ಜೈಪುರ, ಜೂ. 7: ಕುವೈತ್‌ನಿಂದಲೇ ಪತಿಯೊಬ್ಬ ತನ್ನ ಪತ್ನಿಗೆ ವಾಟ್ಸ್‌ಆ್ಯಪ್ ಮೂಲಕ ತ್ರಿವಳಿ ತಲಾಖ್ (Triple Talaq) ನೀಡಿರುವ ಘಟನೆ ನಡೆದಿದೆ. ಪತ್ನಿ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಪತಿಯಿಂದ ವಾಟ್ಸ್‌ಆ್ಯಪ್ ಮೂಲಕ ತ್ರಿವಳಿ ತಲಾಖ್ ಸ್ವೀಕರಿಸಿದ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯು ಲಿಖಿತ ದೂರು ದಾಖಲಿಸಿದ್ದು, ಮೇ 17ರಂದು ವಾಟ್ಸ್‌ಆ್ಯಪ್ ಸಂಖ್ಯೆಗೆ ತ್ರಿವಳಿ ತಲಾಖ್ ಸಂದೇಶವನ್ನು ಕಳುಹಿಸುವ ಮೂಲಕ ಪತಿ ಮದುವೆಯನ್ನು ಕೊನೆಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿ ಪತಿಯನ್ನು ಗೋರಖ್ ಇಮ್ಲಿ ನಿವಾಸಿ ಆಶಿಕ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಸಲಾಗುವುದು ಎಂದು ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಊರ್ಮಿಳಾ ಹೇಳಿದ್ದಾರೆ.
ತಲಾಖ್ ನೀಡಲು ವಕೀಲರು ಏಕೆ ಬೇಕು? ಸುಪ್ರೀಂ ಕೋರ್ಟ್ ಪಶ್ನೆ
ಪತಿಯಿಂದ ಹಲವು ವರ್ಷಗಳಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ತನ್ನ ಪತಿ ಕುವೈತ್‌ನಿಂದ ಭಾರತಕ್ಕೆ ಹಿಂದಿರುಗಿದಾಗಲೆಲ್ಲ, ಒಂದೆರಡು ದಿನ ತನ್ನ ಜತೆ ಚೆನ್ನಾಗಿರುತ್ತಿದ್ದ. ಬಳಿಕ ಸಣ್ಣಪುಟ್ಟ ವಿಷಯಗಳಿಗೆ ಕಿರುಕುಳ ಮತ್ತು ಹಲ್ಲೆ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಮಹಿಳೆ ಬನ್ಸ್ವಾರಾದಲ್ಲಿ 16 ಮತ್ತು 10 ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ತನ್ನ ಅತ್ತೆ ಮತ್ತು ಅತ್ತಿಗೆ ಸೇರಿ ಪತಿಯ ಕುಟುಂಬ ಸದಸ್ಯರಿಂದ ದೂರವಿದ್ದು, ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸುತ್ತಿರುವುದಾಗಿ ಅವರು ಹೇಳಿದ್ದಾರೆ. ತನ್ನ ಪತಿ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿಯೂ ದೌರ್ಜನ್ಯ ಮುಂದುವರೆದಿತ್ತು. ಪದೇ ಪದೆ ದೈಹಿಕ ಹಿಂಸೆಗೆ ಒಳಗಾಗಿದ್ದಾಗಿ ಮಹಿಳೆ ದೂರಿದ್ದಾರೆ.
ತ್ರಿವಳಿ ತಲಾಖ್ ಹೇಳಿರುವ ವಾಟ್ಸ್‌ಆ್ಯಪ್ ಸಂದೇಶ ಬಂದ ನಂತರ ಆಕೆ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ. ಈ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಪ್ರಸ್ತುತ ವಿದೇಶದಲ್ಲಿ ವಾಸಿಸುತ್ತಿರುವುದರಿಂದ, ಪ್ರಕರಣದಲ್ಲಿ ಅವನ ಪ್ರತಿಕ್ರಿಯೆ ಪಡೆಯಲು ಅಧಿಕಾರಿಗಳು ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸಲಿದ್ದಾರೆ.
ತ್ರಿವಳಿ ತಲಾಖ್ ಅನ್ನು ಭಾರತದ ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದ್ದಲ್ಲದೆ, ಬಳಿಕ 2019ರ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ಅದನ್ನು ಅಪರಾಧವಾಗಿ ಪರಿಗಣಿಸಲಾಗಿದೆ. ಈ ಕಾನೂನಿನ ಪ್ರಕಾರ ತ್ರಿವಳಿ ತಲಾಖ್ ಪದ್ಧತಿ ಶಿಕ್ಷಾರ್ಹ ಅಪರಾಧವಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.