿಎಂಸಿಯ ಪ್ರಮುಖ ನಾಯಕ ಎನಿಸಿಕೊಂಡರು. 2016ರಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಸತತ 2ನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಂಡಾಗ, ಸುವೇಂದು ರಾಜ್ಯ ರಾಜಕೀಯಕ್ಕೆ ಮರಳಿದರು. ಸಾರಿಗೆ ಸೇರಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದರು.

2019ರಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದ ನಂತರ ಸುವೇಂದು ಅವರನ್ನು ವಿಧಾನಸಭಾ ಉಪಚುನಾವಣೆಯ ಟಿಎಂಸಿ ಉಸ್ತುವಾರಿಯನ್ನಾಗಿ ನೇಮಿಸಲಾಯಿತು. ಅಧಿಕಾರಿಯ ನಿರಂತರ ಪರಿಶ್ರಮ, ಕಾರ್ಯಾಚರಣೆ ಟಿಎಂಸಿಗೆ ಬಿಜೆಪಿ ಭದ್ರಕೋಟೆಯಾದ ಖರಗ್‌ಪುರ ಸದರ್ ಸೇರಿದಂತೆ ಮೂರು ಉಪಚುನಾವಣೆಗಳಲ್ಲಿ ಗೆಲುವು ತಂದುಕೊಟ್ಟಿತು.

ಟಿಎಂಸಿಯಿಂದ ಹೊರ ಬಂದ ಅಧಿಕಾರಿ

ಹೀಗೆ ಟಿಎಂಸಿಯಲ್ಲಿ ಪ್ರಭಾವ ನಾಯಕ ಎನಿಸಿಕೊಂಡ ಸುವೇಂದು ಅಧಿಕಾರಿ 2020ರಲ್ಲಿ ಮಮತಾ ಬ್ಯಾನರ್ಜಿ ನೆರಳು ತೊರೆದು ಹೊರ ಬಂದರು. ಮಮತಾ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಅಧಿಕಾರಿ ಬದಲಾದ ಸನ್ನಿವೇಶದಲ್ಲಿ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡರು. ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಜತೆ ಆರಂಭವಾದ ತಿಕ್ಕಾಟವೇ ಅವರು ಟಿಎಂಸಿ ತೊರೆಯಲು ಮುಖ್ಯ ಕಾರಣ ಎನ್ನಲಾಗಿದೆ. 2020ರಲ್ಲಿ ನವೆಂಬರ್‌ನಲ್ಲಿ ಸುವೇಂದು ಸಾರಿಗೆ ಮತ್ತು ನೀರಾವರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಸೂಚನೆ ನೀಡಿದರು. 2021ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರು ಬಿಜೆಪಿ ಸೇರಿದರು.

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ವಾಧಿಕಾರ ಅಂತ್ಯ; ಸುದೀರ್ಘ ಆಡಳಿತಕ್ಕೆ ಬ್ರೇಕ್‌ ಬಿದ್ದಿದ್ದೇಗೆ?

Suvendu Adhikari and Mamta

ದೇಶದ್ರೋಹಿ ಎಂದಿದ್ದ ದೀದಿ

2021ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ವಿರುದ್ಧ ಸ್ಪರ್ಧಿಸುವ ಮೂಲಕ ಸುವೇಂದು ಅಧಿಕಾರಿ ಮಹತ್ವದ ರಾಜಕೀಯ ನಿರ್ಧಾರ ಕೈಗೊಂಡರು. ಪ್ರಚಾರದ ವೇಳೆ ಮಮತಾ ವಾಗ್ದಾಳಿ ನಡೆಸಿ ಸುವೇಂದು ಅಧಿಕಾರಿಯನ್ನು ದೇಶದ್ರೋಹಿ ಎಂದು ಕರೆಯುವ ಮೂಲಕ ಕೆಣಕಿದರು. ಇದೇ ಅಧಿಕಾರಿಗೆ ಧನಾತ್ಮಕವಾಗಿ ಬದಲಾಯಿತು. ಅವರು ಬ್ಯಾನರ್ಜಿಯನ್ನು ಸುಮಾರು 1,900 ಮತಗಳಿಂದ ಸೋಲಿಸಿ ಇತಿಹಾಸ ಬರೆದರು.

ತಮ್ಮ ಸೋಲಿನ ಹೊರತಾಗಿಯೂ, ಬ್ಯಾನರ್ಜಿ ಟಿಎಂಸಿಯನ್ನು ಪಶ್ಚಿಮ ಬಂಗಾಳದಲ್ಲಿ ಸತತ 3ನೇ ಅವಧಿಗೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ಟಿಎಂಸಿ ದಾಖಲೆಯ 213 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 77 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಸದ್ಯ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿಯ ಕೋಟೆಗೆ ಲಗ್ಗೆ ಇಟ್ಟು ಪುಡಿಗಟ್ಟಿದ್ದು, ಆ ಮೂಲಕ ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯ ಬರೆದಿದ್ದಾರೆ.

Ramesh Ballamoole

View all posts by this author