ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಢಾಕಾ ಭದ್ರತಾ ಖಾತರಿ ನೀಡಿದರೆ ಮಾತ್ರ ಶೇಖ್ ಹಸೀನಾ ಬಾಂಗ್ಲಾಗೆ ವಾಪಸ್: ಭಾರತದ ಮಹತ್ವದ ನಿಲುವು

Sheikh Hasina: ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸಲು ಭಾರತ ಬಯಸುತ್ತದೆ, ಆದರೆ ಕೆಲವು ಷರತ್ತುಗಳ ಮೇಲೆ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ. ಬಾಂಗ್ಲಾದೇಶವು ಅವರನ್ನು ಭೂ ಗಡಿಯಲ್ಲಿ ಸೇನೆಯ ಸಕ್ರಿಯ ಭದ್ರತೆಯೊಂದಿಗೆ ಬರಮಾಡಿಕೊಳ್ಳಬೇಕು ಎಂದು ಭಾರತ ಬಯಸುತ್ತದೆ ಎಂದು ವರದಿ ಮಾಡಿದೆ.

ಬಾಂಗ್ಲಾಗೆ ಮರಳಲು ಮುಂದಾದ ಹಸೀನಾ: ಭದ್ರತೆಗೆ ಭಾರತ ಪಟ್ಟು

ಸಂಗ್ರಹ ಚಿತ್ರ -

Profile
Jyoti S Nov 14, 2026 12:11 PM

ನವದೆಹಲಿ/ಢಾಕಾ, ನ.14: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಡಿಸೆಂಬರ್‌ನಲ್ಲಿ ತಮ್ಮ ತಾಯ್ನಾಡಿಗೆ ಮರಳಲು ಇಚ್ಛೆ ವ್ಯಕ್ತಪಡಿಸಿರುವ ಬೆನ್ನಲ್ಲೇ, ಅವರ ಸುರಕ್ಷತೆ ಮತ್ತು ಕಾನೂನು ರಕ್ಷಣೆಯ ಕುರಿತು ಢಾಕಾ ಸರ್ಕಾರದಿಂದ ಸ್ಪಷ್ಟ ಖಾತರಿಗಳು ದೊರೆತ ನಂತರವಷ್ಟೇ ಅವರನ್ನು ವಾಪಸ್‌ ಕಳುಹಿಸಲು ಭಾರತ ಬಯಸಿದೆ ಎಂದು ವರದಿಯಾಗಿದೆ. ಶೇಖ್‌ ಹಸೀನಾ ಅವರನ್ನು ನವದೆಹಲಿಯಿಂದ ಕರೆದೊಯ್ಯಲು ಬಾಂಗ್ಲಾದೇಶ (Bangladesh) ಸರ್ಕಾರವು ವಿಶೇಷ ಮಿಲಿಟರಿ ವಿಮಾನವನ್ನು ಕಳುಹಿಸಬೇಕು ಅಥವಾ ಭೂ ಗಡಿಯಲ್ಲಿ ಸೇನೆಯ ಸಕ್ರಿಯ ಭದ್ರತೆಯೊಂದಿಗೆ ಅವರನ್ನು ಬರಮಾಡಿಕೊಳ್ಳಬೇಕು ಎಂದು ಭಾರತೀಯ ಅಧಿಕಾರಿಗಳು ಬಯಸಿರುವುದಾಗಿ ಬಿಬಿಸಿ ಬಾಂಗ್ಲಾ ವರದಿ ಮಾಡಿದೆ.

ಮರಣದಂಡನೆ ವಿರುದ್ಧ ಮೇಲ್ಮನವಿಗೆ ಹಸೀನಾ ಮನವಿ

2024ರ ಜುಲೈ-ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಶೇಖ್‌ ಹಸೀನಾ ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಂಡು ಭಾರತದಲ್ಲಿ ಆಶ್ರಯ ಪಡೆದರು. ನಂತರ ಅವರಿಗೆ, ಬಾಂಗ್ಲಾದೇಶ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು 2025ರ ನವೆಂಬರ್‌ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದೀಗ ಶೇಖ್‌ ಹಸೀನಾ ಅವರು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯದ ಮುಂದೆ ಶರಣಾಗಲು ಮುಂದಾಗಿರುವ ಹಿನ್ನೆಲೆಯಲ್ಲಿ, ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಹಾಗೂ 2024ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕವಾಗಿ ಮತ್ತು ಹೊಸದಾಗಿ ವಿಚಾರಣೆ ನಡೆಸಲು ಢಾಕಾ ಸರ್ಕಾರವು ಅಧಿಕೃತ ಭರವಸೆ ನೀಡಬೇಕು ಎಂದು ಭಾರತ ಷರತ್ತು ವಿಧಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಬಂಧನಕ್ಕೂ ಹೆದರಲ್ಲ, ಶೇಖ್‌ ಹಸೀನಾ ದೃಢ ನಿರ್ಧಾರ

ವರದಿಯ ಪ್ರಕಾರ, ಪ್ರಸ್ತುತ ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಶೇಖ್ ಹಸೀನಾ ಅವರ ಜೀವಕ್ಕೆ ಅಪಾಯವಿರುವ ಕಾರಣ, ಸಾಮಾನ್ಯ ಪ್ರಯಾಣ ದಾಖಲೆಗಳ ಬದಲಿಗೆ ಮಿಲಿಟರಿ ಭದ್ರತೆಯಲ್ಲಿ ಅವರ ಹಸ್ತಾಂತರ ನಡೆಯಬೇಕು ಎಂಬುದು ಭಾರತದ ಆಶಯವಾಗಿದೆ. ಒಂದು ವೇಳೆ ಬಾಂಗ್ಲಾದೇಶ ಸರ್ಕಾರವು ಈ ಭದ್ರತಾ ಮತ್ತು ನ್ಯಾಯಸಮ್ಮತ ವಿಚಾರಣೆಯ ಖಾತರಿಯನ್ನು ನೀಡಲು ನಿರಾಕರಿಸಿದರೆ, "ಶೇಖ್ ಹಸೀನಾ ಸ್ವತಃ ವಾಪಸ್ ಹೋಗಲು ಸಿದ್ಧರಿದ್ದರೂ ಢಾಕಾ ಸರ್ಕಾರವೇ ನೆಪಗಳನ್ನು ಹೇಳಿ ತಡೆಯುತ್ತಿದೆ" ಎಂಬ ರಾಜತಾಂತ್ರಿಕ ನಿಲುವನ್ನು ಜಗತ್ತಿನ ಮುಂದಿಡಲು ಭಾರತಕ್ಕೆ ಅವಕಾಶ ಸಿಗಲಿದೆ ಎಂದು ದೆಹಲಿಯ ಉನ್ನತ ಮೂಲಗಳು ವಿಶ್ಲೇಷಿಸಿವೆ.

ಈ ಕುರಿತು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ವರದಿಯ ಸತ್ಯಾಸತ್ಯತೆಯ ಬಗ್ಗೆ ಯಾವುದೇ ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. "ನಾನು ಅದರ ಬಗ್ಗೆ ಹೇಳಲು ಏನೂ ಇಲ್ಲ" ಎಂದು ಉತ್ತರಿಸಿದ್ದಾರೆ. ಹಸ್ತಾಂತರ ವಿಚಾರವು ಸಂಪೂರ್ಣವಾಗಿ ಕಾನೂನಾತ್ಮಕ ಪ್ರಕ್ರಿಯೆಯಾಗಿದ್ದು, ಅದನ್ನು ನಿಯಮಾವಳಿಗಳ ಪ್ರಕಾರವೇ ನಿರ್ವಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶ ಸರ್ಕಾರದ ಪ್ರತಿನಿಧಿಗಳು ಹಸೀನಾ ಅವರನ್ನು ಹಸ್ತಾಂತರ ಒಪ್ಪಂದದ ಅಡಿಯಲ್ಲಿಯೇ ವಾಪಸ್ ಪಡೆಯಲಾಗುವುದು ಎಂದು ಪ್ರತಿಪಾದಿಸಿದ್ದಾರೆ.