ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಪ್ರವಾಸಿಗರ ಸುರಕ್ಷಿತ ರವಾನೆಗೆ ಟಿಕೆಟ್ ದರ ಹೆಚ್ಚಿಸದಿರಲು ವೈಮಾನಿಕ ಕಂಪನಿಗಳಿಗೆ ಸೂಚನೆ- ಪ್ರಲ್ಹಾದ್‌ ಜೋಶಿ

Pahalgam Terror Attack: ಭಯೋತ್ಪಾದನಾ ಕೃತ್ಯ ನಡೆದ ಸ್ಥಳದಿಂದ ಹಾಗೂ ಕಾಶ್ಮೀರದ ಇತರೆ ಪ್ರವಾಸಿ ತಾಣಗಳಿಂದ ಪ್ರವಾಸಿಗರ ರಕ್ಷಣಾ ಕಾರ್ಯ ನಡೆದಿದೆ. ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಹೆಚ್ಚಿನ ಟಿಕೆಟ್ ದರ ವಿಧಿಸದಿರುವಂತೆ ವೈಮಾನಿಕ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ.

ಟಿಕೆಟ್ ದರ ಹೆಚ್ಚಿಸದಿರಲು ವೈಮಾನಿಕ ಕಂಪನಿಗಳಿಗೆ ಸೂಚನೆ: ಪ್ರಲ್ಹಾದ್‌‌ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Apr 23, 2025 2:58 PM

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ವೈಮಾನಿಕ ಕಂಪನಿಗಳು ಏರ್‌ ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಈಗಾಗಲೇ ಕಾಶ್ಮೀರದ ಪ್ರವಾಸಿ ತಾಣಗಳಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಮೃತರ ಶವಗಳನ್ನು ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಭಯೋತ್ಪಾದನಾ ಕೃತ್ಯ ನಡೆದ ಸ್ಥಳದಿಂದ ಹಾಗೂ ಕಾಶ್ಮೀರದ ಇತರೆ ಪ್ರವಾಸಿ ತಾಣಗಳಿಂದ ಪ್ರವಾಸಿಗರ ರಕ್ಷಣಾ ಕಾರ್ಯ ನಡೆದಿದೆ. ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಹೆಚ್ಚಿನ ಟಿಕೆಟ್ ದರ ವಿಧಿಸದಿರುವಂತೆ ವೈಮಾನಿಕ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ವಿಮಾನಯಾನ ಸಚಿವರೊಂದಿಗೆ ಚರ್ಚೆ

ಏರ್ ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ನಾಗರೀಕ ವಿಮಾನಯಾನ ಸಚಿವರೊಂದಿಗೂ ಮಾತನಾಡಿದ್ದೇನೆ. ಏರ್ ಲೈನ್ ಟಿಕೆಟ್ ದರದ ಕುರಿತು ಗಮನಹರಿಸಲು ಡಿಜಿಸಿಎಗೂ ಸೂಚನೆ ನೀಡಿದ್ದೇನೆ ಎಂದು ಸಚಿವ ಜೋಶಿ ತಿಳಿಸಿದರು.

ಕನ್ನಡಿಗರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ

ಕಾಶ್ಮೀರದ ಪ್ರವಾಸಿ ತಾಣಗಳಿಂದ ಕನ್ನಡಿಗರು ಸೇರಿದಂತೆ ಪ್ರವಾಸಿಗರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಜೋಶಿ ತಿಳಿಸಿದರು.

ಶಾಂತಿ ನೆಲೆಸಲು ಕಟ್ಟುನಿಟ್ಟಿನ ಕ್ರಮ

ಜಮ್ಮು-ಕಾಶ್ಮೀರದಲ್ಲಿ 2019ರಿಂದ ಇತ್ತೀಚಿನ ವರ್ಷಗಳಲ್ಲಿ ಶಾಂತಿ ನೆಲೆಸಿದ್ದನ್ನು ಸಹಿಸದೆ ಹೇಡಿಗಳು ಇಂಥ ಹೇಯ ಕೃತ್ಯವೆಸಗಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಉತ್ತರ ಕೊಡಲಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Pahalgam Attack: ಪಹಲ್ಗಾಮ್ ದಾಳಿಯ ಮೃತರು ಮತ್ತು ಗಾಯಾಳುಗಳ ಪಟ್ಟಿ ಬಿಡುಗಡೆ

ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿದ್ದ ನಿರ್ಣಯ, ಕಾರ್ಯಗಳು ಯಶಸ್ವಿಗೊಳ್ಳುತ್ತಿರುವುದನ್ನು ಸಹಿಸಲಾಗದೆ ಭಯೋತ್ಪಾದಕರು ಹೀಗೆ ಪ್ರವಾಸಿಗರ ಮೇಲೆ ಹೇಡಿತನದ ಕೃತ್ಯ ಎಸಗಿದ್ದಾರೆ ಎಂದು ತೀವ್ರವಾಗಿ ಖಂಡಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ಈ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆ ಹತ್ತಿಕ್ಕಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿ ಶಾಂತಿ ಸ್ಥಾಪನೆಗೆ ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.