ಪತ್ರಕರ್ತೆ ಜೊತೆ ಜಮ್ಮು ಕಾಶ್ಮೀರ ಸಿಎಂ 2 ನೇ ವಿವಾಹ; ನಿಧಿ ರಜ್ದಾನ್ ಕೈ ಹಿಡಿದ ಒಮರ್ ಅಬ್ದುಲ್ಲಾ
CM Omar Abdullah 2nd Marriage: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹಿರಿಯ ಪತ್ರಕರ್ತೆ ಹಾಗೂ ಮಾಧ್ಯಮ ನಿರೂಪಕಿ ನಿಧಿ ರಜ್ದಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (CM Omar Abdullah) ಅವರು ಹಿರಿಯ ಪತ್ರಕರ್ತೆ ಹಾಗೂ ಮಾಧ್ಯಮ ನಿರೂಪಕಿ ನಿಧಿ ರಜ್ದಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರ (ಅಕ್ಟೋಬರ್ 31, 2026) ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಿಧಿ ರಜ್ದಾನ್ ಅವರೊಂದಿಗಿನ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ತಮ್ಮ ವಿವಾಹದ ಮಾಹಿತಿ ಹಂಚಿಕೊಂಡ ಅವರು, "ನಿನ್ನೆ ಒಂದು ಹೊಸ ಪ್ರಯಾಣ ಆರಂಭವಾಗಿದೆ " ಎಂದು ಬರೆದು ನಿಧಿಯವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಶ್ರೀನಗರದಲ್ಲಿ ನಡೆದ ಅತ್ಯಂತ ಖಾಸಗಿ ಸಮಾರಂಭದಲ್ಲಿ ಈ ಇಬ್ಬರೂ ಗಣ್ಯರು ಪರಸ್ಪರ ಉಂಗುರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.ರಾಜಕೀಯ ಮತ್ತು ಮಾಧ್ಯಮ ರಂಗದ ಇಬ್ಬರು ಪ್ರಮುಖ ವ್ಯಕ್ತಿಗಳು ಒಂದಾಗಿರುವ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು, ಗಣ್ಯರು ಮತ್ತು ನೆಟ್ಟಿಗರು ನವದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ.
A new journey began yesterday 💍@Nidhi https://t.co/BXbdLq2d1H
— Omar Abdullah (@OmarAbdullah) October 31, 2026
ಒಮರ್ ಅಬ್ದುಲ್ಲಾ ಅವರು ಈ ಹಿಂದೆ 1994 ರಲ್ಲಿ ಪಾಯಲ್ ನಾಥ್ ಅವರನ್ನು ವಿವಾಹವಾಗಿದ್ದರು. ಈ ಜೋಡಿಗೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ದಾಂಪತ್ಯ ಕಲಹದಿಂದಾಗಿ ಈ ಜೋಡಿ 2009 ರಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿತ್ತು. ಮದುವೆಯಾದ 17 ವರ್ಷಗಳ ಬಳಿಕ, ಅಂದರೆ ಸೆಪ್ಟೆಂಬರ್ 2011 ರಲ್ಲಿ ಒಮರ್ ಅಬ್ದುಲ್ಲಾ ತಾವು ಪತ್ನಿಯಿಂದ ಅಧಿಕೃತವಾಗಿ ಬೇರ್ಪಟ್ಟಿರುವುದಾಗಿ ಪ್ರಕಟಿಸಿದ್ದರು.
ಒಮರ್ ಅಬ್ದುಲ್ಲಾ ಅವರು ಕೌಟುಂಬಿಕ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ವಿಚ್ಛೇದನಕ್ಕಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಆರಂಭದಲ್ಲಿ ಅವರ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯಗಳು ವಜಾಗೊಳಿಸಿದ್ದವು. ಅಂತಿಮವಾಗಿ ಇಬ್ಬರೂ ಪರಸ್ಪರ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಂಡ ನಂತರ, ಜುಲೈ 31, 2026 ರಂದು ಸುಪ್ರೀಂ ಕೋರ್ಟ್ ಸಂವಿಧಾನದ ವಿಧಿ 142 ರ ಅಡಿಯಲ್ಲಿ ಈ ದಂಪತಿಯ 32 ವರ್ಷಗಳ ಹಳೆಯ ವೈವಾಹಿಕ ಜೀವನವನ್ನು ಅಧಿಕೃತವಾಗಿ ಕೊನೆಗೊಳಿಸಿ ವಿಚ್ಛೇದನ ಮಂಜೂರು ಮಾಡಿತು.