PM Modi: ಒಂದಾದ ಆನೆ-ಡ್ರ್ಯಾಗನ್; ಟ್ರಂಪ್‌ಗೆ ಎಚ್ಚರಿಕೆ ಕೊಟ್ರಾ ಮೋದಿ, ಕ್ಸಿ ಜಿನ್‌ಪಿಂಗ್?
ಅಮೆರಿಕದ ಸುಂಕದ ಬಿರುಗಾಳಿಯ ಮಧ್ಯೆ ಆನೆ ಮತ್ತು ಡ್ರ್ಯಾಗನ್ ಒಂದಾಗಿದೆ ಎನ್ನುವ ಸಂದೇಶವನ್ನು ಅಮೆರಿಕಕ್ಕೆ ರವಾನಿಸಿದ್ದಾರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್. ಚೀನಾದ ಬಂದರು ನಗರಿ ಟಿಯಾಂಜಿನ್‌ನಲ್ಲಿ ಭಾನುವಾರ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಭೇಟಿಯಾಗಿ ಪರಸ್ಪರ ನಂಬಿಕೆ ಮತ್ತು ಗೌರವದೊಂದಿಗೆ ಸಂಬಂಧ ಮುಂದುವರಿಸಲು ಮಾರ್ಗದರ್ಶನ ಮಾಡುವಂತೆ ಕೇಳಿಕೊಂಡರು.

-

ಬೀಜಿಂಗ್: ರಷ್ಯಾದ ತೈಲ ಖರೀದಿಯನ್ನು (Russian oil trade) ವಿರೋಧಿಸಿ ಅಮೆರಿಕ (america) ವಿಧಿಸುತ್ತಿರುವ ಸುಂಕ ಬೆದರಿಕೆಗೆ (US Tariff threat) ಭಾರತ ಬಗ್ಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಭಾರತಕ್ಕೆ ಶೇ. 50ರಷ್ಟು ಸುಂಕ ವಿಧಿಸಿದ್ದಾರೆ. ಆದರೂ ಭಾರತ ಇದನ್ನು ಸ್ವೀಕರಿಸುವುದಾಗಿ ಹೇಳಿ ಅಮೆರಿಕದೊಂದಿಗೆ ಮಾತುಕತೆಯನ್ನು ಮುಂದುವರಿಸಿದೆ. ಈವರೆಗೆ ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ. ಈ ನಡುವೆಯೇ ಇತ್ತೀಚೆಗೆ ಜಪಾನ್ (Japan)ಗೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ಚೀನಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಆನೆ ಮತ್ತು ಡ್ರ್ಯಾಗನ್ ಒಂದಾಗಿವೆ ಎನ್ನುವ ಸ್ಪಷ್ಟ ಸಂದೇಶವನ್ನು ಟ್ರಂಪ್‌ಗೆ ಕಳುಹಿಸಿದ್ದಾರೆ.
ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿ, ಪರಸ್ಪರ ನಂಬಿಕೆ ಮತ್ತು ಗೌರವವು ಭಾರತ-ಚೀನಾ ಸಂಬಂಧಗಳಿಗೆ ಆಧಾರವಾಗಬೇಕು ಎಂದು ಹೇಳಿದರು.
ಚೀನಾದ ಬಂದರು ನಗರಿ ಟಿಯಾಂಜಿನ್‌ನಲ್ಲಿ ಭಾನುವಾರ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಭೇಟಿಯಾಗಿ ಹಸ್ತಲಾಘವದೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ಪ್ರಾರಂಭಿಸಿದರು.
ಇದು ಸುದೀರ್ಘ ಕಾಲದಿಂದ ಪ್ರತಿಸ್ಪರ್ಧಿಗಳಾಗಿರುವ ಎರಡು ರಾಷ್ಟ್ರಗಳ ನಡುವಿನ ಹೊಂದಾಣಿಕೆಯ ಹೆಜ್ಜೆಯಾಗಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಟ ಸಂದೇಶವನ್ನು ಕಳುಹಿಸಲಾಗಿದೆ. ಅಮೆರಿಕದ ಸುಂಕದ ದಾಳಿಯು ನವದೆಹಲಿ ಮತ್ತು ಬೀಜಿಂಗ್‌ನೊಂದಿಗಿನ ಸಂಬಂಧವನ್ನು ವಾಷಿಂಗ್ಟನ್ ಮತ್ತೆ ಜೋಡಿಸಿದೆ.
ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಗಡಿ ಬಿಕ್ಕಟ್ಟಿನ ಕುರಿತು ವಿಶೇಷ ಪ್ರತಿನಿಧಿಗಳ ನಡುವಿನ ಒಪ್ಪಂದದಿಂದ ಕೈಲಾಸ ಮಾನಸ ಸರೋವರ ಯಾತ್ರೆಯ ಪುನರಾರಂಭ ಮತ್ತು ಎರಡೂ ದೇಶಗಳ ನಡುವಿನ ನೇರ ವಿಮಾನಗಳ ಪುನಃಸ್ಥಾಪನೆಯ ಕುರಿತು ಚರ್ಚಿಸಲಾಯಿತು.
ಎರಡೂ ದೇಶಗಳ 2.8 ಶತಕೋಟಿ ಜನರ ಹಿತಾಸಕ್ತಿಗಳು ನಮ್ಮ ಸಹಕಾರದೊಂದಿಗೆ ಸಂಬಂಧ ಹೊಂದಿವೆ. ಇದು ಇಡೀ ಮಾನವೀಯತೆಯ ಕಲ್ಯಾಣಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ ಎಂದ ಮೋದಿ ತಿಳಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯವು, ಭಾರತ ಮತ್ತು ಚೀನಾ ಎರಡೂ ಕಾರ್ಯತಂತ್ರದ ಸ್ವಾಯತ್ತತೆಯನ್ನು ಅನುಸರಿಸುತ್ತವೆ. ಈ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಮೂರನೇ ದೇಶದ ದೃಷ್ಟಿಯಲ್ಲಿ ನೋಡಬಾರದು ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ತಿಳಿಸಿದೆ.
ಭಯೋತ್ಪಾದನೆ, ನ್ಯಾಯಯುತ ವ್ಯಾಪಾರದಂತಹ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಸಾಮಾನ್ಯ ನೆಲೆಯನ್ನು ವಿಸ್ತರಿಸುವುದು ಅಗತ್ಯವೆಂದು ಉಭಯ ನಾಯಕರು ಪರಿಗಣಿಸಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ನವದೆಹಲಿಯನ್ನು ಬೀಜಿಂಗ್‌ನ ಪ್ರಮುಖ ಸ್ನೇಹಿತ ಎಂದು ಕರೆದರು. ಎರಡೂ ರಾಷ್ಟ್ರಗಳು ತಮ್ಮ ಸಂಬಂಧವನ್ನು ಕಾರ್ಯತಂತ್ರ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ನಿರ್ವಹಿಸಬೇಕು ಎಂದು ಹೇಳಿದ ಅವರು, ಗಡಿ ವಿಷಯವು ಒಟ್ಟಾರೆ ಚೀನಾ ಮತ್ತು ಭಾರತ ಸಂಬಂಧವನ್ನು ಹದಗೆಡಿಸಲು ಬಿಡಬಾರದು ಎಂದರು.
ಎರಡೂ ರಾಷ್ಟ್ರಗಳನ್ನು ಪ್ರತಿಸ್ಪರ್ಧಿಗಳ ಬದಲಾಗಿ ಪಾಲುದಾರರಾಗಿ ನೋಡಬೇಕು. ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ನಡುವಿನ ಸಂಬಂಧಗಳು ಭರವಸೆ, ಸ್ಥಿರ ಮತ್ತು ದೂರಗಾಮಿಯಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಪರಿಸ್ಥಿತಿ ಅಸ್ಥಿರ ಮತ್ತು ಅಸ್ತವ್ಯಸ್ತವಾಗಿದೆ. ಚೀನಾ ಮತ್ತು ಭಾರತ ಪೂರ್ವದಲ್ಲಿ ಎರಡು ಪ್ರಾಚೀನ ನಾಗರಿಕತೆಗಳು. ನಾವು ವಿಶ್ವದ ಎರಡು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಮತ್ತು ನಾವು ಜಾಗತಿಕ ದಕ್ಷಿಣದ ಅತ್ಯಂತ ಹಳೆಯ ಸದಸ್ಯರು ಎಂದು ಹೇಳಿದ ಅವರು, ಸ್ನೇಹಿತರಾಗುವುದು ಉತ್ತಮ. ಎರಡು ನೆರೆಹೊರೆಯವರು ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಸೇರುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.
ರಷ್ಯಾ ಅಧ್ಯಕ್ಷರೊಂದಿಗೆ ಭೇಟಿ
ಪ್ರಧಾನಿ ಮೋದಿ ಸೋಮವಾರ ಟಿಯಾಂಜಿನ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ನಿರಾಕರಿಸಿದ್ದರಿಂದ ಅಮೆರಿಕ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಿದ ಬಳಿಕ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ.
ಇದನ್ನೂ ಓದಿ: Heavy Rain: ಉತ್ತರಾಖಂಡದಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ಭಾರತ-ಚೀನಾ ನಡುವಿನ ಸಂಪರ್ಕ ಸೇತುವೆ
ವಾಷಿಂಗ್ಟನ್‌ನ ದಂಡನಾತ್ಮಕ ಸುಂಕಗಳಿಗೆ ಮುಂಚೆಯೇ ಭಾರತವು ಹೂಡಿಕೆ ಮತ್ತು ತಂತ್ರಜ್ಞಾನದ ಮೂಲವಾಗಿ ಚೀನಾದೊಂದಿಗೆ ವ್ಯಾಪಾರವನ್ನು ವಿಸ್ತರಿಸಲು ಪ್ರಯತ್ನಿಸುತ್ತಿತ್ತು. ಯುಎಸ್- ಭಾರತ ಸಂಬಂಧಗಳು ಕುಸಿಯುತ್ತಿರುವುದರಿಂದ ಬೀಜಿಂಗ್‌ನೊಂದಿಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನವದೆಹಲಿಗೆ ಹೊಸ ದಾರಿ ಸಿಕ್ಕಂತಾಗಿದೆ ಎನ್ನುತ್ತಾರೆ ವಿಶ್ಲೇಷಕರು.