ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೃಣಮೂಲ ಕಾಂಗ್ರೆಸ್‌ನಂತೆ ವಿಭಜನೆಯಾಗುತ್ತಾ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ? ಉತ್ತರ ಪ್ರದೇಶ ಸಚಿವರು ನೀಡಿದ ಸೂಚನೆ ಏನು?

Samajwadi Party Crisis: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (SP)ಯಲ್ಲಿ ವಿಭಜನೆಯ ಊಹಾಪೋಹಗಳು ಕೇಳಿಬಂದಿವೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದಾರೆ ಎಂದು ಸಚಿವ ಓಂ ಪ್ರಕಾಶ್ ರಾಜಭರ್ ಹೇಳಿದ್ದಾರೆ.

ಟಿಎಂಸಿಯಂತೆ ವಿಭಜನೆಯಾಗುತ್ತಾ ಅಖಿಲೇಶ್ ನೇತೃತ್ವದ ಎಸ್‌ಪಿ?

ಸಾಂದರ್ಭಿಕ ಚಿತ್ರ -

Priyanka P
Priyanka P Jun 17, 2026 6:31 PM

ಲಖನೌ, ಜೂ. 17: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಲ್ಲಿ (TMC) ಉಂಟಾಗಿರುವ ಒಳಜಗಳ ಮತ್ತು ಮಹಾರಾಷ್ಟ್ರದ ಶಿವಸೇನೆ (ಯುಬಿಟಿ)ಯಲ್ಲಿ ಸಂಭವನೀಯ ವಿಭಜನೆಯ ಕುರಿತ ಚರ್ಚೆಗಳ ನಡುವೆಯೇ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ನೇತೃತ್ವದ ಸಮಾಜವಾದಿ ಪಕ್ಷ (SP)ದಲ್ಲೂ ಬಿರುಕು ಮೂಡಿದೆ ಎಂಬ ಊಹಾಪೋಹ ಸದ್ದು ಮಾಡುತ್ತಿದೆ. ರಾಜ್ಯ ಸಚಿವ ಹಾಗೂ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ಈ ಬಗ್ಗೆ ಸುಳಿವು ನೀಡಿ, ʼʼವಿರೋಧ ಪಕ್ಷ ಎಸ್‌ಪಿಯ ಹಿರಿಯ ನಾಯಕರು ಪಕ್ಷ ತೊರೆಯುವ ಸಾಧ್ಯತೆ ಇದೆʼʼ ಎಂದು ಹೇಳಿದ ನಂತರ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ಬಂದಿದೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಭ್ರಷ್ಟಾಚಾರ ಪ್ರಕರಣಗಳ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದಾರೆ ಎಂದು ಓಂ ಪ್ರಕಾಶ್ ರಾಜಭರ್ ಹೇಳಿದ್ದಾರೆ. ಜತೆಗೆ ಹಲವು ನಾಯಕರು ಪಕ್ಷ ಬದಲಾಯಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ರಾಜ್‌ಭರ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಸಮಾಜವಾದಿ ಪಕ್ಷದಲ್ಲಿ ಶೀಘ್ರದಲ್ಲೇ ದೊಡ್ಡ ವಿಭಜನೆ ಸಂಭವಿಸಲಿದೆ. ರಾಮ್ ಗೋಪಾಲ್ ಯಾದವ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಗಣಿಗಾರಿಕೆ ಹಗರಣ ಮತ್ತು ಗೊಮತಿ ರಿವರ್ ಫ್ರಂಟ್ ಹಗರಣದ ಹಿಂದಿನ ಪ್ರಮುಖ ಸೂತ್ರಧಾರ ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಕಾನೂನಿನ ಬಿಗಿ ಕ್ರಮಗಳ ಒತ್ತಡ ಹೆಚ್ಚುತ್ತಿರುವಂತೆ, ಸಮಾಜವಾದಿ ಪಕ್ಷದಲ್ಲಿ ಆತಂಕವೂ ಹೆಚ್ಚುತ್ತಿದೆ” ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ʼʼಮಹಾರಾಷ್ಟ್ರ ಮತ್ತು ಬಂಗಾಳವನ್ನು ಮರೆತುಬಿಡಿ. ಉತ್ತರ ಪ್ರದೇಶದಲ್ಲಿ ಇಡೀ ಎಸ್‌ಪಿ ಬಿಜೆಪಿಗೆ ಸೇರಲು ಸಿದ್ಧವಾಗಿದೆʼʼ ಎಂದು ರಾಜ್‌ಭರ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಓಂ ಪ್ರಕಾಶ್ ರಾಜಭರ್ ಪೋಸ್ಟ್:



ಅಖಿಲೇಶ್ ಯಾದವ್ ವಿಡಿಯೊ:



ಅಖಿಲೇಶ್ ಯಾದವ್ ಹೇಳಿದ್ದೇನು?

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಚಿವ ಓಂ ಪ್ರಕಾಶ್ ರಾಜಭರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರ ಹೇಳಿಕೆಗಳು ಮತ್ತು ಉದ್ದೇಶಗಳನ್ನು ಪ್ರಶ್ನಿಸಿದರು. ʼʼಬಿಜೆಪಿ ಹಲವು ಪಕ್ಷಗಳಲ್ಲಿ ವಿಭಜಿಸಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಶಾಸಕರು ಮತ್ತು ಎಂಎಲ್‌ಸಿಗಳನ್ನು ಬೇಟೆಯಾಡಿತ್ತುʼʼ ಎಂದು ಆರೋಪಿಸಿದ್ದಾರೆ.

ನೋ ಎಂಟ್ರಿ ಎಂದು ಹೇಳಿ ಬಳಿಕ ಟಿಎಂಸಿ ಬಂಡುಕೋರರನ್ನು ಸ್ವಾಗತಿಸಲು ರೆಡಿಯಾದ ಎನ್‌ಸಿಪಿಐ

“ಸಮಾಜವಾದಿ ಪಕ್ಷದ ಬಗ್ಗೆ ಟೀಕೆ ಮಾಡುವ ಮೊದಲು ಓಂ ಪ್ರಕಾಶ್ ರಾಜಭರ್ ತಮ್ಮದೇ ರಾಜಕೀಯ ಬಲ ಮತ್ತು ಸಾಮರ್ಥ್ಯವನ್ನು ಮೊದಲು ಪರಿಶೀಲಿಸಿಕೊಳ್ಳಬೇಕು. ನಿಮ್ಮ ಪಕ್ಷದಲ್ಲಿರುವ ಸಂಪೂರ್ಣ ಕಾರ್ಯಕರ್ತರು ಮತ್ತು ನಾಯಕರ ಸಂಖ್ಯೆ ನಮ್ಮ ಪಕ್ಷದ ಒಂದು ಬ್ಲಾಕ್‌ನಲ್ಲಿರುವ ಕಾರ್ಯಕರ್ತರು ಹಾಗೂ ನಾಯಕರ ಸಂಖ್ಯೆಗೆ ಸಮನಾಗುವುದಿಲ್ಲ” ಎಂದು ಸಮಾಜವಾದಿ ಪಕ್ಷದ ಮುಖಂಡ ಮನೀಶ್ ಸಿಂಗ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ, ತೃಣಮೂಲ ಕಾಂಗ್ರೆಸ್ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತ ನಂತರ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯ ವಿಧಾನಸಭೆಯಲ್ಲಿ ಶಾಸಕರ ಮತ್ತು ಸಂಸತ್ತಿನಲ್ಲಿ ಸಂಸದರ ಬಂಡಾಯ ಟಿಎಂಸಿಯನ್ನು ಹೈರಾಣ ಮಾಡಿದೆ. ಮಹಾರಾಷ್ಟ್ರದಲ್ಲಿ, ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಕೂಡ ವಿಭಜನೆಯ ಊಹಾಪೋಹಗಳನ್ನು ಎದುರಿಸುತ್ತಿದೆ.