ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rare Lizards Seized: 60 ಲಕ್ಷ ರೂ. ಮೌಲ್ಯದ ಅಪರೂಪದ ಹಲ್ಲಿಗಳ ಕಳ್ಳ ಸಾಗಣೆ! ಅಸ್ಸಾಂನಲ್ಲಿ ಸಿಕ್ಕಿಬಿದ್ದ ಕಿಡಿಗೇಡಿಗಳು

ಈಶಾನ್ಯ ರಾಜ್ಯಗಳಲ್ಲಿ ಅತ್ಯಂತ ಅಪರೂಪವಾಗಿ ಟೋಕೇ ಗೆಕ್ಕೊ ಹಲ್ಲಿಗಳು ಕಾಣ ಸಿಗುತ್ತವೆ. ಈ ಹಲ್ಲಿಗಳ ವಿಶಿಷ್ಟ ಗುಣ ಲಕ್ಷಣ, ಔಷಧೀಯ ಗುಣ ಹಾಗೂ ಅಲಭ್ಯತೆಯಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಕಳ್ಳ ಸಾಗಣೆ ಕೂಡಾ ಹೆಚ್ಚಾಗಿದೆ. ಆರೋಪಿಗಳು ಚಿಲ್ಲರೆ ಮೊತ್ತಕ್ಕೆ ಹಲ್ಲಿಗಳನ್ನು ಖರೀದಿಸಿ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವ ದಂಧೆ ಮಾಡುತ್ತಿದ್ದಾರೆ.

ಹಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ಹಲ್ಲಿಗಳು.

Profile Sushmitha Jain Apr 12, 2025 5:42 PM

ಗುವಾಹಟಿ: ಕಸ್ಟಮ್ ಅಧಿಕಾರಿಗಳ ಕಣ್ಣು ತಪ್ಪಿಸಿ ಬೆಲೆ ಬಾಳುವ ವಸ್ತುಗಳನ್ನು ತರುವಾಗ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬೀಳುವುದು ಹೊಸ ವಿಷಯವಲ್ಲ. ಆದರೆ ಅಸ್ಸಾಂನಲ್ಲಿ ಖದೀಮರ ಗ್ಯಾಂಗ್ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಕಂಡುಬರುವ ಟೋಕೇ ಗೆಕ್ಕೊ ಹಲ್ಲಿ(Tokay gecko lizards)ಯನ್ನು ಕಳ್ಳ ಸಾಗಣೆ ಮಾಡುವಾಗ ಪೊಲೀಸ್‌ ಬಲೆಗೆ ಬಿದ್ದಿದೆ. ಈ ಘಟನೆಗೆ ಸಂಬಂಧಿಸಿದಂತೆ 3 ಜನರನ್ನು ದುಬ್ರುಘರ್ ನ ಪೊಲೀಸರು (Dibrugarh Police) ಬಂಧಿಸಿದ್ದಾರೆ. ಅರುಣಾಚಲ ಪ್ರದೇಶದಿಂದ ಕಳ್ಳ ಸಾಗಣೆ ಮೂಲಕ ತರಲಾಗಿದ್ದ 11 ಹಲ್ಲಿಗಳನ್ನು ವಶಪಡಿಸಿಕೊಂಡಿದ್ದು (Rare Lizards Seized), ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಅಂದಾಜು ಮೌಲ್ಯ 60 ಲಕ್ಷ ರೂ. ಎನ್ನಲಾಗಿದೆ.

ಅಸ್ಸಾಂನ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ದುಬ್ರುಘರ್‌ನಲ್ಲಿ ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದ ಸುಮಾರು 11 ಅಪರೂಪದ ಟೋಕೇ ಗೆಕ್ಕೊ ಹಲ್ಲಿಗಳನ್ನು ರಕ್ಷಣೆ ಮಾಡಿದ್ದಾರೆ. ಈ ಹಲ್ಲಿಯನ್ನು ಅರುಣಾಚಲ ಪ್ರದೇಶದಿಂದ ತರಲಾಗಿದ್ದು, ದಿಬ್ರುಗಢದಲ್ಲಿ ಟೋಕೇ ಗೆಕ್ಕೊ ಹಲ್ಲಿಗಳ ಕಳ್ಳಸಾಗಣೆ ಬಗ್ಗೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ವಿಶೇಷ ಕಾರ್ಯಪಡೆ (STF) ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.



ಇನ್ನು ಘಟನೆ ಕುರಿತು ಮಾಹಿತಿ ಹಂಚಿಕೊಂಡಿರುವ ಎಸ್‌ಟಿಎಫ್ ತಂಡ, ದಿಬ್ರುಗಢ ಜಿಲ್ಲಾ ಪೊಲೀಸರು ಮತ್ತು ವನ್ಯಜೀವಿ ನ್ಯಾಯ ಆಯೋಗ ಹಾಗೂ ಗುಪ್ತಚರ ಇಲಾಖೆ ನೀಡಿದ ಸಹಕಾರ, ಬೆಂಬಲ ಮತ್ತು ಸಮಯಕ್ಕೆ ಸರಿಯಾಗಿ ನೀಡಿದ ಮಾಹಿತಿಯಿಂದ ಆರೋಪಿಗಳನ್ನು ಸೆರೆ ಹಿಡಿಯಲು ಸಾಧ್ಯವಾಯಿತು ಎಂದು ತಿಳಿಸಿದೆ.

ಬಂಧಿತ ಆರೋಪಿಗಳನ್ನು ದೇಬಾಶಿಸ್ ದೊಹುಟಿಯಾ (34), ಮನಶ್ ದೊಹುಟಿಯಾ (28) ಮತ್ತು ದೀಪಂಕರ್ ಘರ್ಫಾಲಿಯಾ (40) ಎಂದು ಗುರುತಿಸಲಾಗಿದ್ದು, ಈ ಹಲ್ಲಿಗಳನ್ನು ತಲಾ 60 ಲಕ್ಷ ರೂ.ಗೆ ಮಾರಾಟ ಮಾಡುವ ಯೋಜನೆ ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಅಯೋ‍ಧ್ಯೆಯಲ್ಲಿ ಸ್ನಾನ ಮಾಡ್ತಿದ್ದ ಮಹಿಳೆಯ ವಿಡಿಯೊ ರೆಕಾರ್ಡ್‌ ಮಾಡಿದ ಕಿಡಿಗೇಡಿ- ಆಮೇಲೆ ನಡೆದಿದ್ದೇ ಬೇರೆ!

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಳಿವಿನಂಚಿನಲ್ಲಿರುವ ಈ ಟೋಕೆ ಗೆಕ್ಕೊ ಹಲ್ಲಿಗಳ ಮಾರಾಟವನ್ನು ಭಾರತದಲ್ಲಿ ನಿಷೇಧಿಸಲ್ಪಟ್ಟಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಗರಿಷ್ಠ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಎಂಬ ನಿಯಮವಿದೆ. ಆದರೂ ಈಶಾನ್ಯ ರಾಜ್ಯಗಳಲ್ಲಿ ಇದರ ಕಳ್ಳಸಾಗಣೆ, ಮಾರಾಟ ನಿರಂತರವಾಗಿ ಸಾಗಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೆಲವೇ ಪ್ರದೇಶಗಳಲ್ಲಿ ಕಂಡುಬರುವ ಈ ಪ್ರಭೇದಗಳಿಗೆ ಸೌಥ್ ಏಷ್ಯಾದ ಗ್ರೇ ಮಾರ್ಕೆಟ್ ಅಲ್ಲಿ ಭಾರೀ ಬೇಡಿಕೆಯಿದೆ. ಏಷ್ಯಾ ಮತ್ತು ಕಲವು ಪೆಸಿಫಿಕ್ ಪ್ರಾಂತ್ಯಗಳಲ್ಲಿ ಕಾಣಸಿಗುವ ವಿರಳ ಹಲ್ಲಿ ಪ್ರಭೇದ ಇದಾಗಿದ್ದು, ಈಶಾನ್ಯ ಭಾರತ, ಭೂತಾನ್, ನೇಪಾಳ, ಬಾಂಗ್ಲಾದೇಶ, ಥಾಯ್ಲೆಂಡ್‌, ಫಿಲಿಪೈನ್ಸ್, ಮಲೇಷಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಏಷ್ಯಾದಾದ್ಯಂತ ಮತ್ತು ಪಶ್ಚಿಮ ನ್ಯೂ ಗಿನಿಯಾದಲ್ಲಿ ಈ ಜಾತಿ ಹಲ್ಲಿಗಳು ಹೆಚ್ಚಿವೆ.