ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಹಡಗುಗಳು ಹೊರ್ಮುಜ್‌ ಟೋಲ್‌ ಪಾವತಿಸಬೇಕಾಗಿಲ್ಲ: ಮಿತ್ರರಾಷ್ಟ್ರಕ್ಕೆ ಇರಾನ್‌ ಅಭಯ

Hormuz Blockade: ಹೊರ್ಮುಜ್‌ ಜಲಸಂಧಿಯಲ್ಲಿ ಸಾಗುವ ಭಾರತದ ಎಲ್ಲ ಹಡಗುಗಳ ಸುರಕ್ಷತೆ ಖಚಿತಪಡಿಸುವುದಾಗಿ ಇರಾನ್‌ ತಿಳಿಸಿದೆ. ಜತೆಗೆ ಮಿತ್ರರಾಷ್ಟ್ರ ಭಾರತ ಹೊರ್ಮುಜ್‌ ಟೋಲ್‌ ಪಾವತಿಸಬೇಕಾಗಿಲ್ಲ ಎಂದೂ ಹೇಳಿದೆ. ಭಾರತದಲ್ಲಿರುವ ಇರಾನ್‌ ರಾಯಭಾರಿ ಮೊಹಮ್ಮದ್‌ ಫತಾಲಿ ಈ ಬಗ್ಗೆ ಭರವಸೆ ನೀಡಿದ್ದಾರೆ.

ಹೊರ್ಮುಜ್‌ ಜಲಸಂಧಿ ಮತ್ತು ಮೊಹಮ್ಮದ್‌ ಫತಾಲಿ (ಸಂಗ್ರಹ ಚಿತ್ರ)

ದೆಹಲಿ, ಏ. 13: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಅಮೆರಿಕ-ಇಸ್ರೇಲ್‌-ಇರಾನ್‌ ಸಂಧಾನ ಯತ್ನ ಮುರಿದು ಬಿದ್ದಿದೆ. ಮೂರೂ ರಾಷ್ಟ್ರಗಳು ಹೊಂದಾಣಿಕೆ ಮಾಡಿಕೊಳ್ಳಲು ತಯಾರಿಲ್ಲ. ಪಾಕಿಸ್ತಾನದಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ʼʼಸರಿಯಾದ ಸಮಯದಲ್ಲಿ ಇರಾನ್‌ ಅನ್ನು ಮುಗಿಸುತ್ತೇವೆ. ಅಮೆರಿಕ ನೌಕಾಪಡೆ ಉದ್ದೇಶಪೂರ್ವಕವಾಗಿ ಹೊರ್ಮುಜ್‌ ಜಲಸಂಧಿಯನ್ನು ಪ್ರವೇಶಿಸುವ ಎಲ್ಲ ಅಂತಾರಾಷ್ಟ್ರೀಯ ನೌಕೆಗಳನ್ನು ತಡೆಯುತ್ತದೆ (Strait of Hormuz). ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಯಾವುದೇ ಹಡಗುಗಳು ಇರಾನ್‌ಗೆ ಶುಲ್ಕವನ್ನು ಪಾವತಿಸಿದರೆ ಅವಕ್ಕೆ ನಿಷೇಧ ವಿಧಿಸಲಾಗುತ್ತದೆʼʼ ಎಂದು ಬೆದರಿಕೆ ಒಡ್ಡಿದ್ದಾರೆ (Hormuz Blockade). ಇದು ಮತ್ತೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆಯ ಜಾಲವನ್ನು ಅಡ್ಡಿಪಡಿಸುವ ಆತಂಕ ಮೂಡಿಸಿದೆ. ಇದೆಲ್ಲದರ ನಡುವೆ ಭಾರತಕ್ಕೆ ಇರಾನ್‌ ಕಡೆಯಿಂದ ಗುಡ್‌ನ್ಯೂಸ್‌ ಸಿಕ್ಕಿದೆ. ಈ ದಾರಿಯಲ್ಲಿ ಭಾರತದ ಹಡಗುಗಳ ಸುರಕ್ಷತೆ ಖಚಿತಪಡಿಸುವುದಾಗಿ ತಿಳಿಸಿದೆ.

ಭಾರತದಲ್ಲಿರುವ ಇರಾನ್‌ ರಾಯಭಾರಿ ಮೊಹಮ್ಮದ್‌ ಫತಾಲಿ ಈ ಬಗ್ಗೆ ಭರವಸೆ ನೀಡಿದ್ದಾರೆ. ಆಯಕಟ್ಟಿನ ನಿರ್ಣಾಯಕ ಈ ಜಲಮಾರ್ಗದ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಾಗಟವನ್ನು ಖಚಿತಪಡಿಸಿಕೊಳ್ಳಲು ಎರಡೂ ದೇಶಗಳ ನಡುವೆ ನಿರಂತರ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಜತೆಗೆ ಭಾರತ ಹೊರ್ಮುಲ್‌ ಟೋಲ್‌ ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮೊಹಮ್ಮದ್‌ ಫತಾಲಿ ಹೇಳಿಕೆ:



ಇರಾನ್‌ ಹೇಳಿದ್ದೇನು?

ಭಾರತದ ಜತೆ ಇರಾನ್‌ ಸಮನ್ವಯ ಸಾಧಿಸುತ್ತಿದೆ ಎಂದು ಮೊಹಮ್ಮದ್‌ ಫತಾಲಿ ತಿಳಿಸಿದ್ದಾರೆ. ʼʼಭಾರತ ಸರ್ಕಾರದ ಜತೆಗೆ ಇರಾನ್‌ ಉತ್ತಮ ಸಂಬಂಧ ಹೊಂದಿದೆ. ಭಾರತೀಯ ಹಡಗುಗಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಿದ್ದೇವೆ. ಈಗಾಗಲೇ ನಮ್ಮ ವಿದೇಶಾಂಗ ಸಚಿವರು ಇರಾನ್‌ನ 5 ಮಿತ್ರ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಘೋಷಿಸಿದ್ದಾರೆʼʼ ಎಂಬುದಾಗಿ ವಿವರಿಸಿದ್ದಾರೆ. ಭಾರತದ ಜತೆ ರಷ್ಯಾ, ಚೀನಾ, ಇರಾಕ್‌ ಮತ್ತು ಪಾಕಿಸ್ತಾನ ಮಿತ್ರರಾಷ್ಟ್ರವಾಗಿದ್ದು, ಹೊರ್ಮುಜ್‌ ಜಲಸಂಧಿ ಮೂಲಕ ಹಡಗುಗಗಳ ಸಾಗಾಟಕ್ಕೆ ಅನುಮತಿ ನೀಡುವುದಾಗಿ ಇರಾನ್‌ ಹೇಳಿದೆ.

''ಯುದ್ಧ ಮುಗಿದಿಲ್ಲʼʼ: ಕದನ ವಿರಾಮ ಒಪ್ಪಂದದ ಬೆನ್ನಲ್ಲೇ ಇರಾನ್‌ನಿಂದ ಅಚ್ಚರಿಯ ಹೇಳಿಕೆ

ಭಾರತಕ್ಕೆ ಧನ್ಯವಾದ

ʼʼಭಾರತ ಮತ್ತು ಇರಾನ್‌ ಸಮಾನ ಮನಸ್ಥಿತಿ ಹೊಂದಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ನಾವು ಉತ್ತಮ ಸಂಬಂಧ ಹೊಂದಿದ್ದೇವೆ. ಹೊರ್ಮುಜ್‌ ಜಲಸಂಧಿಯ ಮೂಲಕ ಭಾರತದ ಹಡಗು ಸಾಗಾಟಕ್ಕೆ ಅನುಮತಿ ಮುಂದುವರಿಯಲಿದೆʼʼ ಎಂದು ಇರಾನ್‌ ಹೇಳಿದೆ. ಜತೆಗೆ ನೆರವಿಗೆ ನಿಂತ ಭಾರತಕ್ಕೆ ಧನ್ಯವಾದ ತಿಳಿಸಿದೆ.

ಷರತ್ತು ವಿಧಿಸಿದ ಇರಾನ್‌

ತಮ್ಮ ಬೇಡಿಕೆಯನ್ನು ಅಮೆರಿಕ ಪರಿಗಣಿಸಿದರೆ ಮಾತುಕತೆ ಮುಂದುವರಿಯಲಿದೆ ಎಂದು ಇರಾನ್‌ ಹೇಳಿದೆ. ಆ ಮೂಲಕ ಕದನ ವಿರಾಮ ಸಾಧ್ಯತೆಯ ಬಾಗಿಲು ಸಂಪೂರ್ಣ ಮುಚ್ಚಿಲ್ಲ ಎನ್ನುವ ಸಂದೇಶ ರವಾನಿಸಿದೆ. ಇರಾನ್ ಬಂದರು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲ ಹಡಗುಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಬೆಳಗ್ಗೆ 10 ಗಂಟೆಗೆ (ಭಾರತೀಯ ಸಮಯ ಸಂಜೆ 7.30) ದಿಗ್ಬಂಧನ ಜಾರಿಗೆ ಬರಲಿದೆ ಎಂದು ಅಮೆರಿಕ ಎಚ್ಚರಿಸಿದ ಹಿನ್ನೆಲೆಯಲ್ಲಿ ಸದ್ಯ ಜಗತ್ತೇ ಮುಂದಿನ ನಡೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ.

ಯಾವುದೇ ಗಲ್ಫ್ ಬಂದರು ಸುರಕ್ಷಿತವಾಗಿರೋದಿಲ್ಲ: ಅಮೆರಿಕದ ದಿಗ್ಬಂಧನಕ್ಕೂ ಮೊದಲೇ ಇರಾನ್ ಎಚ್ಚರಿಕೆ

7 ವರ್ಷಗಳ ಬಳಿಕ ಭಾರತಕ್ಕೆ ಬಂದ ಇರಾನ್‌ ತೈಲ ಕಾರ್ಗೊ

ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಇರಾನಿನ ತೈಲವನ್ನು ಸಾಗಿಸುವ ಎರಡು ದೊಡ್ಡ ಕಚ್ಚಾ ವಾಹಕಗಳು (VLCC) ಭಾರತವನ್ನು ತಲುಪಿವೆ. ಇದು ಸುಮಾರು 7 ವರ್ಷಗಳ ಬಳಿಕ ಭಾರತಕ್ಕೆ ಬಂದ ಇರಾನ್‌ನ ಕಚ್ಚಾ ತೈಲ ಹಡಗು ಎನ್ನುವುದು ವಿಶೇಷ. ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ಕದನ ವಿರಾಮ ಮಾತುಕತೆ ವಿಫಲವಾದ ನಂತರ ಹೊರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಎಲ್ಲ ಇರಾನಿನ ಹಡಗುಗಳನ್ನು ನಿರ್ಬಂಧಿಸಲು ಅಮೆರಿಕ ಕ್ರಮ ಕೈಗೊಳ್ಳುವ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ಸಂಭವಿಸಿದೆ.

ಇರಾನ್ ಧ್ವಜ ಹೊತ್ತ VLCC ಗುಜರಾತ್‌ನ ಸಿಕ್ಕಾ ಬಂದರಿಗೆ ಮತ್ತು ಕುರಾಕೊ ಧ್ವಜ ಹೊತ್ತ ಟ್ಯಾಂಕರ್ ಜಯಾ ಒಡಿಶಾದ ಪ್ಯಾರದೀಪ್ ಬಂದರಿಗೆ ಆಗಮಿಸಿದೆ. ಪ್ರತಿಯೊಂದು VLCC ಸಾಮಾನ್ಯವಾಗಿ ಸುಮಾರು ಎರಡು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಾಗಾಟ ಸಾಮರ್ಥ್ಯ ಹೊಂದಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author