ʼʼಈ ವರ್ಷ ಸ್ವದೇಶಕ್ಕೆ ಮರಳುತ್ತೇನೆʼʼ: ಭಾರತದಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ
Awami League Party: 2024ರ ಆಗಸ್ಟ್‌ನಿಂಧ ಭಾರತದಲ್ಲಿರುವ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್ ಹಸೀನಾ ವರ್ಷಾಂತ್ಯದಲ್ಲಿ ಸ್ವದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಮರಣದಂಡನೆ ತೀರ್ಪು ಪ್ರಕಟವಾಗಿದ್ದರೂ ತವರಿಗೆ ತೆರಳುವುದಾಗಿ ಘೋಷಿಸಿರುವ ಅವರ ನಡೆ ಕುತೂಹಲ ಮೂಡಿಸಿದೆ.
ಶೇಕ್ ಹಸೀನಾ (ಸಂಗ್ರಹ ಚಿತ್ರ) -
ದೆಹಲಿ, ಜೂ. 28: ಸುಮಾರು 2 ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಶೀಘ್ರದಲ್ಲೇ ಸ್ವದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. 2024ರಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಮತ್ತು ಅವರ ಪಕ್ಷ ಅವಾಮಿ ಲೀಗ್ (Awami League) ವಿರುದ್ದ ದಂಗೆ ಭುಗಿಲೆದ್ದಾಗ ಅವರು ಆಶ್ರಯ ಕೋರಿ ಭಾರತಕ್ಕೆ ಬಂದಿದ್ದರು. ಅದಾದ ಬಳಿಕ ಅವರು ಇಲ್ಲೇ ವಾಸವಾಗಿದ್ದಾರೆ. ಎನ್‌ಡಿಟಿವಿಯೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಇದೀಗ ಅವರ ಈ ವರ್ಷವೇ ಬಾಂಗ್ಲಾದೇಶಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಮೇಲಿನ ಯಾವುದೇ ದಾಳಿಯು ಬಾಂಗ್ಲಾದೇಶದ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ. ರಾಷ್ಟ್ರವ್ಯಾಪಿ ಹೇರಿರುವ ನಿಷೇಧವನ್ನು ಧಿಕ್ಕರಿಸಿ ಜೂನ್ 23ರಂದು ಅವಾಮಿ ಲೀಗ್ ತನ್ನ 77ನೇ ಸ್ಥಾಪನಾ ದಿನವನ್ನು ಆಚರಿಸಿತ್ತು. ಇದರ ಬೆನ್ನಲ್ಲೇ ಶೇಖ್ ಹಸೀನಾ ತಾವು ಮರಳುವ ನಿರ್ಧಾರ ಪ್ರಕಟಿಸಿದ್ದು, ಅವರ ಈ ನಡೆ ಭಾರಿ ಕುತೂಹಲ ಮೂಡಿಸಿದೆ.
ಶೇಖ್ ಹಸೀನಾ ಹೇಳಿದ್ದೇನು?
ಬಾಂಗ್ಲಾದೇಶದಲ್ಲಿ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಅವರು ಸ್ವದೇಶಕ್ಕೆ ಮರಳುತ್ತಿರುವ ಔಚಿತ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ʼʼನಾನು ಬಾಂಗ್ಲಾದೇಶಕ್ಕೆ ಮರಳುತ್ತಿರುವುದು ನನ್ನ ವೈಯಕ್ತಿಕ ಮಹತ್ವಾಕಾಂಕ್ಷೆಯಿಂದಲ್ಲ. ಅದು ಬಾಂಗ್ಲಾದೇಶದ ಜನರ ರಾಜಕೀಯ ಹಕ್ಕುಗಳು, ಪ್ರಜಾಪ್ರಭುತ್ವದ ಪುನಃಸ್ಥಾಪನೆ, ಕಾನೂನುಬದ್ಧ ಆಳ್ವಿಕೆ ಮತ್ತು ನಮ್ಮ ವಿಮೋಚನಾ ಹೋರಾಟಕ್ಕೆ ಸಂಬಂಧಿಸಿದ್ದು. ನಾನು ಅಧಿಕಾರಕ್ಕಾಗಿ ರಾಜಕೀಯ ಮಾಡುವುದಿಲ್ಲ. ಬಾಂಗ್ಲಾದೇಶದ ಜನರ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಸೋನಾರ್ ಬಾಂಗ್ಲಾ ನಿರ್ಮಾಣದ ಕನಸನ್ನು ನನಸಾಗಿಸಲು ರಾಜಕೀಯ ಮಾಡುತ್ತಿದ್ದೇನೆʼʼ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಮರಳುತ್ತಾರಾ ಶೇಖ್ ಹಸೀನಾ?
ಮುಂದುವರಿದು, ʼʼನನ್ನ ವಿರುದ್ಧದ ತೀರ್ಪು ಕಾನೂನು ಬಾಹಿರ. ಇದು ಅಸಂವಿಧಾನಿಕ ಮತ್ತು ರಾಜಕೀಯ ಪ್ರೇರಿತ. ಕಾನೂನನ್ನು ಅವಾಮಿ ಲೀಗ್ ನಾಯಕರ ವಿರುದ್ಧ ಕಾರ್ಯ ನಿರ್ವಹಿಸಲಿರುವ ರಾಜಕೀಯ ಅಸ್ತ್ರವನ್ನಾಗಿ ಬಳಸಲಾಗಿದೆ. ಇಂತಹ ಪ್ರಯತ್ನ ಹಿಂದೆಯೂ ಮಾಡಲಾಗಿತ್ತು. ಅದು ಸಫಲವಾಗಿರಲಿಲ್ಲ. ಮುಂದೆಯೂ ಸಫಲವಾಗುವುದಿಲ್ಲ. ನಾನು ಸಾವಿಗೆ ಭಯಪಡುವುದಿಲ್ಲ. 1975ರಲ್ಲಿ ಹೆತ್ತವರನ್ನು, ಸಹೋದರನನ್ನು ಮತ್ತು ಬಹುತೇಕ ನನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡೆ. ನನ್ನ ಹತ್ಯೆಗೂ ಪ್ರಯತ್ನಿಸಿದರು. ನನ್ನ ವಿರುದ್ಧ ಹಲವು ಗೂಢಾಲೋಚನೆ ನಡೆದಿವೆ. ಆದರೆ ಈ ಎಲ್ಲ ಪ್ರಯತ್ನಗಳನ್ನು ಭೇದಿಸಿ ಬಾಂಗ್ಲಾದೇಶದ ಜನತೆಗಾಗಿ ಹೋರಾಡುತ್ತಿದ್ದೇನೆ. ಜನರ ಮತದಿಂದ ನಾನು 5 ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದೇನೆ. ದೇಶದ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆ. ನನ್ನ ಇಡೀ ಜೀವನವನ್ನು ಬಾಂಗ್ಲಾದೇಶದ ಜನರಿಗಾಗಿ, ಅವಾಮಿ ಲೀಗ್ ಪಕ್ಷಕ್ಕಾಗಿ ಮತ್ತು ದೇಶದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇನೆ. ವಿರೋಧಿಗಳ ಎಲ್ಲ ಸಂಚನ್ನು ಮೀರಿ ಈ ವರ್ಷ ನಾನು ಸ್ವದೇಶಕ್ಕೆ ಮರಳುತ್ತೇನೆʼʼ ಎಂದು ವಿವರಿಸಿದ್ದಾರೆ.
ಬಾಂಗ್ಲಾ ಹತ್ಯಾಕಾಂಡಕ್ಕೆ ಶೇಖ್ ಹಸೀನಾ ನೇರ ಹೊಣೆ- ಅಂತಾರಾಷ್ಟ್ರೀಯ ಟ್ರಿಬ್ಯುನಲ್ ಮಹತ್ವದ ಆದೇಶ
ಅವಾಮಿ ಲೀಗ್ ಮತ್ತೆ ಜನ ಬೆಂಬಲ ಪಡೆಯುವ ಲಕ್ಷಣ ಕಂಡುಬರುತ್ತಿದೆ. ಇದನ್ನು ರಾಜಕೀಯ ಯಶಸ್ಸಾಗಿ ಪರಿವರ್ತಿಸುವಷ್ಟು ಸಂಘಟನಾತ್ಮಕ ಶಕ್ತಿ ನಿಮ್ಮ ಪಕ್ಷಕ್ಕೆ ಇದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಹಸೀನಾ, ʼʼಅವಾಮಿ ಲೀಗ್ ಎನ್ನುವುದು ಕೇವಲ ಪೇಪರ್‌ನಲ್ಲಿರುವ ಸಂಸ್ಥೆಯಲ್ಲ. ಇದು ಬಾಂಗ್ಲಾದೇಶದ ಮಣ್ಣಿನಲ್ಲಿ ಬೇರು ಬಿಟ್ಟ ಪಕ್ಷ. ಬಾಂಗ್ಲಾದೇಶ ಜನರ ನಾಡಿಮಿಡಿತ ಎನಿಸಿಕೊಂಡಿದೆ. ಪಕ್ಷ 77 ವರ್ಷಗಳ ಪ್ರಯಾಣದಲ್ಲಿ ಹಲವು ಆಕ್ರಮಣಗಳನ್ನು ಎದುರಿಸಿದೆ. ಹಲವು ಬಾರಿ ಪಕ್ಷವನ್ನು ನಿಷೇಧಿಸಲಾಗಿದೆ. ಅದಾಗ್ಯೂ ಪ್ರತಿ ಬಾರಿಯೂ ಇನ್ನಷ್ಟು ಶಕ್ತಿಯೊಂದಿಗೆ ಮರಳಿದ್ದೇವೆ. ಈ ಬಾರಿಯೂ ಈ ಇತಿಹಾಸ ಪುನರಾವರ್ತನೆಯಾಗುತ್ತದೆ. ನಮ್ಮದೇ ದಾರಿ ಸೃಷಿಸಿಕೊಂಡು ಮರಳುತ್ತೇವೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಗಲಭೆಗಳ ನಂತರ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅವರಿಗೆ ಎಲ್ಲ ರೀತಿಯ ನೆರವು ನೀಡಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.